ಕಲ್ಯಾಣ ಕರ್ನಾಟಕ ವಿಮೋಚನೆಗಾಗಿ ಹೋರಾಡಿದವರಿಗೆ ಸ್ಮರಿಸೋಣ: ಸಿಂಪಿ

ಕಲಬುರಗಿ,ಸೆ.17: ಕಲ್ಯಾಣ ಕರ್ನಾಟಕ ವಿಮೋಚನೆಗಾಗಿ ಈ ಭಾಗದ ಬಹಳ ಜನರು ಹೋರಾಡಿದ್ದಾರೆ ಹಾಗೂ ಜೀವ ತೆತ್ತಿದ್ದಾರೆ, ಅವರೆಲ್ಲರಿಗೂ ಇಂದು ಸ್ಮರಿಸೋಣ ಮತ್ತು ಅವರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯೋಣ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಉದಯೋನ್ಮೂಖ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ ವೀರಭದ್ರ ಸಿಂಪಿ ಹೇಳಿದರು.

ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಅಂಗವಾಗಿ ಭಾನುವಾರದಂದು ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ ವಿಭಾಗ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶರಣಬಸವೇಶ್ವರ ಸಂಸ್ಥಾನ ರಜಾಕಾರರ ದಾಳಿಗೆ ನಲುಗಿದಾಗ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರು ಇಲ್ಲೇ ಇದ್ದುಕೊಂಡು ದಿನನಿತ್ಯ ಪೂಜೆ ಪುನಸ್ಕಾರ ನೆರವೇರಿಸುತ್ತಾ ರಜಾಕಾರರಿಗೆ ಎದೆಯೊಡ್ಡಿ ನಿಂತಿದ್ದರು. ಇವತ್ತಿಗೂ ನಾನು ಬಹಳ ಚಿಂತಾಕ್ರಾಂತನಾದಾಗ ಪೂಜ್ಯ ಡಾ. ಅಪ್ಪಾಜಿಯವರ ಬಳಿ ಹೋಗಿ ಸಮಸ್ಯೆ ಹೇಳಿಕೊಳ್ಳುತ್ತೇನೆ, ಅದನ್ನು ಅವರು ಬಗೆಹರಿಸಿ ಯಾವಾಗಲೂ ಹುರಿದುಂಬಿಸುತ್ತಾರೆ. ನಾನು ಈ ಮಟ್ಟಿಗೆ ಬೆಳೆಯಲು ಪೂಜ್ಯ ಡಾ. ಅಪ್ಪಾಜಿ ಮತ್ತು ಕೆಲವೇ ಕೆಲವು ಪತ್ರಕರ್ತರು ಕಾರಣ. ಪೂಜ್ಯ ಅಪ್ಪಾಜಿಯವರಿಗೆ ನಾನು ಎಂದೆಂದಿಗೂ ಚಿರಋಣಿ ಎಂದರು. 

ವಿಮೋಚನಾ ದಿನಾಚರಣೆಯ ಇತಿಹಾಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಿಂಪಿ, ಈ ಭಾಗದ ವಿಮೋಚನೆಗಾಗಿ ಲಿಂಗೈಕ್ಯ ಪೂಜ್ಯ ದೊಡ್ಡಪ್ಪ ಅಪ್ಪಾಜಿ, ಸರ್ದಾರ ಶರಣಗೌಡ ಇನಾಮದಾರ, ಸೊನ್ನ ಮಠದ ಶಿವಾನಂದ ಸ್ವಾಮೀಜಿ ಹಾಗೂ ಭಾಲ್ಕಿ ಪಟ್ಟದ್ದೇವರು ಹೋರಾಟಗಾರರಿಗೆ ಧೈರ್ಯ ತುಂಬಿ ಹುರಿದುಂಬಿಸಿದ್ದು ಅವಿಸ್ಮರಣೀಯ. ವಿಮೋಚನೆಯಲ್ಲಿ ಆರ್ಯಸಮಾಜದ ಕೊಡುಗೆಯೂ ಅತಿ ಮಹತ್ವವಾಗಿತ್ತು ಎಂದು ತಿಳಿಸಿದರು.

