ಕಲ್ಯಾಣ ಕರ್ನಾಟಕ ಮುಕ್ತಿ ಸಂಘರ್ಷದ ಯಾತ್ರೆ

ರಾಯಚೂರು:ನಮ್ಮ ಭಾರತ ದೇಶದ ಸಂಸ್ಕೃತಿ, ಪರಂಪರೆ ,ಇತಿಹಾಸ, ತತ್ವಜ್ಞಾನ, ಜೀವನಗಳ ಆದರ್ಶ ಇವುಗಳ ಹಿರಿಮೆ ಪ್ರಪಂಚದಲ್ಲಿ ಯಾವುದಕ್ಕೂ ಸರಿಸಾಟಿ ಇಲ್ಲದ್ದು. ಆದರೆ ಇಂದು ನಮ್ಮ ರಾಷ್ಟ್ರದ ಆಗುಹೋಗುಗಳ ಬಗೆಗೆ ಒಂದಷ್ಟು ಉದಾಸೀನತೆ, ಕ್ರಿಯಾಶೂನ್ಯತೆ , ವಿಫಲತೆಗಳು ತಾಂಡವಾಡುತ್ತಿವೆ. ನಮ್ಮ ದೇಶದ ಯುವ ಪೀಳಿಗೆಗೆ ಸ್ಪೂರ್ತಿ, ಉತ್ಸಾಹ ಹಾಗೂ ಭಾರತೀಯತೆಯ ಆದರ್ಶವನ್ನು ಎತ್ತಿ ಹಿಡಿಯುವುದರ ಬಗ್ಗೆ ವಿಚಾರಗಳನ್ನು ತಿಳಿಸುವುದು ತೀರ ಅನಿವಾರ್ಯ ಹಾಗೂ ತುರ್ತು ಕರ್ತವ್ಯವಾಗಿದೆ. ಭಾರತದ ಸ್ವತಂತ್ರ ಚಳುವಳಿಯಷ್ಟೇ ತೇಜಸ್ವಿಯು, ಪ್ರೇರಣದಾಯಕವೂ ನಮ್ಮ ಹೈದರಾಬಾದ್ ವಿಮೋಚನೆಯ ’ವೀರಗಾಥೆ ’ಅಂದರೆ “ಕಲ್ಯಾಣ ಕರ್ನಾಟಕದ” ಉದಯ.
” ಗುರು ಗೋವಿಂದ ಸಿಂಹ”ರ ಹಾಡಿನ ಕಲ್ಪನೆಯಂತೆ ಗುಬ್ಬಚ್ಚಿಯಂತೆ ಅಸಹಾಯಕ, ಪರಮ ಸಾತ್ವಿಕವು, ನಿರಾಯುಧವು ಆಗಿದ್ದ ಅಂದಿನ ಹೈದರಾಬಾದ್ ನಿಜಾಮೀನ ಅಧೀನದಲ್ಲಿದ್ದ ಪ್ರಜೆಗಳಿಗೆ ಅದೆಂತಹ ಶಕ್ತಿ ಬಂದೆಂತಂದರೆ ಗಿಡುಗಗಳಂತಿದ್ದ ಹೈದರಾಬಾದಿನ ನಿಜಾಮಶಾಹಿಯ ವಿರುದ್ಧ ಯಶಸ್ವಿಯಾಗಿ ಆಂದೋಲನವನ್ನು ಅದೇ ತಾನೇ ಸ್ವತಂತ್ರ ಹೊಂದಿದ ಭಾರತ ದೇಶದ ಪ್ರಜೆಗಳು ನಡೆಸಿದರು.
