ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೃದಯ ತಪಾಸಣೆ ಶೇ.30 ರಿಂದ 40 ರಷ್ಟು ಏರಿಕೆ

ಕಲಬುರಗಿ,ನ.24:ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೃದಯ ತಪಾಸಣೆ ಮಾಡುವವರ ಸಂಖ್ಯೆ ಇತ್ತೀಚೆಗೆ ಶೇ.30 ರಿಂದ 40 ರಷ್ಟು ಹೆಚ್ಚಾಗಿದೆ ಎಂದು ಕಲಬುರಗಿಯ ಖ್ಯಾತ ಹೃದ್ರೋಗ ತಜ್ಞರಾದ ಡಾ. ಬಸವಪ್ರಭು ಅಮರಖೇಡ್ ತಿಳಿಸಿದರು.
ಕಲಬುರಗಿ ಆಕಾಶವಾಣಿಯ ‘ಜೊತೆ ಜೊತೆಯಲಿ’ ನೇರಫೋನ್- ಇನ್ ಸಂವಾದದಲ್ಲಿ ನ.24 ರಂದು “ಹೃದಯದ ಆರೋಗ್ಯ ಕಾಪಾಡಿ’ ವಿಷಯ ಕುರಿತಾಗಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.5 ರಿಂದ 10 ರಷ್ಟು ಹೃದಯಾಘಾತ ಪ್ರಕರಣ ಜಾಸ್ತಿ ಆಗುತ್ತಿದೆ. ಇತ್ತೀಚಿನ ಕೆಲ ಹೃದಯಘಾತ ಘಟನೆಗಳಿಂದ ಜನರು ಹೃದಯದ ತಪಾಸಣೆಗೆ ಮುಂದಾಗುತ್ತಿದ್ದು ಈ ಭಾಗದಲ್ಲಿ ಶೇ.30 ರಿಂದ 40 ರಷ್ಟು ಜಾಸ್ತಿಯಾಗಿದೆ. ಮಹಿಳೆಯರಲ್ಲಿ 40 ವಯಸ್ಸಿನ ವರೆಗೆ ಹೃದಯಾಘಾತ ಕಡಿಮೆ. ಆದರೆ ಪುರುಷರಲ್ಲಿ ಸುಮಾರು 30 ವರ್ಷದವರಲ್ಲೂ ಕಂಡುಬರುತ್ತಿದ್ದು ಕಳವಳಕಾರಿ ವಿಷಯವಾಗಿದೆ ಎಂದರು.
ವ್ಯಾಯಾಮದ ಕೊರತೆ, ಸ್ಥೂಲಕಾಯ, ತಂಬಾಕು ಸೇವನೆ, ಜೀವನ ಶೈಲಿಯ ಬದಲಾವಣೆ, ಒತ್ತಡದ ಬದುಕು, ಕೆಟ್ಟ ಆಹಾರ ಪದ್ಧತಿ, ಪರಿಸರ ಮಾಲಿನ್ಯ ಮುಂತಾದ ಕಾರಣಗಳಿಂದಾಗಿ ಹೃದಯಾಘಾತ ಪ್ರಮಾಣ ಜಾಸ್ತಿ ಆಗುತ್ತಿದೆ. ಇತ್ತೀಚಿನ ವರದಿಯಂತೆ ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಕೂಡಾ ಶೇ.4 ರಿಂದ 5 ರಷ್ಟು ಹೆಚ್ಚಾಗಿದೆ. ರಕ್ತದೊತ್ತಡ ಮತ್ತು ಮಧುಮೇಹಿಗಳಿರುವ ಕೋವಿಡ್ ಪೀಡಿತರಲ್ಲಿ ಹೃದಯಾಘಾತದ ಸಂಖ್ಯೆ ಇನ್ನೂ ಜಾಸ್ತಿ ಎಂದು ಹೇಳಿದರು. ನಿಯಮಿತ ಕಾಲ್ನಡಿಗೆ, ಉತ್ತಮ ಆಹಾರ, ಎಣ್ಣೆ ಬಳಕೆ ಕಡಿಮೆ ಮಾಡಿ, ಮದ್ಯಪಾನ, ಧೂಮಪಾನ ವ್ಯಸನ ಮುಕ್ತರಾಗಿ ಜೀವನಶೈಲಿ ಬದಲಾಯಿಸಿದರೆ ಹೃದ್ರೋಗದಿಂದ ಪಾರಾಗಲು ಸಾಧ್ಯ ಎಂದು ಕಿವಿ ಮಾತು ಹೇಳಿದರು.
ಫೋನ್ ಇನ್ ಸಂವಾದದಲ್ಲಿ ಸುರಪುರದ ರಾಘವೇಂದ್ರ ಭಕ್ರಿ, ಕಮಲಾಪುರ ಗೋಗಿಯ ಸುರೇಶ್, ಕಲಬುರಗಿಯ ಶ್ಯಾಮಲಾ ಶಿವಕುಮಾರ್, ವಾಸುದೇವ ಪಾಟೀಲ್ ವೈಜಾಪುರ, ಅಫಜಲ್ಪುರ ಅರ್ಜುಣಗಿಯ ಅಂಬಾರಾಯ ಕೋಣೆ, ಬ್ರಹ್ಮಪುರದ ಮಂಜುನಾಥ, ಬಸವರಾಜ ಅಂಗಡಿ ಯಡ್ರಾಮಿ ಮತ್ತು ರಮೇಶ್ ಶಹಾಪುರ ಪಾಲ್ಗೊಂಡರು. ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಂಗಮೇಶ್, ಲಕ್ಷ್ಮೀಕಾಂತ ಪಾಟೀಲ್, ಮಧು ದೇಶಮುಖ್, ಈಶ್ವರ್ ಮತ್ತಿತರರು ನೆರವಾದರು ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಅನಿಲ್ ಕುಮಾರ್ ಎಚ್. ಎನ್. ತಿಳಿಸಿದ್ದಾರೆ.