ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಕಲ್ಯಾಣ ಮಾಡಿ ಇಲ್ಲವೆ ಕಲ್ಯಾಣ ಪ್ರತ್ಯೇಕ ರಾಜ್ಯ ಕೊಡಿ:ದಸ್ತಿ

ಕಲಬುರಗಿ:ಎ.4:ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯ, ನಿರ್ಲಕ್ಷತನ, ಮಲತಾಯಿ ಧೋರಣೆಯನ್ನು ಪ್ರತಿಭಟಿಸಿ ಕಲ್ಯಾಣ ಕರ್ನಾಟಕ ಜನಮಾನಸದ ಪ್ರತೀಕವಾಗಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಇಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಭಾಗವಹಿಸಿದ ಹಿರಿಯ ಮುಖಂಡರು, ಆಯಾ ಕ್ಷೇತ್ರದ ಪರಿಣಿತರು, ಯುವ ಮುಖಂಡರು ಸೇರಿದಂತೆ ಎಲ್ಲರ ಸಲಹೆಗಳನ್ನು ಗಮನಿಸಿ ಸರ್ವಾನುಮತದಿಂದ ಈ ಕೆಳಕಂಡ ನಿರ್ಣಯಗಳನ್ನು ಕೈಗೊಂಡು ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿದ ನಂತರ ಕಲ್ಯಾಣದ ಬದಲಾಗಿ ಅವನತಿ (ಬರ್ಬಾದಿ)ಯ ಕಾರ್ಯಗಳು ನಡೆದಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಇದನ್ನು ಮನಗಂಡು ಸಮಿತಿ ಗಂಭೀರವಾಗಿ ಪರಿಗಣಿಸಿ ತನ್ನ ಪಕ್ಷಾತೀತ ಧೋರಣೆಯಂತೆ ಶುದ್ಧ ರಾಜಕೀಯೇತರ ತಳಹದಿಯ ಮೇಲೆ ಮೊದಲನೇಯ ಹಂತವಾಗಿ ಕಲ್ಯಾಣ ನಡೆ ಜನಪ್ರತಿನಿಧಿಯ ಕಡೆ ಎಂಬ ಹೋರಾಟ ಹಮ್ಮಿಕೊಂಡಿದೆ.
ಇದಕ್ಕೆ ಮೊದಲನೇ ಹಂತವಾಗಿ ನಾಳೆ ದಿನಾಂಕ : 05.04.2021 ರಂದು ಸಂಸದರಾದ ಉಮೇಶ ಜಾಧವರನ್ನು ಭೇಟಿಯಾಗಿ ಕಲ್ಯಾಣ ನಡೆಯ ಹೋರಾಟ ಆರಂಭಿಸಲಾಗುವುದು. ಈಗಾಗಲೇ ಅನೇಕ ಶಾಸಕರು ದಿನಾಂಕ ಸಮಯ ನೀಡುವುದರಿಂದ ನಿರಂತರವಾಗಿ ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಹೋರಾಟ ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು.
ಜನಪ್ರತಿನಿಧಿಗಳ ಕಡೆ ಕಲ್ಯಾಣ ನಡೆ ಹೋರಾಟ ಕಾಲಮಿತಿಯಲ್ಲಿ ಮುಗಿದ ನಂತರ ಎರಡನೆಯ ಹಂತವಾಗಿ ವಿಭಾಗೀಯ ಕೇಂದ್ರ ಕಲಬುರಗಿ ಬಂದ್ ಹೋರಾಟ ವಿನೂತನ ಮಾದರಿಯಲ್ಲಿ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಮ್ಮ ನೋವಿನ ಎಚ್ಚರಿಕೆ ನೀಡಲಾಗುವುದು. ನಂತರದ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಬಂದ್ ಬಗ್ಗೆ ನಿರ್ಧರಿಸಲಾಗುವುದು.
ಸಮಿತಿಯ ನಿರ್ಣಯ ಕೈಗೊಂಡಂತೆ ಪೂಜ್ಯರ, ಜನಪ್ರತಿನಿಧಿಗಳ ಮತ್ತು ಎಲ್ಲಾ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಜನತಾ ಮಹಾಅಧಿವೇಶನ ನಡೆಸಲು ಇದರ ಪೂರ್ವ ಸಿದ್ಧತೆಗೆ ಸರ್ವ ಪಕ್ಷಗಳ ಮುಖಂಡರ ಎಲ್ಲಾ ಕ್ಷೇತ್ರದ ಪ್ರಮುಖರ ಸಂಘ ಸಂಸ್ಥೆಗಳ ಸಂಘಟನೆಗಳ ಮುಖಂಡರ ಸಭೆ ಏಪ್ರಿಲ್ ಎರಡನೆಯ ವಾರದಲ್ಲಿ ನಡೆಸಿ ಮಹಾ ಅಧಿವೇಶನದ ದಿನಾಂಕ ನಿಗದಿ ಮಾಡಲಾಗುವುದು.
ಆಡಳಿತ ರೂಢ ಬಿ.ಜೆ.ಪಿ. ಪಕ್ಷ ಮುಖ್ಯ ಮಂತ್ರಿಗಳ ಮೇಲೆ ಮತ್ತು ಕೇಂದ್ರದ ಮೇಲೆ ಒತ್ತಡ ತರಲು ಸರ್ವ ಪಕ್ಷಗಳ ನಿಯೋಗ ಕರೆದುಕೊಂಡು ಹೋಗಲು ಬದ್ಧತೆ ಪ್ರದರ್ಶಿಸಲು ಕಲ್ಯಾಣ ಕರ್ನಾಟಕದ ಜನಮಾನಸದ ವತಿಯಿಂದ ಒತ್ತಾಯಿಸ ಲಾಗುವುದು.
ಮೊದಲನೆಯ ಹಂತವಾಗಿ ಹಮ್ಮಿಕೊಂಡ ಈ ನಾಲ್ಕು ಹೋರಾಟಗಳಿಗೆ ಸರಕಾರದ ಧೋರಣೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹೋರಾಟಗಳನ್ನು ಕಲ್ಯಾಣ ಕರ್ನಾಟಕದ ಎಲ್ಲಾ ಪಕ್ಷದ ಜನಪ್ರತಿನಿಧಿಗಳ, ಮುಖಂಡರ ಆಯಾ ಸಂಘ ಸಂಸ್ಥೆಗಳ ಸಂಘಟನೆಗಳ ಮುಖಂಡರ ಮತ್ತು ಎಲ್ಲಾ ಕ್ಷೇತ್ರದ ಪ್ರಮುಖರ ಬೆಂಬಲ, ಸಲಹೆ ಸಹಕಾರದಂತೆ ನಿರಂತರ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಈ ಮಹತ್ವದ ಸಭೆಯಲ್ಲಿ ಸಮಿತಿಯ ಮುಖಂಡರು ಮತ್ತು ಆಯಾ ಕ್ಷೇತ್ರದ ಪ್ರಮುಖರಾದ ಮನೀಷ್ ಜಾಜು, ಶಿವಲಿಂಗಪ್ಪ ಬಂಡಕ, ಶಾಮ್ ನಾಟಿಕಾರ, ರಾಜೇಶ ಶಿವಶರಣ, ಅಬ್ದುಲ ರಹೀಮ್, ಶಾಂತಪ್ಪ ಕಾರಭಾಸಗಿ, ಬಾಬುರಾವ ಗಂವಾರ್, ಬಸವರಾಜ, ಪೆÇ್ರ. ಬಾಬುರಾವ ಶೇರಿಕಾರ, ಸಂತೋಷಕುಮಾರ ಜವಳಿ, ಮುಕ್ತಾರೊದ್ದೀನ್, ಸಂಧ್ಯಾರಾಜ, ಅಸ್ಲಂ ಚೌಂಗೆ, ವಿಶಾಲದೇವ, ಸಾಬೀರ್, ಜ್ಞಾನಮಿತ್ರ ಸ್ಯಾಮ್ಯುವೆಲ್, ಮಿರಾಜೊದ್ದೀನ್, ರಾಜು ಜೈನ್, ಚಂದ್ರಶೇಖರ ಮೇಕಿನ್, ನಿಂಗಣ್ಣ ಉದ್ದನೂರ, ಭಗವಂತರಾವ ಪಾಟೀಲ್, ವೀರೇಶ ಪುರಾಣಿಕ್, ಮಹ್ಮದ ಇಸ್ಮಾಯಿಲ್, ಮಾಲಿಪಾಟೀಲ್, ಅಮರನಾಥ, ನಾಗೇಶ್ವರ, ಮಲ್ಲಪ್ಪ ಬಿ. ಸುರಪುರ, ಅಣ್ಣಾರಾವ ಹೆಬ್ಬಾಳ, ಪ್ರಶಾಂತ ಸಿಂಪಿ, ರಿಜ್ವಾನ ಸಿದ್ದಿಖಿ, ಚಂದ್ರಕಾಂತ ಸ್ವಾಮಿ, ಮುಂತಾದವರು ತಮ್ಮ ವಿಚಾರವನ್ನು ವಿವರವಾಗಿ ಮಂಡಿಸಿದರು. ಈ ಸಂದರ್ಭದಲ್ಲಿ ನೂರಾರು ಜನ ಕ್ರಿಯಾಶೀಲ ಸದಸ್ಯರು ಭಾಗವಹಿಸಿದರು.