
ಕೆಂಭಾವಿ:ಫೆ.28: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಶನಿವಾರ ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಎಲ್ಲಿ ಕಾಣೆ ಎಲ್ಲಿ ಕಾಣೆ ಎಂಬ ಹಾಡಿಗೆ ಜೋಗತಿ ನೃತ್ಯ ಪ್ರದರ್ಶನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಉತ್ಸವದಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಏಕೈಕ ತಂಡವಾಗಿ ಆಯ್ಕೆಯಾಗಿದ್ದ ಈ ಶಾಲೆಯ ವಿದ್ಯಾರ್ಥಿನಿಯರು ತಮ್ಮ ನೃತ್ಯದ ಮೂಲಕ ಅದ್ಭುತ ಪ್ರದರ್ಶನ ತೋರಿ ನೆರೆದಿದ್ದ ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡರು.
ಹತ್ತನೆ ತರಗತಿ ವಿದ್ಯಾರ್ಥಿನಿ ಸೀಮಾ ನೇತೃತ್ವ ಮತ್ತು ಶಾಲೆಯ ಸಂಗೀತ ಶಿಕ್ಷಕ ಯಮುನೇಶ ಯಾಳಗಿ ಅವರ ವಿಶೇಷ ಕಾಳಜಿಯಿಂದ ಈಗಾಗಲೆ ಈ ಜೋಗತಿ ನೃತ್ಯ ರಾಜ್ಯದ ಹಲವು ಕಡೆ ಪ್ರದರ್ಶನ ಕಂಡು ಯಶಸ್ವಿಯಾಗಿದೆ. ತಮ್ಮ ವಿಶಿಷ್ಠ ಭಕ್ತಿ ಭಾವದ ಮೂಲಕ ಎಲ್ಲಮ್ಮನ ನೃತ್ಯ ಪ್ರದರ್ಶನ ತೋರುತ್ತಿರುವ ಸುಮಾರು 12 ಜನ ವಿದ್ಯಾರ್ಥಿನಿಯರ ತಂಡ ಜಿಲ್ಲೆಯಲ್ಲಿಯೆ ಶಿಕ್ಷಣ ಇಲಾಖೆಯಲ್ಲಿ ಮನೆಮಾತಾಗಿದೆ. ನಮ್ಮ ಈ ಯಶಸ್ಸಿಗೆ ಮುಖ್ಯಗುರು ಅನಿಲಕುಮಾರ ಹಾಗೂ ಶಾಲೆಯ ಶಿಕ್ಷಕ/ಶಿಕ್ಷಕರಿಯರ ಸಹಕಾರ ಮರೆಯುವಂತಿಲ್ಲ ಎಂದು ವಿದ್ಯಾರ್ಥಿನಿಯರು ಹೇಳಿದರು.