೧೯೪೭ರ ಆಗಸ್ಟ್ ೧೫ರಂದು ದೇಶಾದ್ಯಂತ ಸ್ವತಂತ್ರ ಭಾರತದ ತ್ರಿವರ್ಣ ಧ್ವಜ ಹಾರಾಡತೊಡಗಿದ್ದರೆ ಹೈದರಾಬಾದ್ ಪ್ರಾಂತದಾದ್ಯಂತ ಆತಂಕದ ಕಾರ್ಮೋಡಗಳು ಸುತ್ತುವರೆದಿದ್ದವು. ಬ್ರಿಟಿಷರ ಗುಲಾಮರಾಗಿ, ನಂಬಿಕಸ್ತನಾಗಿ ಸಹಾಯ ಮಾಡುತ್ತಾ ಆಡಳಿತವನ್ನು ನಡೆಸುತ್ತಿದ್ದ ಹೈದರಾಬಾದ್ ಪ್ರಾಂತದ ನಿಜಾಮ ಮೀರ್ ಉಸ್ಮಾನ್ ಅಲೀಖಾನ್ ಹೈದ್ರಾಬಾದ್ ಪ್ರಾಂತವನ್ನು ಸ್ವತಂತ್ರ ಮತಿಯ ರಾಜ್ಯವೆಂದು ಘೋಷಿಸಿಕೊಂಡನು. ಒಂದು ಮತಕ್ಕೆ ಸೇರಿದ ರಾಜ್ಯ ಎಂದು ಘೋಷಿಸಿಕೊಳ್ಳುವ ತೀವ್ರ ಪ್ರಯತ್ನವನ್ನು ನಡೆಸಿದ. ಅವನ ಈ ಕಾರ್ಯವು ಹೈದರಾಬಾದ್ ಸಂಸ್ಥಾನದಲ್ಲಿ ಶೇಕಡ ೮೬ರಷ್ಟಿದ್ದ ಅನ್ಯಧರ್ಮೀಯರ ಅಸಮಾಧಾನಕ್ಕೆ ಕಾರಣವಾಯಿತು. ತನ್ನ ಪ್ರಾಂತ್ಯದಲ್ಲಿ ನೆಲೆಗೊಳಿಸಿದ ಅನ್ಯಧರ್ಮೀಯರನ್ನು ನಿಜಾಮನು ಹೊರಗೆ ಓಡಿಸುವುದಕ್ಕಾಗಿ “ಮಜಲಿಸೆ ಇತ್ತೇಹಾದುಲ್ ಮುಸಲಮೀನ”ಎಂಬ ಒಂದು ಧರ್ಮದ ಸಂಘಟನೆಗೆ ಪ್ರೋತ್ಸಾಹ ನೀಡಿದ. ಅದುವೇ ರಜಾಕಾರರ ಪಡೆ. ಈ ಪಡೆಯು ಹೈದ್ರಾಬಾದ್ ಪ್ರಾಂತದಲ್ಲಿ ಅನ್ಯಧರ್ಮೀಯರನ್ನೇ ಗುರಿಯಾಗಿಸಿಕೊಂಡು ವಿಕೃತವಾಗಿ ದಾಳಿ ನಡೆಸಿ ಅವರ ಮನೆಮಠಗಳಿಗೆ ಬೆಂಕಿ ಹಚ್ಚಿತು. ಸಾರ್ವಜನಿಕರ ಆಸ್ತಿ ಪಾಸ್ತಿಗಳನ್ನು ಲೂಟಿ ಮಾಡಿತು. ಮೇಲು ಕೀಳೆನ್ನದೆ ,ಜಾತಿ ಧರ್ಮಗಳೆನ್ನದೆ, ಮಕ್ಕಳು ಮಹಿಳೆಯರು ಎನ್ನದೆ ಅತ್ಯಾಚಾರವೆಸಗಿ ತಮಗೆ ಅಡ್ಡ ಬಂದವರನ್ನು ದಾರಿಯಲ್ಲಿ ಎದುರಾದವರನ್ನು ವಿಕೃತವಾಗಿ ಕೊಚ್ಚಿಕೊಂದು ಹಾಕುತ್ತಿತ್ತು. ಸುಮಾರು ಎರಡು ಶತಮಾನಗಳಿಂದ ನಿಜಾಮೀನ ಆಳ್ವಿಕೆಗೆ ಒಳಪಟ್ಟಿದ್ದ ಹೈದರಾಬಾದಿನ ಜನತೆ ನಿಜಾಮನು ಆಡಳಿತಗಾರರ ಬೆಂಬಲದಿಂದ ನಡೆಸುತ್ತಿದ್ದ ಸಣ್ಣಪುಟ್ಟ ಆಕ್ರಮಣಗಳಿಗೆ, ದುರ್ವರ್ತನೆಗಳಿಗೆ ಒಗ್ಗಿಕೊಂಡು ಬಿಟ್ಟಿದ್ದರು. ಅನ್ಯ ಧರ್ಮದ ಸಾಮಾನ್ಯ ಪ್ರಜೆಗಳು ನೀಡುವ ದೂರುಗಳಿಗೆ ಯಾವುದೇ ರೀತಿಯಲ್ಲಿ ನ್ಯಾಯ ದೊರಕುವ ಸಂಭಾವನೆ ಇರಲೇ ಇಲ್ಲ.
