ಕಲ್ಯಾಣ ಕರ್ನಾಟಕ ಕಲೆಯಲ್ಲಿ ದೈವೀಕ ದೃಶ್ಯಧ್ಯಾನ: ಸುಬ್ರಹ್ಮಣ್ಯಂ

ಕಲಬುರಗಿ:ಮಾ.14:ದೈವೀಕ ದೃಶ್ಯಧ್ಯಾನವು ಕಲ್ಯಾಣ ಕರ್ನಾಟಕದ ಹಲವಾರು ದೃಶ್ಯಕಲಾ ಕಲಾವಿದರ ಕಲಾಸೃಷ್ಟಿಯಲ್ಲಿ ಕಾಣಬಹುದಾಗಿದೆ. ಸಂಪ್ರದಾಯ ಶೈಲಿಯ ಚಿತ್ರ-ಶಿಲ್ಪಗಳನ್ನು ಸಮಕಾಲೀನವಾಗಿ ದುಡಿಸಿಕೊಳ್ಳುತ್ತಿರುವ ಹಲವಾರು ದೃಶ್ಯಕಲಾವಿದರು ಈ ಭಾಗದಲ್ಲಿ ಇದ್ದಾರೆ. ಕಿನ್ನಾಳದ ಗೊಂಬೆಯ ಪ್ರಕಾರವೇ ಅಲ್ಲದೆ ಬಿದರಿ ಕಲೆಯನ್ನು ಸಮಕಾಲೀನವಾಗಿ ಈ ಹಿಂದಿನ ಸಂದರ್ಭಗಳಿಗಿಂತಲು ವಿಭಿನ್ನವಾಗಿ ದುಡಿಸಿಕೊಳ್ಳುತ್ತಿರುವ ಕಲಾವಿದರು ಇದ್ದಾರೆ ಎಂದು ಖ್ಯಾತ ದೃಶ್ಯಕಲಾ ವಿಮರ್ಶಕ ಮತ್ತು ಬರಹಗಾರ ಕೆ.ವಿ. ಸುಬ್ರಮಣ್ಯಂ ಅವರು ಹೇಳಿದರು.
ನಗರದ ರಂಗಾಯಣದ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕದ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘ ಹಾಗೂ ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕದ ಆಧುನಿಕ ಮತ್ತು ಸಮಕಾಲೀನ ದೃಶ್ಯಕಲೆ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶದ ತೊಗಲು ಗೊಂಬೆಯಾಟದಲ್ಲಿ ಮಹಾತ್ಮಗಾಂಧಿ, ಸ್ವಾಮಿ ವಿವೇಕಾನಂದರಂತಹ ಮಹಾನ ವ್ಯಕ್ತಿಗಳು ಕಾಣಿಸಿಕೊಂಡಿದ್ದು ಗಮನಾರ್ಹ ಎಂದರು.
ದೃಶ್ಯಕಲಾ ಸಾಹಿತ್ಯದಲ್ಲಿಯೂ ಇಡೀ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಲೇಖಕರು ಈ ಭಾಗದಲ್ಲಿಯೇ ಇದ್ದಾರೆ. ಅವರುಗಳಲ್ಲಿ ವಿ.ಜಿ. ಅಂದಾನಿ, ಶಿವಾನಂದ್ ಬಂಟನೂರ್, ದೇವು ಪತ್ತಾರ್, ಬಸವರಾಜ್ ಉಪ್ಪಿನ್, ಹೆಚ್.ವಿ. ಮಂತಟ್ಟಿ, ಮಲ್ಲಿಕಾರ್ಜುನ್ ಭಾಗೋಡಿ, ಪರಶುರಾಮ್ ಪಿ. ರೆಹಮಾನ್ ಪಟೇಲ್, ಮೋಹನ್ ಪಂಚಾಳ್, ಬಸವರಾಜ್ ಕಲೆಗಾರ್, ಸತೀಶ್ ವಲ್ಲೇಪುರೆ ಮುಂತಾದವರು ದೃಶ್ಯಕಲಾ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ತೀವ್ರತೆಯಿಂದ ಮತ್ತು ಬರೆಯಲೇಬೇಕೆಂಬ ಹುಚ್ಚಿನಿಂದ, ಹಠದಿಂದ ಗಣನೀಯವಾಗಿ ಬರೆಯುತ್ತಿರುವವರು ಕೆಲವರು ಮಾತ್ರ. ಬಹುತೇಕ ಲೇಖಕರ ಬರಹಗಳಲ್ಲಿ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ವಾಸ್ತು, ಶಿಲ್ಪ, ಭಿತ್ತಿಚಿತ್ರ, ಕಲಾವಿದರ, ಕಲಾವಿದೆಯರು ಇದ್ದಾರೆ ಎಂಬುದು ಬಹಳ ಸಂತೋಷದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ರಂಗಾಯಣದ ನಿರ್ದೇಶಕ ಪ್ರಭಾಕರ್ ಜೋಶಿ ಅವರು ಮಾತನಾಡಿ, ನಮ್ಮವರನ್ನು ನಾವು ಗೌರವಿಸದೆ ಸರಕಾರಕ್ಕೆ ಗೌರವಿಸಿ ಎಂದು ಹೇಳುವಷ್ಟು ಔದಾರ್ಯ ನಮ್ಮ ಬಳಿ ಉಳಿದಿದೆ. ಖ್ಯಾತ ಚಿತ್ರಕಲಾವಿದರು ಶಂಕರರಾವ್ ಆಳಂದಕರ್ ಅವರ ಹೆಸರು ರಂಗಾಯಣದಲ್ಲಿರುವ ಕಲಾ ಗ್ಯಾಲರಿಗೆ ಇಡುವುದಕ್ಕಿಂತ ಅವರು ಕೆಲಸ ಮಾಡಿದ ಸಂಸ್ಥೆಯ ವಿಭಾಗಕ್ಕೆ ಹೆಸರಿಡಿ ಎಂದು ನಾನು ಆ ಸಂಸ್ಥೆಗೆ ಮನವಿ ಮಾಡಿದ್ದೇನೆ ಎಂದರು.
ಶರಣಬಸವೇಶ್ವರ್ ಕಾಲೇಜಿನ ಫೈನ್ ಆರ್ಟ್ ವಿಭಾಗದ ಮುಖ್ಯಸ್ಥೆ ಡಾ. ಶಾಂತಲಾ ಬಿ. ಅಪ್ಪ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ಡಾ. ಎ.ಎಸ್.ಪಾಟೀಲ್ ಅವರು ಮಾತನಾಡಿದರು. ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ್ ಪಿ, ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ಜಾನೆ ಅವರು ಕಾರ್ಯಕ್ರಮ ನಿರೂಪಿಸಿದರು.
ನಂತರ ಕಲ್ಯಾಣ ಕರ್ನಾಟಕದ ಸ್ವಾತಂತ್ರ್ಯೋತ್ತರ ದೃಶ್ಯಕಲಾ ಚಟುವಟಿಕೆಗಳು, ಕಲ್ಯಾಣ ಕರ್ನಾಟಕದ ಆಧುನಿಕ ಮತ್ತು ಸಮಕಾಲೀನ ಚಿತ್ರಕಲೆ, ಕಲ್ಯಾಣ ಕರ್ನಾಟಕದ ಆಧುನಿಕ ಮತ್ತು ಸಮಕಾಲೀನ ಶಿಲ್ಪಕಲೆ ಹಾಗೂ ಕಲ್ಯಾಣ ಕರ್ನಾಟಕದ ಆಧುನಿಕ ಮತ್ತು ಸಮಕಾಲೀನ ದೃಶ್ಯಕಲಾ ಸಾಹಿತ್ಯ ಮತ್ತು ವಿಮರ್ಶೆ ಕುರಿತು ಗೋಷ್ಠಿಗಳು ನಡೆದವು. ಒಟ್ಟು ಎರಡು ಮುಖ್ಯ ಗೋಷ್ಠಿಗಳು ಮತ್ತು ಒಂದು ಸಮನಾಂತರ ಗೋಷ್ಠಿ ನಡೆಯಿತು. ಸಂಜೆ 4.30ಕ್ಕೆ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ.ಕಾಶಿನಾಥ ಅಂಬಲಗೆ ಸಮಾರೋಪ ಭಾಷಣ ಮಾಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯ ಎನ್.ಎಸ್. ಹಿರೇಮಠ್ ಅವರು ಮಾತನಾಡಿದರು. ವಿಚಾರ ಸಂಕಿರಣ ಸಂಯೋಜಕ ಡಾ. ಪರಶುರಾಮ್ ಪಿ. ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.