ಭಾರತ ದೇಶ 1947ರಲ್ಲಿ ಸ್ವತಂತ್ರವಾದರೂ ಆಗಿನ ಹೈದ್ರಾಬಾದ್ ಕರ್ನಾಟಕ ನಿಜಾಮನ ಕಪಿಮುಷ್ಠಿಯಿಂದ ಹೊರಬರಲು ಒಂದು ವರ್ಷ ಕಾಯಬೇಕಾಯಿತು. ಆಗಿನ ಹೈದ್ರಾಬಾದ್ ಅರಸು ನಿಜಾಮನು ಹೈದ್ರಾಬಾದ್ ಪ್ರಾಂತ್ಯವನ್ನು ಸ್ವತಂತ್ರವಾಗಿ ಉಳಿಸಿಕೊಳ್ಳುವುದಾಗಿ ಘೋಷಿಸಿದ್ದ, ಆಗ ಕೆಲ ಹೋರಾಟಗಾರರು ರಜಾಕಾರರ ವಿರುದ್ಧ ಸಶಸ್ತ್ರ ಹೋರಾಟ ಆರಂಭಿಸಿದರು. ಅಸಂಖ್ಯಾತ ಸ್ವಾತಂತ್ರ್ಯ ಪ್ರೇಮಿಗಳು, ದೇಶಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ತ್ರಿವರ್ಣ ಧ್ವಜದೊಂದಿಗೆ ಬೀದಿಗಿಳಿದರು ಆಗ ಅವರನೆಲ್ಲಾ ಬಂಧಿಸಿ ಜೈಲಿಗಟ್ಟಲಾಯಿತು. ಕೆಲವರಿಗೆ ಗುಂಡಿಕ್ಕಿ ಕೊಂದರು. ಬಹಳಷ್ಟು ಕುಟುಂಬಗಳು ಬೀದಿ ಪಾಲಾದವು ಎಂದು ವೀರಭದ್ರ ಸಿಂಪಿ ಆವೇಶಭರಿತವಾಗಿ ನುಡಿದರು.

ಬೀದರ ಜಿಲ್ಲೆಯ ಗೋರ್ಟಾ ಗ್ರಾಮದಲ್ಲಿ ಅಮಾಯಕ ಜನರ ಹತ್ಯೆ ನಡೆಯಿತು. ಕೆಲವರನ್ನು ಬಂಧಿಸಿ ಜೈಲಿಗಟ್ಟಿ ಅಲ್ಲೆ ಹತ್ಯೆ ಮಾಡಲಾಯಿತು. ಆಗ ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ ವಲ್ಲಭಭಾಯಿ ಪಟೇಲ ಅವರು ಸೇನಾ ಕಾರ್ಯಚರಣೆ ನಡೆಸುವ ಮೂಲಕ ರಜಾಕಾರರ ಹುಟ್ಟಡಗಿಸಿ ನಿಜಾಮನನ್ನು ಶರಣಾಗುವಂತೆ ಮಾಡಿ ಅವನ ದುರಾಡಳಿತದಿಂದ ಮುಕ್ತಗೊಂಡು ಹೈದ್ರಾಬಾದ್ ಕರ್ನಾಟಕ ಭಾರತ ಒಕ್ಕೂಟಕ್ಕೆ ಸೇರುವಂತೆ ಮಾಡಿದ್ದರು ಎಂದರು.

