ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸ್ಥಳೀಯ ಕಲಾವಿದರ ಕಡೆಗಣನೆ, ಸಾಧಕರಿಗೆ ಅವಗಣನೆ: ನರಿಬೋಳ್

ಕಲಬುರಗಿ,ಫೆ.25: ನಗರದಲ್ಲಿ ಆರಂಭಗೊಂಡಿರುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಮುಖ್ಯ ವೇದಿಕೆಯಲ್ಲಿ ಅವಕಾಶ ನೀಡದೇ ಎಲ್ಲೋ ಮೂಲೆಯಲ್ಲಿ ಸಾರ್ವಜನಿಕರೇ ಇಲ್ಲದಂತಹ ಚಿಕ್ಕ ವೇದಿಕೆಯಲ್ಲಿ ಕಾಟಾಚಾರಕ್ಕೆ ಮಾಡಿಸಿರುವುದು ಖಂಡನಾರ್ಹವಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ್ ಅವರು ಆಕ್ಷೇಪಿಸಿದ್ದಾರೆ.
ಪ್ರಚಾರದಲ್ಲಿ ಇಲ್ಲಿನ ಹೆಸರಾಂತ ಕಲಾವಿದ್ದರಿದ್ದರೂ ಅವರ ಭಾವಚಿತ್ರ ಬಳಸದೇ ಅವಗಣನೆ ಮಾಡಲಾಗಿದೆ. ಇದಲ್ಲದೇ ಉತ್ಸವದ ವೇದಿಕೆಯಲ್ಲಿ ಈ ಭಾಗದ ವಿವಿಧ ರಂಗದ ಸಾಧಕರಿಗೆ ಸನ್ಮಾನ ಮಾಡುವಲ್ಲಿಯೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಗೌರವ ತೋರಿದೆ. ಸಾಧಕರನ್ನೇ ಕಡೆಗಣಿಸಿದೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಕಲ್ಯಾಣ ನಾಡಿನ ಎಲ್ಲರನ್ನೂ ಸಮಗ್ರವಾಗಿ ಸಮಾನವಾಗಿ ಮುಖ್ಯ ವೇದಿಕೆಯಲ್ಲಿ ಪ್ರದರ್ಶನ ಮಾಡಲು, ಹಾಡು, ನೃತ್ಯಕ್ಕೆ ಅವಕಾಶ ನೀಡಬೇಕಿತ್ತು. ಅದನ್ನು ಮಾಡದೇ ಸ್ಥಳೀಯರಿಗೆ ಕಡೆಗಣಿಸಲಾಗಿದೆ ಎಂದು ಖೇದ ವ್ಯಕ್ತಪಡಿಸಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಯಾಗಿದ್ದೇ ಇಲ್ಲಿನ ದಿ. ವೈಜನಾಥ್ ಪಾಟೀಲ್ ಅವರ ಹೋರಾಟದಿಂದ. ನಾವೆಲ್ಲರೂ ಅವರೊಂದಿಗೆ ಕೈಜೋಡಿಸಿದ್ದರಿಂದ ಕೇಂದ್ರ ಮಣಿದು 371(ಜೆ) ಕೊಡುಗೆ ಕೊಟ್ಟಿತು. ಅದರಿಂದ ಮಂಡಳಿ ರಚನೆಯಾಗಿ ಸಾವಿರಾರು ಕೋಟಿ ರೂ.ಗಳ ಹಣ ಬರುತ್ತಿದೆ. ಮಂಡಳಿಯಲ್ಲಿನ ಹಣ ಕಲ್ಯಾಣದ ಏಳು ಜಿಲ್ಲೆಗಳಿಗೆ, ಅಲ್ಲಿನ ಸ್ಥಳೀಯರಿಗೆ ಬಳಕೆಯಾಗಬೇಕು ಅನ್ನೋದು ಕಡ್ಡಾಯ ನಿಯಮವಾದರೂ ಉತ್ಸವದ ಹೆಸರಿನಲ್ಲಿ ಐದು ಕೋಟಿ ರೂ.ಗಳಿಗೂ ಹೆಚ್ಚು ಹಣ ಬಳಕೆಯಾಗಿದೆ. ಅದರಲ್ಲಿ ಶೇಕಡಾ 60ರಷ್ಟು ಹಣ ಹೊರಗಿನ ಕಲಾವಿದರಿಗೆ ವೆಚ್ಚ ಮಾಡಲಾಗುತ್ತಿದೆ ಹಾಗೂ ಸ್ಥಳೀಯರಿಗೆ ಕಡೆಗಣಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದಲ್ಲದೇ ಈ ಭಾಗದಲ್ಲಿರುವ ಸಾಧಕರಿಗೆ ಸ್ಮರಣಿಕೆ, ಶಾಲು, ಪ್ರಮಾಣಪತ್ರ, ಪರಿಚಯ ಪತ್ರ ನೀಡಿ ಉತ್ತಮವಾಗಿ ಗೌರವಿಸದೇ ಕಡೆಗಣಿಸಲಾಗಿದೆ. ಗೌರವಕ್ಕೆ ಆಯ್ಕೆ ಮಾಡುವಲ್ಲಿಯೇ ಮಂಡಳಿ ಎಡವಿದೆ. ಇಂತಹ ಕಾಟಾಚಾರದ ಗೌರವ ಸಾಧಕರಿಗೆ ಮಾಡಿದ ಅಪಮಾನ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಶೀಘ್ರವೇ ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳ ಹೋರಾಟಗಾರರ ಸಭೆ ಕರೆದು ಚರ್ಚಿಸಿ ಕಲ್ಯಾಣ ಕರ್ನಾಟಕ ಉತ್ಸವದಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹೆಸರು ಬರಬೇಕೇ ಹೊರತು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹಿನ್ನಡೆ ಆಗಬಾರದು. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರ ವಹಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲು ಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.