ಹೈದ್ರಾಬಾದಿನ ಪ್ರಾಂತ್ಯದ ಸ್ವಾತಂತ್ರ್ಯದ ಪ್ರಶ್ನೆ ನಿಜಾಮನಿಗೆ ಎಷ್ಟು ಮಹತ್ವದ್ದಾಗಿತ್ತೋ, ಸ್ವತಂತ್ರ ಭಾರತ ದೇಶದ ಪ್ರಜೆಗಳಿಗೆ ಹೈದರಾಬಾದ್ ಪ್ರಾಂತವನ್ನು ಭಾರತದಲ್ಲಿ ವಿಲೀನಗೊಳಿಸುವುದು ಅಷ್ಟೇ ಮಹತ್ವದ್ದಾಗಿತ್ತು. ಭಾರತವನ್ನು ಸ್ವತಂತ್ರಗೊಳಿಸಲು ಹತ್ತಿದ ಸ್ವಾತಂತ್ರ್ಯದ ಕಿಡಿ ಭಾರತವನ್ನು ಸ್ವತಂತ್ರವನ್ನಾಗಿಸಿ ಕೊಂಡಿತು. ಆದರೆ ಹೈದರಾಬಾದ್ ಪ್ರಾಂತದ ಜನತೆಗೆ ಅದು ಗಗನ ಕುಸುಮವಾಗಿತ್ತು ಏಕೆಂದರೆ ಹೈದರಾಬಾದಿನ ನಿಜಾಮನು ತನ್ನ ಪ್ರಾಂತ್ಯವನ್ನು ಸ್ವತಂತ್ರ ಭಾರತದೊಳಗೆ ವಿಲೀನಗೊಳಿಸಲು ಒಪ್ಪಲಿಲ್ಲ. ಸ್ವಾತಂತ್ರ್ಯದ ಕಿಡಿಯು ಇನ್ನೂ ಹಾಗೆಯೇ ಇತ್ತು, ಸಹಾಯಕರು ನಿಶಸ್ತ್ರರು ಆಗಿದ್ದರೂ ಕೂಡ ಹೈದರಾಬಾದ್ ಪ್ರಾಂತದ ಜನತೆ ’ಖಾಸಿಂ ರಜ್ವಿ’ ನಾಯಕತ್ವದ ’ರಜಾಕಾರ್ ಸೈನ್ಯ ( ಮಿಮ್ಮ)’ದ ವಿರುದ್ಧ, ಸರಕಾರಿ ಅಧಿಕಾರಿಗಳ ವಿರುದ್ಧ ಅತ್ಯಂತ ತೀವ್ರವಾಗಿ ಪ್ರತಿರೋಧವನ್ನು ಒಡ್ಡಿ ನಿಜಾಮನ ನಿದ್ದೆಗೆಡಿಸಿದರು. ಪ್ರಜೆಗಳು ಸಂಘಟಿತರಾಗಿ ಮೈಕೊಡವಿಕೊಂಡು ನಿಂತು ಶೌರ್ಯ ಪರಾಕ್ರಮಗಳಿಂದ, ತ್ಯಾಗ ಬಲಿದಾನಗಳಿಂದ ಶತಶತಮಾನಗಳಿಂದ ದುರಹಂಕಾರದಿಂದ ಮೆರೆದಿದ್ದ ನಿಜಾಮಶಾಹಿಯ ಆಳ್ವಿಕೆಯನ್ನು ಕೊನೆಗಾಣಿಸಿದರು. ಹೈದ್ರಾಬಾದ್ ಪ್ರಾಂತದ ಮುಕ್ತಿ ಆಂದೋಲನ ಇಂದಿನ ಯುವ ಜನತೆಗೆ ಪ್ರೇರಣಾದಾಯಕ. ಇದರ ಇತಿಹಾಸವನ್ನು ಪರಿಚಯಿಸುವ ಮೂಲಕ ಸ್ವಾತಂತ್ರ್ಯದ ಮೌಲ್ಯಗಳನ್ನು ತಿಳಿಸುವ ಪ್ರಯತ್ನವನ್ನು ಮಾಡಬೇಕಾಗಿದೆ. ನಮ್ಮ ಹಿರಿಯರು ಕಷ್ಟಪಟ್ಟು ರಕ್ತವನ್ನು ಸಿಂಚಿಸಿ ಗಳಿಸಿಕೊಟ್ಟ ಸ್ವತಂತ್ರವನ್ನು ರಕ್ಷಿಸಿಕೊಳ್ಳುವುದು ನಮ್ಮ ಮೊದಲನೆಯ ಕರ್ತವ್ಯ ಎಂಬ ಪ್ರಜ್ಞೆಯನ್ನು ಯುವ ಪೀಳಿಗೆಯಲ್ಲಿ ಮೂಡಿಸಬೇಕಾಗಿದೆ .ಇದರ ಮೂಲಕ ಜಾತಿ ಮತಗಳೆನ್ನದೆ ಮೇಲು ಕೀಳೆನ್ನದೆ ಬಡವರು ಶ್ರೀಮಂತರು ಎನ್ನದೆ ಒಂದು ಒಳ್ಳೆಯ ಶೋಷಣಾ ಮುಕ್ತ ನಿರ್ಭಯ ಸಮಾಜವನ್ನು ಕಟ್ಟಬೇಕಾಗಿದೆ.
೧೯೪೮ ರ ಕೊನೆಗೆ ನಿಜಾಮನು ತಾನು ರಜಾಕಾರರ ಬಂಧನದಲ್ಲಿ ಸಿಲುಕಿರೋದಾಗಿ ಅಸಹಾಯಕನಾಗಿ ಇರುವುದಾಗಿ ಸ್ವತಂತ್ರಭಾರತದ ಎದುರು ಹೇಳುತ್ತಲೇ , ಸಹಾಯಕ್ಕಾಗಿ ಕೈ ಚಾಚುವ ನಾಟಕವನ್ನು ಆಡುತ್ತಾ ಜಗತ್ತಿನ ಕಣ್ಣಿಗೆ ಮಣ್ಣೆರಚಲು ಯತ್ನಿಸಿದ. ತದನಂತರ ನನಗೆ ಸ್ವತಂತ್ರ ಸಾರ್ವಭೌಮ ರಾಜನಾಗಿ ಉಳಿಯುವ ಎಲ್ಲಾ ಅಧಿಕಾರಗಳು ಇವೆ ಎಂದು ಯಾವುದೇ ಕಾರಣಕ್ಕೂ ತಾನು ಸ್ವತಂತ್ರ ಭಾರತದಲ್ಲಿ ತನ್ನ ರಾಜ್ಯವನ್ನು ವಿಲೀನಗೊಳಿಸುವದಿಲ್ಲವೆಂದು ಮತಾಂಧನಾಗಿಯು, ನಿರಂಕುಶವಾಗಿಯೂ , ಮಹತ್ವಾಕಾಂಕ್ಷಿಯಾಗಿಯೂ ಆದೇಶವನ್ನು ಹೊರಡಿಸಿದ. ಈ ಘಟನೆಯಿಂದ ೧೯೪೭- ೪೮ ರಲ್ಲಿ ಹೈದರಾಬಾದ್ ಪ್ರಾಂತ್ಯದಾದ್ಯಂತ ಹಾಹಾಕಾರ ವೆದ್ದಿತು. “ಕಾಟೊ,ಲೂಟೋ, ಔರ್ ಬಾಟೊ” ಅಂದಿನ ರಜಾಕಾರ ಸೈನ್ಯದ ಮುಖ್ಯ ವಿಕೃತ ಮನೋಭಾವದ ಉದ್ದೇಶವಾಗಿತ್ತು.
ಆಗಸ್ಟ್ ೧೫ ೧೯೪೭ ರಲ್ಲಿ ಹೈದರಾಬಾದಿನ ಸುಲ್ತಾನ್ ಬಜಾರ್ ನಲ್ಲಿ ನಸುಗಿನ ಮೂರು ಗಂಟೆಯ ಸಮಯಕ್ಕೆ ಭಾರತದ ತ್ರಿವರ್ಣ ಧ್ವಜವನ್ನು “ಸ್ವಾಮಿ ರಮಾನಂದ ತೀರ್ಥರು” ಡಾಕ್ಟರ್ ಮೇಲುಕೋಟೆಯವರು ಹಾರಿಸುವ ಮೂಲಕ ಚಳುವಳಿಯನ್ನು ಪ್ರಾರಂಭಿಸಿದರು. ರಾಯಚೂರಿನಲ್ಲಿ ಆಗಸ್ಟ್ ೧೪ರಂದು ಮಟಮಾರಿ ನಾಗಪ್ಪನವರು, ಚಂದ್ರಯ್ಯ, ಶರಭಯ್ಯ ,ಮತ್ತು ಬಸಣ್ಣ ಎನ್ನುವ ವಿದ್ಯಾರ್ಥಿಗಳು ಪೊಲೀಸರ ಕಾವಲನ್ನು ಭೇದಿಸಿ ಜಿಲ್ಲಾಧಿಕಾರಿಗಳ ಕಚೇರಿ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇದೇ ರೀತಿ ಕಲ್ಬುರ್ಗಿಯಲ್ಲಿ ಅನಿರುದ್ಧ ದೇಸಾಯಿಯವರ , ಕನಕಗಿರಿಯಲ್ಲಿ ಜಯತೀರ್ಥ ರಾಜ ಪುರೋಹಿತರು, ಅಳಂದದಲ್ಲಿ ಎ. ವಿ. ಪಾಟೀಲರು, ಯಾದಗಿರಿಯಲ್ಲಿ ಕೋಲೂರು ಮಲ್ಲಪ್ಪನವರು, ಚಿತ್ತಾಪುರದಲ್ಲಿ ಬಸಪ್ಪ ಸಜ್ಜನ ಶೆಟ್ಟರು, ಕಾರಟಗಿಯಲ್ಲಿ ಬೆನಕಲ್ ಭೀಮಸೇನರಾಯರುಗಳ ನೇತೃತ್ವದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಇದನ್ನು ಅರಿತ ನಿಜಾಮನು ಆಗಸ್ಟ್ ಮೊದಲ ವಾರದಿಂದಲೇ ತ್ರಿವರ್ಣ ಧ್ವಜದ ಹಾರಾಟವನ್ನು ನಿಷೇಧಿಸಿದ. ಇಂಥ ಸಮಯದಲ್ಲಿ ಮಾಲಗಿತ್ತಿ ಯಲ್ಲಿ ನಡೆದ ಬಹಿರಂಗ ಸಭೆಯ ಸಮಯದಲ್ಲಿ “ಸೀತಮ್ಮ ಬಡಿಗೇರ್ “ಎಂಬ ಕೆಚ್ಚೆದೆಯ ೨೪ರ ವಯಸ್ಸಿನ ತರುಣಿ ವೀರಗಚ್ಚು ಹಾಕಿ ಹಣೆ ತುಂಬ ಕುಂಕುಮ ,ಗಲ್ಲಕ್ಕೆ ಅರಿಶಿನ ಹಚ್ಚಿ ಒಂದು ಕೈಯಲ್ಲಿ ತ್ರಿವರ್ಣ ಧ್ವಜ ಇನ್ನೊಂದು ಕೈಯಲ್ಲಿ ಕುಡುಗೋಲು ಹಿಡಿದು ರೌದ್ರಕಾಳಿಯಂತೆ ಕುಣಿಯುತ್ತ ಬರುತ್ತಿದ್ದಂತೆ “ವಂದೇ ಮಾತರಂ” ಘೋಷಣೆ ಎಲ್ಲೆಡೆ ಮೊಳಗಿತು.
