ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಕುಮಾರಸ್ವಾಮಿಗೆ ಮನವಿ

ಬೀದರ್, ಸೆ. 22: ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ನಿಯೋಗ ಬೀದರನ ಶಾಸಕರಾದ ಬಂಡೆಪ್ಪ ಕಾಶಂಪುರ ನೇತೃತ್ವದಲ್ಲಿ ಭೇಟಿಮಾಡಿ ಒಕ್ಕೂಟದ ಬೇಡಿಕೆಗಳನ್ನು ತಿಳಿಸುವ ಮೂಲಕ ಪ್ರಸ್ತುತ ವಿಧಾನ ಮಂಡಲ ಅಧಿವೇಶನದಲ್ಲಿ ಸರಕಾರದ ಗಮನ ಸೇಳೆದು ಕಲಾವಿದರಿಗೆ ನ್ಯಾಯ ಒದಗಿಸಿಕೊಡುವಂತೆ ಕೋರಿ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಇಡಿ ರಾಜ್ಯದಲ್ಲಿ 24 ಟ್ರಸ್ಟ್ ಮತ್ತು ಪ್ರತಿಷ್ಠಾನ ಕಾರ್ಯನಿರ್ವಹಿಸುತ್ತಿದ್ದು ಕಲ್ಯಾಣ ಕರ್ನಾಟಕ ಭಾಗದಿಂದ 1 ಟ್ರಸ್ಟ್ ಕೂಡ ಇರುವುದಿಲ್ಲ ಕಾರಣ ಕೂಡಲೇ ಸರಕಾರ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರು ಮತ್ತು ಸಾಧಕರುಗಳಾಗಿದ್ದ ಬೀದರಿನಲ್ಲಿ ಜಯದೇವಿ ತಾಯಿ ಲಿಗಾಡೆ, ಕಲಬುರಗಿಯಲ್ಲಿ ಎಸ್.ಎಂ ಪಂಡೀತ್, ಯಾದಗಿರಿಯಲ್ಲಿ ಎಂ.ಆರ್. ಬುದ್ದಿವಂತ ಶೆಟ್ಟರ್, ರಾಯಚೂರಿನಲ್ಲಿ ಪಂಡಿತ ಸಿದ್ದರಾಮ ಜಂಬಲದಿನ್ನಿ, ಕೊಪ್ಪಳದಲ್ಲಿ ಡಾ. ಸಿದ್ದಯ್ಯ ಪುರಾಣಿಕ, ಬಳ್ಳಾರಿಯಲ್ಲಿ ಸುಬದ್ರಮ್ಮ ಮನ್ಸೂರು, ವಿಜಯನಗರದಲ್ಲಿ ಎಂ.ಪಿ ಪ್ರಕಾಶ ಇವರ ಹೆಸರಿನಲ್ಲಿ ಟ್ರಸ್ಟ್ ಗಳನ್ನು ಸ್ಥಾಪಿಸಬೇಕು.

ಆಂದ್ರ ಸರಕಾರದ ಮಾದರಿಯಲ್ಲಿ ರಾಜ್ಯದ ಕಲಾವಿದರಿಗೂ ಸರಕಾರದಿಂದ ಗುರುತಿನ ಚೀಟಿ ವಿತರಿಸಬೇಕು. ರಾಜ್ಯದಲ್ಲಿ ಸಂಗೀತ, ರಂಗಭೂಮಿ ಹಾಗೂ ಜಾನಪದ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು ಎಂದು ಹಲವು ಬೇಡಿಕೆಗಳ ಮನವಿಯನ್ನು ಒಕ್ಕೂಟದ ಪದಾಧಿಕಾರಿಗಳು ಸಲ್ಲಿಸಿದರು.

ಸಲ್ಲಿಸಿದ ಮನವಿಗೆ ಕುಮಾರಸ್ವಾಮಿಯವರು ಸಕಾರಾತ್ಮಕವಾಗಿ ಸ್ಪಂದಿಸಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅಪ್ಪಾರಾವ ಸೌದಿ, ಒಕ್ಕೂಟದ ಉಪಾಧ್ಯಕ್ಷ ಡಿಂಗ್ರಿ ನರೇಶ, ಅಶ್ವತ ನಾರಾಯಣ ಸೇರಿದಂತೆ ಇತರರಿದ್ದರು.