ಕಲ್ಯಾಣ ಭಾಗದ ಕಚೇರಿ ಸ್ಥಳಾಂತರ ಚುನಾವಣೆಯಲ್ಲಿ ಮತದಾರರಿಂದ ತಕ್ಕ ಪಾಠ :ಸಿರಗಾಪೂರ ಎಚ್ಚರಿಕೆ

ಕಲಬುರಗಿ:ಮಾ.25: ಕಲ್ಯಾಣ ಕರ್ನಾಟಕ ಪ್ರದೇಶದ ಹಸನಾಪೂರದ ವಿಭಾಗೀಯ ಕಚೇರಿ ಮತ್ತು ಭಾತಂಬ್ರಾ ಉಪ ವಿಭಾಗೀಯ ಕಚೇರಿಗಳು ಸರಕಾರ ಸದ್ದಿಲ್ಲದೆ ಬಾಗಲಕೋಟೆಗೆ ಸ್ಥಳಾಂತರ ಮಾಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತೋಮ್ಮೆ ಮಲತಾಯಿ ಧೋರಣೆಯನ್ನು ಅನುಸರಿಸಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರಕಾರ ನಮ್ಮ ಪ್ರದೇಶದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೆ ನಿರ್ಲಕ್ಷ್ಯ ಮಾಡುತ್ತಿದೆ,ಗಾಯದ ಮೇಲೆ ಬರೆ ಎಂಬಂತೆ ನಮ್ಮ ಪಾಲಿನ ಕಚೇರಿಗಳು ರಾಜಾರೋಷವಾಗಿ ಕಿತ್ತೂರು ಕರ್ನಾಟಕದ ಬಾಗಲಕೋಟೆ ಜಿಲ್ಲೆಗೆ ಸ್ಥಳಾಂತರ ಮಾಡಲಾಗಿದೆ.ಈಗಾಗಲೇ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ಕಲಬುರಗಿ, ರಾಯಚೂರು ಜಿಲ್ಲೆಯಲ್ಲಿದ್ದ ಅನೇಕ ಕಚೇರಿಗಳು ಎತ್ತಂಗಡಿ ಮಾಡಿ ಹುಬ್ಬಳ್ಳಿ ಧಾರವಾಡ ಹಾಗೂ ಇತರೆ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಭಾಗದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಿರುವುದು ಎದ್ದು ಕಾಣುತ್ತದೆ ಎಂದು ಟೀಕಿಸಿರುವ ಅವರು ಈ ಬಗ್ಗೆ ನಾಲ್ಕು ಜಿಲ್ಲೆಗಳ ಒಬ್ಬನೇ ಒಬ್ಬ ಶಾಸಕ ಚಕಾರ ಎತ್ತಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೃಷ್ಣಾ ಭಾಗ್ಯ ಜಲ ನಿಗಮದಡಿ ಬರುವ ಅಚ್ಚುಕಟ್ಟು ಪ್ರದೇಶಾಭಿವೃದ್ಧಿಗೆ ಸಂಬಂಧಿಸಿದ ಹಸನಾಪೂರದ ವಿಭಾಗೀಯ ಕಚೇರಿ ಮತ್ತು ಭಾತಂಬ್ರಾ ಉಪ ವಿಭಾಗೀಯ ಕಚೇರಿ ಕಚೇರಿ ಸ್ಥಳಾಂತರದಿಂದ ಇಲ್ಲಿನ ನೂರಾರು ಉದ್ಯೋಗಗಳು ಕಸಿದುಕೊಂಡತಾಗಿದೆ.ಅನೇಕರು ನಿರುದ್ಯೋಗಿಗಳಾಗಲಿದ್ದಾರೆ.ಕಲ್ಯಾಣ ಹೆಸರಿಟ್ಟು ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡದೆ ಕೇವಲ ದೊಡ್ಡ ಭಾಷಣ ಮಾಡುವ ಮುಖ್ಯಮಂತ್ರಿಗಳು ಕೂಡಲೆ ಈ ಭಾಗದ ಜನರ ಕ್ಷಮೆ ಕೇಳಬೇಕು.ಸ್ಥಳಾಂತರ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.