
ದೇವದುರ್ಗ,ಏ.೦೫- ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜನಾದನರೆಡ್ಡಿಯವರ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದಿಂದ ಸ್ಪರ್ದಿಸಲು ನಿರ್ಧರಿಸಲಾಗಿದೆ ಎಂದು ನಾಗಪ್ಪ ಪಾಮರತಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಬುಧವಾರ ಮಾತನಾಡಿದರು.ಈಗಾಗಲೇ ಪಕ್ಷ ಸೇರ್ಪಡೆಗೊಂಡಿದ್ದು,೨-೩ಬಾರಿ ಚುನಾವಣೆ ಹಾಗೂ ಸ್ಪರ್ಧೆ ಕುರಿತು ಪಕ್ಷದ ರಾಜ್ಯಾಧ್ಯಕ್ಷರಾದ ಜನಾರ್ಧನರೆಡ್ಡಿಯೊಂದಿಗೆ ಚರ್ಚಿಸಿದ್ದು,ಏ.೭ರಂದು ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದಾರೆ.
ನಾನು ಕಳೆದ ೪೦ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದು,ಜನಸಾಮಾನ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರುವೆ.ಗಲಗ ಗ್ರಾ.ಪಂಗೆ ಸತತ ೮ಬಾರಿ ಸದಸ್ಯನಾಗಿ ಸೇವೆ ಸಲ್ಲಿಸಿರುವೆ.ಒಂದು ಅವಧಿ ಗ್ರಾ.ಪಂ ಅಧ್ಯಕ್ಷನಾಗಿ ಜೊತೆಗೆ ತಾಲೂಕು ಗ್ರಾ.ಪಂಗಳ ಅಧ್ಯಕ್ಷರ ಒಕ್ಕೂಟದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವೆ.೨೦೦೬ರಿಂದ ೨೦೧೧ರವರೆಗೆ ನನ್ನ ಪತ್ನಿ ಜಿ.ಪಂ ಸದಸ್ಯರಾಗಿ ಆಯ್ಕೆಗೊಂಡಿದ್ದರು.
ತಾಲೂಕಿನಲ್ಲಿ ಬಿಜೆಪಿ ಶಾಸಕರ ಭ್ರಷ್ಠಾಚಾರ ಮಿತಿ ಮೀರಿ ಹೋಗಿದ್ದು,ಅಕ್ರಮ ಆಸ್ತಿ ಸಂಪಾದನೆ ಕುರಿತು ಎಲ್ಲಾ ಮತದಾರರಿಗೆ ತಿಳಿದ ಸಂಗತಿಯಾಗಿದೆ.ದೌರ್ಜನ್ಯ,ದಬ್ಬಾಳಿಕೆಗೆ ಇಡೀ ತಾಲೂಕು ತತ್ತರಿಸಿ ಹೋಗಿದೆ.ಕಾಂಗ್ರೆಸ್ ಪಕ್ಷ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಜೊತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ.ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ನಾನು ಸ್ಪರ್ಧಿಸಲು ನಿರ್ಧರಿಸಿರುವೆ.
ಕುಟುಂಬ ರಾಜಕಾರಣ ಇರುವಿಕೆಯಿಂದಾಗಿ ಎಲ್ಲ ಅಧಿಕಾರ ಒಂದೇ ಮನೆಗೆ ಸೀಮಿತಗೊಂಡಿದೆ.ಚುನಾವಣೆಯಲ್ಲಿ ಮಾತ್ರ ನೆನಪಿಗೆ ಬರುವ ಕಾರ್ಯಕರ್ತರು,ಮುಖಂಡರು ಬಳಿಕ ಎಲ್ಲರನ್ನು ಮರೆಯುತ್ತಿದ್ದು, ಈ ಎರಡು ಪಕ್ಷಗಳು ಜನ ಮಾನಸದಿಂದ ದೂರವಾಗಿವೆ.
ಒಳ್ಳೆಯ ವಿಚಾರ ಮತ್ತು ವಿಷಯಗಳನ್ನು ಅಧರಿಸಿ ಜನಾರ್ಧನರೆಡ್ಡಿಯವರು ಪಕ್ಷ ಕಟ್ಟಿ ಬೆಳಸುತ್ತಿದ್ದಾರೆ.ವ್ಯಾಪಕ ಬೆಂಬಲ ಕೂಡ ವ್ಯಕ್ತವಾಗುತ್ತಿದೆ.ಮುಂದಿನ ರಾಜಕಾರಣದಲ್ಲಿ ಈ ಪಕ್ಷ ನಿರ್ಣಾಯಕ ಪಾತ್ರ ವಹಿಸಲಿದೆ.
ಜನಾರ್ದನರೆಡ್ಡಿಯವರು ಸ್ಥಳೀಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕೊಡುವ ನಂಬಿಕೆ ಇದೆ.ಒಂದು ವೇಳೆ ಪಕ್ಷದಿಂದ ಟಿಕೇಟ್ ನೀಡದೇ ಹೋದಲ್ಲಿ ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ನಾಗಪ್ಪ ಪಾಮರತಿ ಗಲಗ ಹೇಳಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ತಾಲೂಕು ಅಧ್ಯಕ್ಷ ಶ್ರೀಶೈಲ್ ಸ್ವಾಮಿ ಮಠಪತಿ ಗಲಗ,ಮುಖಂಡರಾದ ಪಂಪನಗೌಡ ಗಲಗ,ದುರುಗಪ್ಪ ಊಟಿ,ಶಿವರಾಜ ಗಲಗ ಇದ್ದರು.