ಇದರ ಜೊತೆಗೆ” ಸ್ವಾಮಿ ರಮಾನಂದ ತೀರ್ಥ”ರು ಕಾಲೇಜು ವಿದ್ಯಾರ್ಥಿಗಳಿಗೆ “quiಣ ಛಿoಟಟege, ಚಿಛಿಣ ಟಿoತಿ” ಎಂಬ ಕರೆಯನ್ನು ಕೊಟ್ಟು “ವಂದೇ ಮಾತರಂ” ಎಂಬ ಗಾನದೊಂದಿಗೆ ಹೋರಾಟದ ಕಿಚ್ಚನ್ನು ಹೆಚ್ಚಿಸಿದರು. ಇದೇ ಸಮಯಕ್ಕೆ ರಜಾಕಾರರ ಸೈನ್ಯ ಕಲಬುರ್ಗಿ, ರಾಯಚೂರು, ಯಾದಗಿರಿ, ಬೀದರ್ ಜಿಲ್ಲೆಗಳ ಎಲ್ಲ ಗ್ರಾಮಗಳಲ್ಲಿ ಸತತವಾಗಿ ದಾಳಿ ಮಾಡಿ ಕೊಲೆ, ಸುಲಿಗೆ, ಹಾಗೂ ಹೆಣ್ಣು ಮಕ್ಕಳ ಮೇಲೆ ವಿಕೃತವಾಗಿ ದೌರ್ಜನ್ಯವ್ಯಸಗಿ ಹಸುಗೂಸುಗಳ ಮಾರಣಹೋಮವನ್ನೇ ನಡೆಸಿದರು.
ಈಗಿನ” ಕಲ್ಯಾಣ ಕರ್ನಾಟಕ”ದ ಬೀದರ್ ಜಿಲ್ಲೆಯ ಭಾಲ್ಕಿ ಹತ್ತಿರ ಹೊನ್ನಳ್ಳಿ ಎಂಬ ಚಿಕ್ಕ ಗ್ರಾಮ ಈ ಭಾಗವು “ಜಲಿಯನ್ ವಾಲಾಬಾಗ್ ಹತ್ಯಾಕಾಂಡ “ನಂತಹ ಮತ್ತೊಂದು ಹತ್ಯಾಕಾಂಡ ಕಂಡಿದೆ.
ಇದನ್ನು ಅರಿತ ಅಂದಿನ ಗ್ರಹಮಂತ್ರಿಗಳಾದ ’ಉಕ್ಕಿನ ಮನುಷ್ಯ’ “ಸರ್ದಾರ್ ವಲ್ಲಭಭಾಯಿ ಪಟೇಲ”ರು ಕಾರ್ಯಪ್ರವರ್ತರಾದರು.
ಸೆಪ್ಟೆಂಬರ್ ೧೭, ೧೯೪೮ ರಲ್ಲಿ ಮೇಜರ್ ಜನರಲ್ ಎಓ ಚೌಧರಿ ರವರ ನಾಯಕತ್ವದಲ್ಲಿ ಮಿಲಿಟರಿ ಕಾರ್ಯಾಚರಣೆ “ಪೋಲೋ”ಮೂಲಕ ಹೈದರಾಬಾದ್ ಪ್ರಾಂತ್ಯವನ್ನು ವಶಪಡಿಸಿ ಹೈದ್ರಾಬಾದ್ ಸಂಸ್ಥಾನದ ವಿಮೋಚಕ ಸರ್ದಾರ್ ವಲ್ಲಭಭಾಯಿ ಪಟೇಲ್ ರವರು ಅಖಂಡ ಭಾರತದ ಕನಸನ್ನು ನುಚ್ಚುನೂರು ಮಾಡಲು ಹೊರಟಿದ್ದ ಹೈದರಾಬಾದಿನ ನಿಜಾಮಿನ ಹುಟ್ಟಡಗಿಸಿ ಹೈದ್ರಾಬಾದ್ ಪ್ರಾಂತ್ಯವನ್ನು ಭಾರತದಲ್ಲಿ ವಿಲೀನಗೊಳಿಸಿದರು.
ನಮ್ಮ ಹಿರಿಯರು ತಮ್ಮ ಬಲಿದಾನವನ್ನು ನೀಡಿ ತಂದುಕೊಟ್ಟ ಈ ಸ್ವಾತಂತ್ರದ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ ೧೭ರಂದು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಿಸಲು ಆಗಿನ ಮುಖ್ಯಮಂತ್ರಿಗಳಾಗಿದ್ದ ಎಸ್ ಎಸ್ .ಎಂ. ಕೃಷ್ಣ ರವರು ಆದೇಶಿಸಿದರು. ತದನಂತರ ದಿನಗಳಲ್ಲಿ ಈ ಪ್ರಾಂತದ ಜನರ ಸಲಹೆಯ ಮೇರೆಗೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು ಹೈದರಾಬಾದ್ ಕರ್ನಾಟಕ ವಿಮೋಚನ ದಿನಾಚರಣೆಯ ಹೆಸರನ್ನು ಬದಲಿಸಿ ಕಲ್ಯಾಣ ಕರ್ನಾಟಕದ ವಿಮೋಚನಾ ದಿನಾಚರಣೆಯೆಂದು ಮರು ನಾಮಕರಣ ಮಾಡಿದರು. ಇಷ್ಟೆಲ್ಲ ಹೋರಾಟ ನಡೆಸಿದ ಈ ಭಾಗವು ಅಭಿವೃದ್ಧಿಯಾಗಿದ್ದು ಸಂವಿಧಾನದ ೩೭೧ಎ ಕಲಂನಿಂದ ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ.
೨೦೧೯ರಿಂದ ಕಲ್ಯಾಣ ಕರ್ನಾಟಕ ಉತ್ಸವ’ ಎಂಬ ಹೆಸರಿನಿಂದ ಪ್ರತಿವರ್ಷ ಸೆಪ್ಟೆಂಬರ್ ೧೭ರಂದು ಕಲ್ಯಾಣ ಕರ್ನಾಟಕ ವಿಭಾಗದ ಆರು ಜಿಲ್ಲೆಗಳಾದ ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಸರ್ಕಾರಿ ಕಛೇರಿಗಳು ಸೇರಿದಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಧ್ವಜಾರೋಹಣ ಮೂಲಕ ಕಲ್ಯಾಣ ಕರ್ನಾಟಕದ ಸ್ವಾತಂತ್ರಕ್ಕಾಗಿ ಹೋರಾಡಿದ ಮತ್ತು ಬಲಿದಾನಗೈದ ಹೋರಟಗಾರರನ್ನು ನೆನೆಯುತ್ತಾ ವಿಮೋಚನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಶ್ರೀಮತಿ ಸುಮಾ ಅಶೋಕ ಗಸ್ತಿ
ಸಂಸ್ಥಾಪಕ ಅಧ್ಯಕ್ಷರು
ಅಶೋಕ ಗಸ್ತಿ ಫೌಂಡೇಶನ್(ರಿ)