ಕಲ್ಯಾಣ ಕರ್ನಾಟಕ ಮುಕ್ತಿದಿನದ ಅಮೃತ ಮಹೋತ್ಸವ

ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.18: ಕಲ್ಯಾಣ ಕರ್ನಾಟಕದ ಮುಕ್ತಿದಿನದ ಅಮೃತ ಮಹೋತ್ಸವದ ಅಂಗವಾಗಿ ನಗರದ ರಾಘವ ಕಲಾಮಂದಿರದಲ್ಲಿ ಸಾಂಸ್ಕೃತಿಕ ಜನ ಸಂಭ್ರಮ ಕಾರ್ಯಕ್ರಮವನ್ನು ರಂಗತೋರಣ ಆಯೋಜಿಸಲಾಗಿತ್ತು. ಮುಖ್ಯ ವಕ್ತಾರರಾಗಿ ಆಗಮಿಸಿದ್ದ ವಿಜಯಪುರದ ಸಾಮಾಜಿಕ ಕಾರ್ಯಕರ್ತರಾದ ಶ್ರೀನಿವಾಸ ನಾಯಕ್ ಮಾತನಾಡಿ, ಭಾರತಕ್ಕೆ 1947-ಆಗಸ್ಟ್-15ಕ್ಕೆ ಸ್ವಾತಂತ್ರ್ಯ ಬಂದರೆ ಹೈದ್ರಾಬಾದ್ ನಿಜಾಮನ ಆಡಳಿತಕ್ಕೆ ಸೇರಿದ್ದ ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು 1948, ಸೆಪ್ಟೆಂಬರ್ 17ರವರೆಗೆ ನಿಜಾಮನ ಕಪಿಮುಷ್ಟಿಯಲ್ಲಿದ್ದವು. ಸ್ವತಂತ್ರ ರಾಜ್ಯವಾಗಿ ಇಸ್ಲಾಂ ಆಡಳಿತ ಹೇರಿ ಪಾಕ್ಷಿಸ್ತಾನಕ್ಕೆ ಸೇರುವ ಬಯಕೆಯಿಂದ ನಿಜಾಮನ ರಝಾಕರರ ಸೈನ್ಯ, ಜನರ ಮಾನ-ಪ್ರಾಣ, ಆಸ್ತಿಪಾಸ್ತಿ ನಾಶಗೊಳಿಸತೊಡಗಿತು ಎಂದರು.
ದೇಶದ ಗೃಹಮಂತ್ರಿ ಉಕ್ಕಿನ ಮುನಷ್ಯ ಸರ್ದಾರ್ ವಲ್ಲಭಾಯಿ ಪಟೇಲರ ದೂರದೃಷ್ಟಿಯಿಂದ 1948ರ ಸೆಪ್ಟೆಂಬರ್ 13ರಿಂದ 17ರವರೆಗೆ, 5 ದಿನಗಳ ಕಾಲ ನಡೆದ ಪೊಲೀಸ್ ಯಾಕ್ಷನ್‍ನಿಂದಾಗಿ ನಿಜಾಮ ಮೀರ್ ಉಸ್ಮಾನ್ ಅಲಿ ಮೊದಲ ಬಾರಿಗೆ ರೇಡಿಯೋ ಮೂಲಕ ಶರಣಗತಿಯನ್ನು ಜಾಹಿರುಪಡಿಸಿದ. ಶರಣಾಗತಿ ಸಮಾರಂಭ ಭಾರತೀಯ ಸೇನೆಯು ನಿರ್ವಹಿಸಿದ ದಾಖಲೆಗಳ ಪ್ರಕಾರ, ಜನರಲ್ ಚೌದರಿ ಮೇಜರ್ ಜನರಲ್ ಎಲ್.ಎಡ್ರೂಸ್ ನೇತೃತ್ವದ ಹೈದರಾಬಾದ್ ಸೇನೆಯು ಶರಣಾಯಿತು. ಇದರಲ್ಲಿ ಹೈದರಾಬಾದ್ ಸೈನ್ಯದ 1,373 ಜನ ಹತರಾದರು. 1,911 ಜನರನ್ನು ವಶಪಡಿಸಿಕೊಳ್ಳಲಾಯಿತು. ಭಾರತೀಯ ಸೈನ್ಯದ 10 ಕ್ಕಿಂತ ಕಡಿಮೆ ವೀರ ಸೈನಿಕರು ಹುತಾತ್ಮರಾದರು.
ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಅವರು ನೇಮಿಸಿದ ಸುಂದರ್‍ಲಾಲ್ ಸಮಿತಿಯು ರಝಾಕಾರರ ದೌರ್ಜನ್ಯ ಮತ್ತು ಪ್ರತಿಯಾಗಿ ಜನಸಾಮಾನ್ಯರ ಹೋರಾಟದಲ್ಲಿ ಒಟ್ಟು 30,000-40,000 ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿದೆ. ಈ ವರದಿ 2013ರಲ್ಲಿ ಬಿಡುಗಡೆ ಆಯಿತು ಇನ್ನೂ ಕೆಲವು ಇತಿಹಾಸಕಾರರು ಸಾವಿನ ಸಂಖ್ಯೆ 2,00,000 ಅಥವಾ ಅದಕ್ಕಿಂತ ಹೆಚ್ಚು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿಯಾಗಿ ಭಾರತೀಯರ ದಿಟ್ಟ ಹೋರಾಟ, ಬಲಿದಾನಗಳ ಪರಿಣಾಮ 11 ತಿಂಗಳಿನ ನಂತರ ಹೈದರಾಬಾದ್ ಮುಕ್ತಿಯಾಯಿತು. ಹೈದ್ರಾಬಾದ್ ಪ್ರಾಂತ್ಯ ಭಾರತದ ಭೂಭಾಗವಾಯಿತು. ದೇಶಕ್ಕೆ 1947 ಆಗಸ್ಟ್-15ಕ್ಕೆ ಸ್ವಾತಂತ್ರ್ಯ ಬಂದರೆ ಈ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ 1948 ಸೆಪ್ಟೆಂಬ್-17ಕ್ಕೆ ಎಂದರೆ ಒಂದು ವರ್ಷ ಒಂದು ತಿಂಗಳು, ಎರಡು ದಿನಗಳ ನಂತರ ಸ್ವಾತಂತ್ರ್ಯ ಬಂತು. ಯಾವ ಸ್ವಾತಂತ್ರ್ಯ ಹೋರಾಟಕ್ಕೆ ಕಡಿಮೆ ಇಲ್ಲದ ಈ ಮುಕ್ತಿ ಆಂದೋಲನ ಇಂದಿನ ಯುವ ಪೀಳಿಗೆ ತಿಳಿದುಕೊಳ್ಳುವ ಅಗತ್ಯ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ದೀಪ ಪ್ರಜ್ವಲನೆಯೊಂದಿಗೆ ಸರ್ದಾರ್ ವಲ್ಲಭಾಯಿ ಪಟೇಲ್, ಮಹಾತ್ಮ ಗಾಂಧಿಜಿ, ಪಿಂಜಾರ್ ರಂಜಾನ್‍ಸಾಬ್ ಮಹಾಪುರುಷರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆಯಾಯಿತು. ನಿವೃತ್ತ ಉಪನ್ಯಾಸಕರಾದ ಎನ್.ಬಸವರಾಜ ರವರು ಪ್ರಾರ್ಥಿಸಿದರು, ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಸ್ವಾಗತಿಸಿದರು, ಅಡವಿಸ್ವಾಮಿ ರವರು ನಿರೂಪಿಸಿದರು, ಸಾಂಸ್ಕೃತಿಕ ಜನಸಂಭ್ರಮ ಸಂಚಾಲಕರಾದ ಶಿವೇಶ್ವರಗೌಡ ಕಲ್ಲುಕಂಭ ವಂದಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲೆಕ್ಕ ಪರಿಶೋಧಕರ ಸಿ.ಎ. ಸಿದ್ಧರಾಮೇಶ್ವರಗೌಡ ಮುಖ್ಯ ಅತಿಥಿಗಳ ನುಡಿಗಳನ್ನಾಡಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಶುಭಾಷಯಗಳನ್ನು ತಿಳಿಸಿದರು. ವೇದಿಕೆಯಲ್ಲಿ ಇನ್ನೊರ್ವ ಅತಿಥಿಗಳಾದ ಮಹಾನಗರ ಪಾಲಿಕೆ ಸದಸ್ಯರಾದ ಕೆ.ಎಸ್.ಅಶೋಕ್ ಕುಮಾರ್, ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕರಾದ ಡಾ|| ಜಿ.ಆರ್. ವಸ್ತ್ರದ, ವಿವೇಕ ತೋರಣದ ಕಾರ್ಯದರ್ಶಿ ಡಾ|| ಎಸ್.ಕೃಷ್ಣ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಶಾಲಾ-ಕಾಲೇಜುಗಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು.