ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕ್ರತಿಕ ಸಂಘದ ಅಕ್ರಮಗಳ ತನಿಖೆಗೆ ಅಧಿಕಾರಿಗಳ ತಂಡ ರಚನೆ

ಕಲಬುರಗಿ,ಜೂ.08: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕ್ರತಿಕ ಸಂಘದ ಅಕ್ರಮಗಳ ತನಿಖೆಗೆ ಅಧಿಕಾರಿಗಳ ತಂಡ ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪತ್ರಿಕಾ‌ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ಬಿಡುಗಡೆ ಮಾಡಿ ವೆಚ್ಚ ಮಾಡಿರುವ ರೂ 3000 ಕೋಟಿಗಳ ಅನುದಾನದಲ್ಲಿ ನಡೆದಿರುವ ವ್ಯಾಪಕ ಅಕ್ರಮಗಳು, ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಗಾಗಿ ಬಿಡುಗಡೆ ಮಾಡಿ ವೆಚ್ಚ ಮಾಡಲಾಗಿರುವ ರೂ 3.50 ಕೋಟಿ ಅನುದಾನವನ್ನು ಕೆ.ಟಿ.ಪಿ.ಪಿ. ಕಾಯ್ದೆಯಡಿ ಪ್ರಕ್ರಿಯೆ ನಡೆಸದೆ ಹೆಚ್ಚುವರಿಯಾಗಿ ರೂ 50 ಲಕ್ಷ ವೆಚ್ಚ ಮಾಡುವಲ್ಲಿ ನಡೆದ ಅಕ್ರಮ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕ್ರತಿಕ ಸಂಘಕ್ಕೆ ಬಿಡುಗಡೆ ಮಾಡಿ ವೆಚ್ಚ ಮಾಡಿರುವ ರೂ 300 ಕೋಟಿ ಅನುದಾನದಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕುರಿತಂತೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಕೋರಿದ್ದರು.

ಸಚಿವರ ಪತ್ರಕ್ಕೆ ಸ್ಪಂದಿಸಿದ ಸಿಎಂ ಅಕ್ರಮಗಳ ಕುರಿತು ಗಂಭೀರವಾಗಿ ಪರಿಗಣಿಸಿ ಇಲಾಖಾ ತನಿಖೆ ನಡೆಸಿ 15ದಿನಗಳ ಒಳಗಾಗಿ ತಪ್ಪಿತಸ್ಥರ ವಿವರಗಳೊಂದಿಗೆ ವರದಿ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಈ‌ ಹಿನ್ನೆಲೆಯಲ್ಲಿ ಡಿ. ಚಂದ್ರಶೇಖರಯ್ಯ, ನಿರ್ದೇಶಕರು ಪ್ರದೇಶಾಭಿವೃದ್ಧಿ ಮಂಡಳಿ‌ ವಿಭಾಗ ಹಾಗೂ ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿಗಳು, ಯೋಜನೆ, ಕಾರ್ಯಕ್ರಮ ಸಂಯೋಜನೆ, ಮತ್ತು ಸಾಂಖ್ಯಿಕ ಇಲಾಖೆ ಇವರು ದಿನಾಂಕ : 08-06-2023 ರಂದು ಆದೇಶ ಹೊರಡಿಸಿ ಈ ಕೆಳಗೆ ಉಲ್ಲೇಖಿಸಿದ ಅಧಿಕಾರಿಗಳ ತಂಡವನ್ನು ನಿಯೋಜನೆ ಮಾಡಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಇವರು ಅನುಷ್ಠಾನಗೊಳಿಸಿರುವ ಯೋಜನೆಗಳ ಕುರಿತು ಸ್ವೀಕೃತವಾಗಿರುವ ದೂರುಗಳ ಬಗ್ಗೆ ಪರಿಶೀಲನೆಗಾಗಿ ದಿನಾಂಕ: 12.06.2023 ರಿಂದ 14.06.2023 ರವರೆಗೆ ಕಲಬುರಗಿ ಮತ್ತು ಸಂಬಂಧಿಸಿದ ಜಿಲ್ಲೆಗಳಿಗೆ ಭೇಟಿ ನೀಡಿ ದೂರುಗಳಲ್ಲಿನ ಅಂಶಗಳ ಬಗ್ಗೆ ದಾಖಲೆ/ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ.

ತಂಡದಲ್ಲಿರುವ ಅಧಿಕಾರಿಗಳ ವಿವರ:

ಡಿ. ಚಂದ್ರಶೇಖರಯ್ಯ, ನಿರ್ದೇಶಕರು, ಯೋಜನಾ ‌ಇಲಾಖೆ ಎ.ಡಿ.ಬಿ‌ ವಿಭಾಗ.

ಶ್ರೀಮತಿ ಸಿ.ಆರ್.‌ಶಿವರೂಪ, ಉಪನಿರ್ದೇಶಕರು, ಯೋಜನಾ ‌ಇಲಾಖೆ ಎ.ಡಿ.ಬಿ‌ ವಿಭಾಗ.

ಗಿರೀಶ್ ಬಿ.ಜಿ ಸಹಾಯಕ ನಿರ್ದೇಶಕರು, ಯೋಜನಾ ‌ಇಲಾಖೆ ಎ.ಡಿ.ಬಿ‌ ವಿಭಾಗ.

ದಿಲೀಪ್ ಕುಮಾರ ಶಾಖಾಧಿಕಾರಿ, ಯೋಜನಾ ‌ಇಲಾಖೆ ಎ.ಡಿ.ಬಿ‌ ವಿಭಾಗ.

ಶ್ರೀಮತಿ ವರಲಕ್ಷ್ಮೀ ಆರ್. ದತ್ತ ನಮೂದಕರು, ಯೋಜನಾ ‌ಇಲಾಖೆ ಎ.ಡಿ.ಬಿ‌ ವಿಭಾಗ.