ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಿನ್ನೆಲೆ:ರಂಗೋಲಿ, ಚಿತ್ರಕಲಾ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ ಶಾಲಾ ಮಕ್ಕಳು

ಕಲಬುರಗಿ,ಸೆ.10:ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ಮಹಾನಗರ ಪಾಲಿಕೆಯು ಶನಿವಾರ ಟೌನ್ ಹಾಲ್‍ನಲ್ಲಿ ಪ್ಲಾಗಥಾನ್ ಮತ್ತು ಪ್ಲ್ಯಾಂಟೇಶನ್ ಕಾರ್ಯಕ್ರಮಕ್ಕೆ ಪೂರಕವಾಗಿ ಆಯೋಜಿಸಿದ ರಂಗೋಲಿ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ನಗರದ ಶಾಲಾ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.
ಗ್ರೀನ್ ಇಂಡಿಯಾ-ಕ್ಲೀನ್ ಇಂಡಿಯಾ ವಿಷಯದ ಮೇಲೆ ಜರುಗಿದ ರಂಗೋಲಿ ಸ್ಪರ್ಧೆಯಲ್ಲಿ ಮಕ್ಕಳು, ಕಸ ವಿಲೇವಾರಿ, ಕಸ ಸಾಗಿಸುವ ಗಾರ್ಬೆಜ್ ವಾಹನದ ಚಿತ್ರ, ಏಕ ಬಳಕೆಯ ಪ್ಲಾಸ್ಟಿಕ್ ತ್ಯಜಿಸಿ-ಪರಿಸರ ಸಂರಕ್ಷಿಸಿ, ಒಣ ಮತ್ತು ಹಸಿ ಕಸ ಮೂಲದಲ್ಲಿಯೆ ಪ್ರತ್ಯೇಕಿಸುವ ಕುರಿತು ಸಂದೇಶ ಸಾರುವ ಬಣ್ಣ-ಬಣ್ಣದ ರಂಗೋಲಿ ಬಿಡಿಸಿದ್ದು, ನೋಡುಗರ ಗಮನ ಸೆಳೆಯಿತು.
ಟೌನ್ ಹಾಲ್ ಇಡೀ ಆವರಣ ರಂಗೋಲಿ ಬಿಡಿಸುವಲ್ಲಿ ಮಗ್ನರಾಗಿದ್ದ ಮಕ್ಕಳಿಂದ ತುಂಬಿತ್ತು. ಎಲ್ಲೆಡೆ ಮಕ್ಕಳು ರಂಗೋಲಿ ಬಿಡಿಸಿದ ಚಿತ್ರಗಳು ಕಣ್ಣಿಗೆ ಆನಂದ ನೀಡಿದವು. ಪಾಲಕರು, ಶಿಕ್ಷಕರು ಕುತೂಹಲದಿಂದ ಮಕ್ಕಳು ರಂಗೋಲಿ ