
ಕಲಬುರಗಿ,ಸೆ.1: ಕಲ್ಯಾಣ ಕಲ್ಯಾಣ ಕರ್ನಾಟಕ ಪ್ರದೇಶ ಸ್ವಾತಂತ್ರಗೊಂಡು ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಶಾಲಾ ಮಕ್ಕಳಲ್ಲಿ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ ಆಯೋಜಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ್ ಎಸ್. ಅವರು ಕಲಬುರಗಿ ವಿಭಾಗದ ಎಲ್ಲಾ ಡಿ.ಡಿ.ಪಿ.ಐ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಸುತ್ತೋಲೆ ಹೊಡಿಸಿರುವ ಅವರು, ಚಿತ್ರಕಲೆ ಸ್ಪರ್ಧೆಗೆ “ಕಲ್ಯಾಣ ಕರ್ನಾಟಕದ ವೈಶಿಷ್ಟತೆ” ಮತ್ತು ಪ್ರಬಂಧ ಸ್ಪರ್ಧೆಗೆ “ಕಲ್ಯಾಣ ಕರ್ನಾಟಕ ಅದ್ಭುತ ಇತಿಹಾಸ” ವಿಷಯ ತೆಗೆದುಕೊಂಡು ಬ್ಲಾಕ್ ಹಾಗೂ ಜಿಲ್ಲಾ ಮಟ್ಟದ ಹಂತದಲ್ಲಿ ಸ್ಪರ್ಧೆ ಏರ್ಪಡಿಸಬೇಕು. ಸ್ಪರ್ಧೆಯಲ್ಲಿ ಎಲ್ಲಾ ವಯಸ್ಸಿನ ಮಕ್ಕಳು ಮಕ್ಕಳು ಮುಕ್ತವಾಗಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಲು ಉತ್ತೇಜನ ಹಾಗೂ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದ್ದಾರೆ.
ಬ್ಲಾಕ್ ಮಟ್ಟದಲ್ಲಿ ಎರಡು ಸ್ಪರ್ಧೆಯಲ್ಲಿ ಅಗ್ರ ಮೂವರನ್ನು, ಇದೇ ಮಾದರಿಯಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಉಭಯ ಸ್ಪರ್ಧೆಯಲ್ಲಿ ಮೂವರನ್ನು ಆಯ್ಕೆ ಮಾಡಬೇಕು. ಒಟ್ಟಿನಲ್ಲಿ ಈ ಸ್ಪರ್ಧೆಗಳನ್ನು ಸೆಪ್ಟೆಂಬರ್ 10 ರೊಳಗೆ ಶಾಲಾ, ಬ್ಲಾಕ್ ಹಾಗೂ ಜಿಲ್ಲಾ ಹಂತದಲ್ಲಿ ಪಾರದರ್ಶಕವಾಗಿ ಪೂರ್ಣಗೊಳಿಸಿ ಸೆಪ್ಟೆಂಬರ್ 12 ರೊಳಗೆ ಅಪರ ಅಯುಕ್ತರ ಕಚೇರಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾದ ಎರಡು ಸ್ಪರ್ಧೆಗಳಲ್ಲಿನ ಅಗ್ರ ಮೂವರ ವಿದ್ಯಾರ್ಥಿಗಳ ಪಟ್ಟಿಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ.
ತದನಂತರ ಅಪರ ಆಯುಕ್ತರ ಕಚೇರಿಯಿಂದ ಎರಡು ವಿಭಾಗದಲ್ಲಿ ವಿಭಾಗ ಮಟ್ಟಕ್ಕೆ ಸ್ಪರ್ಧೆ ನಡೆಸಿ ಆಯ್ಕೆಯಾಗುವ ಆಯಾ ವಿಭಾಗದ ಅಗ್ರ ಮೂವರನ್ನು ಸೆ.17ರಂದು ನಡೆಯುವ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಡಾ.ಆಕಾಶ ಎಸ್. ತಿಳಿಸಿದ್ದಾರೆ.