ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನ ದುರ್ಬಳಕೆ: ರೇವೂರ್ ವಜಾಕ್ಕೆ ಕೃಷ್ಣಾರೆಡ್ಡಿ ಆಗ್ರಹ

ಕಲಬುರಗಿ.ಮಾ.07: ಅನುದಾನ ದುರ್ಬಳಕೆಯ ಹಿನ್ನೆಲೆಯಲ್ಲಿ ಕೂಡಲೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರನ್ನು ವಜಾಗೊಳಿಸಬೇಕು ಎಂದು ಜಾತ್ಯಾತೀತ ಜನತಾದಳದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಕೃಷ್ಣಾರೆಡ್ಡಿ ತಂದೆ ಸಿ. ರಮೇಶ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡಳಿಯ ಅಧ್ಯಕ್ಷ ರೇವೂರ್ ಅವರು ಕಳೆದ 2020ರ ಜುಲೈನಲ್ಲಿ ನೆರವು ನೀಡಲು ಗುತ್ತಿಗೆ ಆಧಾರದಲ್ಲಿ ಸ್ಥಾಪಿಸಿದ ಯೋಜನಾ ಬೆಂಬಲ ಕಚೇರಿ ಪಿಎಸ್‍ಓ ಕೆಲ ಮಾಡದೇ ಇದ್ದರೂ ಸಂಸ್ಥೆಗೆ 2021ರ ಡಿಸೆಂಬರ್‍ನಿಂದ 2022ರ ಮಾರ್ಚ್ ಅವಧಿಯಲ್ಲಿ 6 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ. ಸದರಿ ಸಂಸ್ಥೆಯ ಜೊತೆಗೆ ಮಾಡಿಕೊಂಡ ಒಪ್ಪಂದದ ಕರಾರು ಪತ್ರದ ಪ್ರಕಾರ 45 ದಿನಗಳ ಅವಧಿಯೊಳಗೆ ಸೇವಾ ಪೂರೈಕೆದಾರರು ಪ್ರಮುಖ ಸಲಹೆಗಾರರಾದ ಖರೀದಿ ತಜ್ಞರು, ಹಣಕಾಸು ತಜ್ಞರು, ತೆರಿಗೆ ತಜ್ಞರನ್ನು ನಿಯೋಜನೆ ಮಾಡುವ ಕರಾರು ಇದೆ. ಸದರಿ ಸಂಸ್ಥೆಯು ಯಾರಿಗೂ ನೇಮಕ ಮಾಡದೇ ಮಂಡಳಿಯಿಂದ 6 ಕೋಟಿ ರೂ.ಗಳನ್ನು ಪಡೆದುಕೊಂಡಿರುವ ಕುರಿತು ಸಿಎಜಿ ವರದಿಯಲ್ಲಿ ಬಹಿರಂಗವಾಗಿದೆ ಎಂದರು.
ಕರ್ಮಕಾಂಡದಲ್ಲಿ ಅಧ್ಯಕ್ಷರು ಎಲ್ಲ ಕರಾರು ಒಪ್ಪಂದಗಳನ್ನು ಉಲ್ಲಂಘಿಸಿ ಸಂಸ್ಥೆಯಿಂದ ಪಿಎಸ್‍ಓ ಸಂಸ್ಥೆಗೆ 6 ಕೋಟಿ ರೂ.ಗಳನ್ನು ಸಂದಾಯ ಮಾಡಿದ್ದಾರೆ. ಸಂಸ್ಥೆಗೆ ಒಪ್ಪಂದದ ಪ್ರಕಾರ 9.97 ಕೋಟಿ ರೂ.ಗಳ ಗುತ್ತಿಗೆ ಬೆಲೆಯಲ್ಲಿ ಕೆಲಸ ಮಾಡುವುದಕ್ಕೆ ಕೊಟ್ಟಿದ್ದಕ್ಕಾಗಿ ಟೆಂಡರ್ ಕೊಟ್ಟಿದ್ದಾರೆ. ಇದು ಅಲ್ಲದೇ ಕೆಆರ್‍ಐಡಿಎಲ್‍ಗೆ ಕೆಪಿಪಿ ಕಾಯ್ದೆ ಪ್ರಕಾರ 4ಜಿ ಅಡಿ ವಹಿಸಿಕೊಟ್ಟಿರುವ ಕಾಮಗಾರಿಗೆ 2 ಕೋಟಿ ರೂ.ಗಳವರೆಗೆ ವಿನಾಯಿತಿ ನೀಡಲಾಗಿದ್ದು, 2 ಕೋಟಿ ರೂ.ಗಳಿಗಿಂತ ಹೆಚ್ಚು ಕಾಮಗಾರಿಗಳಿಗೆ ಇ-ಪ್ರೊಕ್ಯೂರಮೆಂಟ್ ಪೋರ್ಟಲ್ ಮೂಲಕ ಮುಕ್ತ ಟೆಂಡರ್ ಆಹ್ವಾನಿಸಬೇಕಾಗಿತ್ತು. ಆ ನಿಯಮವನ್ನೂ ಸಹ ಗಾಳಿಗೆ ತೂರಿ ಜಿಲ್ಲೆಯ ವಾಡಿಯಿಂದ ಬಳುವಡಗಿಯವರೆಗೆ ರಸ್ತೆ ಮೆಟಲಿಂಗ್ ಸುಧಾರಣಾ ಕಾಮಗಾರಿಗೆ 4.97 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಸದರಿ ಕಾಮಗಾರಿಗಳ ಅಂದಾಜು ಪಟ್ಟಿ 2 ಕೋಟಿ ರೂ.ಗಳ ವಿನಾಯಿತಿ ಮೀರಿದ್ದರಿಂದ ನೇರವಾಗಿ ಕಾರ್ಯಗತಗೊಳಿಸಲು ಏಜೆನ್ಸಿಗೆ ಅಧಿಕಾರ ಇಲ್ಲದಿರುವುದನ್ನು ಸಹ ಲೆಕ್ಕ ಪರಿಶೋಧಕರು ಲೆಕ್ಕ ಪರಿಶೋಧನೆಯ ವೇಳೆ ಪರಿಶೀಲಿಸಿದ್ದಾರೆ. ಹೀಗಾಗಿ ಮಂಡಳಿಯ ಅಧ್ಯಕ್ಷರು ಅನುದಾನ ದುರುಪಯೋಗ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಕಾರಣ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ರಸ್ತೆಗಿಳಿದು ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.