ಮರಾಠವಾಡಾ ಹಾಗೂ ತೆಲಂಗಾಣದಂತೆ ನಮ್ಮ ಕಲ್ಯಾಣ ಕರ್ನಾಟಕ ಕೂಡಾ ಅಭಿವೃದ್ಧಿ ಹೊಂದದೆ ಇರುವುದು ವಿಪರ್ಯಾಸ. ಇಂದಿಗೂ ಕಲ್ಯಾಣ ಕರ್ನಾಟಕ ಪ್ರದೇಶ ಹಿಂದುಳಿಯಲು ನಮ್ಮ ಮನಸ್ಥಿತಿಯೇ ಕಾರಣ ಏಕೆಂದರೆ ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿದೆ. ಮುಂದೆ ನಾವೆಲ್ಲರೂ ಒಂದಾಗಿ ಈ ದೇಶದ ನಾಡಿನ ಒಳಿತಿಗಾಗಿ ಶ್ರಮಿಸೋಣ ಎಂದು ಭಾವುಕರಾಗಿ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣಬಸವ ವಿಶ್ವವಿದ್ಯಾಯದ ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಹೈದ್ರಾಬಾದ್ ಕರ್ನಾಟಕ ವಿಮೋಚನೆ ಹೋರಾಟದಲ್ಲಿ ರಜಾಕಾರರ ವಿರುದ್ಧ ಹೋರಾಡುವಲ್ಲಿ ಶರಣಬಸವೇಶ್ವರ ಸಂಸ್ಥಾನ ಮಂಚೂಣಿಯಲ್ಲಿತ್ತು. ರಜಾಕಾರರು ಸಂಸ್ಥಾನದ ಮೇಲೆ ದಾಳಿ ಮಾಡಿದಾಗ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರು ಎದೆಗುಂದದೆ ಎದುರಿಸಿದ್ದರು. ಆಗ ಮಹಾತ್ಮಾ ಗಾಂಧೀಜಿ ಸಂಸ್ಥಾನಕ್ಕೆ ಭೇಟಿ ಕೊಟ್ಟಿದ್ದು ಇತಿಹಾಸ.
ನಮ್ಮಲ್ಲಿ ಚಿನ್ನ ಮತ್ತು ಕಬ್ಬಿಣದ ಅದಿರಿನಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದೇವೆ. ನಾವು ಅದನ್ನು ಅಭಿವೃದ್ಧಿಯಲ್ಲಿ ಬಳಸಬೇಕೆಂದು ಸಲಹೆ ನೀಡಿದರು. ನಮ್ಮಲ್ಲಿ ಒಳ್ಳೆಯ ಗುಣಮಟ್ಟದ ಲೈಮ್ ಸ್ಟೋಮ್ ಲಭ್ಯವಿದ್ದ ಕಾರಣ ಅನೇಕ ಸಿಮೆಂಟ್ ಫ್ಯಾಕ್ಟರಿಗಳು ತಲೆಯೆತ್ತಿವೆ ಎಂದು ಹೇಳಿದರು.
ನಾವೆಲ್ಲರೂ ಮುಂದೆ ಬರಬೇಕಾದರೆ ಒಗ್ಗಟ್ಟಾಗಿರಬೇಕು. ಒಗ್ಗಟ್ಟಿನ ಹಾಗೂ ತಿಳುವಳಿಕೆಯ ಕೊರತೆಯಿಂದ ಬಹಳ ಕುಟುಂಬಗಳು ನಾಶವಾಗುತ್ತಿವೆ. ಭಾರತ ಸಂಪತ್ಭರಿತ ದೇಶವಾಗಿದೆ ಆದರೂ ನಾವು ಹಿಂದುಳಿದಿದ್ದೇವೆ. ಆದ್ದರಿಂದ ನಾವೆಲ್ಲರೂ ಒಗ್ಗಟ್ಟಿನಿಂದ ತಲೆಯೆತ್ತಿ ನಿಲ್ಲಬೇಕೆಂದರು.

ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ. ವಿ. ಡಿ ಮೈತ್ರಿ, ಕನ್ನಡ ವಿಭಾಗದ ಡಾ. ಕಲ್ಯಾಣರಾವ ಪಾಟೀಲ ವೇದಿಕೆ ಮೇಲಿದ್ದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶ್ರೀ ಟಿ. ವಿ. ಶಿವಾನಂದನ್ ಅವರು ಅತಿಥಿಗಳಿಗೆ ಪರಿಚಯಿಸಿದರು. ವಿದ್ಯಾರ್ಥಿಗಳಾದ ನಾಗಲಿಂಗಯ್ಯ ನಿರೂಪಿಸಿದರು. ಅಮರ ಸ್ವಾಗತಿಸಿದರೆ, ಅಶ್ವಿನಿ ವಂದಿಸಿದರು.