ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ದಿಂದ ಹತ್ತು ಸಾವಿರ ಪುಸ್ತಕ ವಿತರಣೆ

ಬೀದರ್:ಜು.30: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಕಲ್ಯಾಣ ಕರ್ನಾಟಕ ಪ್ರತಿಷ್ಠಾನವು ಜಿಲ್ಲೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ವೀರಗಾಥೆಗಳ 10 ಸಾವಿರ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅವಿಸ್ಮರಣೀಯವಾಗಿಸಲು ಪ್ರತಿಷ್ಠಾನದಿಂದ ಆಗಸ್ಟ್ 1 ರಿಂದ ಒಂದು ತಿಂಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ತಿಳಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಪರಿಚಯ ಹಾಗೂ ದೇಶ ಪ್ರೇಮ ಮೂಡಿಸಲು ಸ್ವಾತಂತ್ರ್ಯ ಹೋರಾಟಗಾರರ ಕುರಿತ 10 ಸಾವಿರ ಕೃತಿಗಳನ್ನು ವಿತರಿಸಲಾಗುವುದು. ‘ದುರ್ಗುಣ-ದುಶ್ಚಟಗಳ ಭಿಕ್ಷೆ, ಸದ್ಗುಣ- ಸನ್ನಡತೆಯ ದೀಕ್ಷೆ’ ಘೋಷವಾಕ್ಯದಡಿ ಬಸವ ಜೋಳಿ ಸಂಚಾರ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಪ್ರೇರಣೆ ಮತ್ತು ಶೈಕ್ಷಣಿಕ ಜಾಗೃತಿ ಕಾರ್ಯಾಗಾರ ಹಾಗೂ ಪ್ರತಿ ದಿನ ಸಂಜೆ ಒಂದು ಗ್ರಾಮದಲ್ಲಿ ಶ್ರಾವಣ ಬೆಳಕು ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದ್ದಾರೆ.

ಆಗಸ್ಟ್ 1 ರಂದು ಸೋಲಾಪುರದ ಶಿವಯೋಗಿ ಸಿದ್ಧರಾಮೇಶ್ವರ ಸನ್ನಿಧಾನ ಹಾಗೂ ಬಸವಕಲ್ಯಾಣದ ಅರಿವಿನ ಮಹಾಮನೆಯಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಪ್ರತಿ ದಿನ ಬೆಳಿಗ್ಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಹಾಗೂ ಗ್ರಾಮಗಳಲ್ಲಿ ಸಂಜೆ 7 ರಿಂದ 9 ರ ವರೆಗೆ ಶ್ರಾವಣ ಬೆಳಕು ಕಾರ್ಯಕ್ರಮ ಜರುಗಲಿದೆ. ದುಶ್ಚಟ, ದುರ್ಗುಣಗಳ ದುಷ್ಪರಿಣಾಮ ಕುರಿತು ಕಿರುನಾಟಕವೂ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಸಾಧನೆಗೆ ಮಾರ್ಗದರ್ಶನ ನೀಡುವುದು, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುವುದು, ಯುವಕರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸುವುದು, ಭಾರತೀಯರೆಲ್ಲ ಒಂದೇ ಎಂಬ ಭಾವನೆ ಬೆಳೆಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.