
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.17: ಸರ್ದಾರ್ ವಲ್ಲಭಾಯಿ ಪಟೇಲ್, ನೆಹರೂ, ಬಲದೇವ ಸಿಂಗ್, ಅಯ್ಯಂಗಾರ್‍ರಂತಹ ಅನೇಕ ವ್ಯಕ್ತಿಗಳ ಅವಿರತ ಪ್ರಯತ್ನದಿಂದ ನಿಜಾಮರ ಆಳ್ವಿಕೆಯಲ್ಲಿದ್ದ ಕಲ್ಯಾಣ ಕರ್ನಾಟಕ ಪ್ರಾಂತವು ಭಾರತ ಒಕ್ಕೂಟ ಸೇರ್ಪಡೆಯಾಗಲು ಸಾಧ್ಯವಾಯಿತು ಎಂದು ಕುಲಪತಿಗಳಾದ ಪ್ರೊ. ಸಾಹೇಬ್ ಅಲಿ ನಿರಗುಡಿ ಅವರು ಹೇಳಿದರು.
ಹೈದ್ರಾಬಾದ್ (ಕಲ್ಯಾಣ) ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೊತ್ತಿದ್ದ ಕಲ್ಯಾಣ-ಕರ್ನಾಟಕ ಭಾಗಕ್ಕೆ ವಿಶೇಷ ಮೀಸಲಾತಿ ಕಲ್ಪಿಸಬೇಕೆಂದು ವೈಜನಾಥ ಪಾಟೀಲರು ಧ್ವನಿ ಎತ್ತಿದರು. ಇದಕ್ಕೆ ಪೂರಕವಾಗಿ ಈ ಭಾಗದ ರಾಜಕೀಯ ಧುರೀಣರಾದ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅವರು ಸಂವಿಧಾನಾತ್ಮಕ ಅನುಮೋದನೆ ಪಡೆದುಕೊಳ್ಳಲು ಶ್ರಮಿಸಿದರು ಎಂದು ಹೇಳಿದರು.
ವಿಶ್ವವಿದ್ಯಾಲಯದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ರೂ. 100 ಕೋಟಿ ಅನುದಾನದ ಪ್ರಸ್ತಾವನೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸಲ್ಲಿಸಲು ಸಿದ್ಧತೆ ನಡೆದಿದೆ. ಪ್ರಾದೇಶಿಕ ಅಸಮಾನತೆ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವಿಜಯಕುಮಾರ್ ಮಾತನಾಡಿ, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಎಂದು ಪ್ರಾಂತವಾರು ವಿಭಜಿಸದೆ ಅಖಂಡ ಕರ್ನಾಟಕ ಎಂಬ ನೆಲೆಗಟ್ಟಿನಲ್ಲಿ ಕನ್ನಡಿಗರು ಯೋಚಿಸಿದಾಗ ರಾಜ್ಯದ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆ. 1953ರಲ್ಲಿ ಫಜಲ್ ಅಲಿ ಆಯೋಗ ನೀಡಿದ ವರದಿ ಆಧರಿಸಿ ಈ ಭಾಗವನ್ನು ಹಿಂದುಳಿದ ಪ್ರದೇಶ ಎಂದು ಗುರುತಿಸಲಾಯಿತು.
ನಂಜುಂಡಪ್ಪ ಸಮಿತಿ ಸದಸ್ಯರಾಗಿದ್ದ ಈ ಭಾಗದ ಶೇಷಾದ್ರಿ, ಅಬ್ದುಲ್ ಅಜೀಜ್ ಅವರು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಜಿಲ್ಲೆಗಳಾಗಿವೆ ಎಂದು ವರದಿಯಲ್ಲಿ ಪ್ರಸ್ತಾಪಿಸಿದ್ದರು ಎಂದು ನೆನೆದರು.
ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಕೆಕೆಆರ್‍ಡಿಬಿಯಿಂದ ವಾರ್ಷಿಕ ವರದಿ ಸಲ್ಲಿಸುವುದು, ಈ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗಾವಕಾಶ ಕಲ್ಪಿಸುವ ಚಿಂತನೆ ಸರ್ಕಾರದ ಹಂತದಲ್ಲಿ ಆಗಬೇಕು ಎಂದು ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ರಾಜ್ಯ ನಿರ್ದೇಶಿತ ಸದಸ್ಯರಾಗಿರುವ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಜೇಂದ್ರ ಪ್ರಸಾದ್ ಮಾತನಾಡಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಕೆಕೆಆರ್‍ಡಿಬಿಗೆ ರೂ. 500 ಕೋಟಿ ಅನುದಾನ ಮೀಸಲಿಟ್ಟಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಪ್ರೊ. ರಮೇಶ್ ಓಲೇಕಾರ್, ಕಾರ್ಯಕ್ರಮ ಸಂಯೋಜಕರಾದ ಡಾ. ತಿಪ್ಪೇಸ್ವಾಮಿ ಇದ್ದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.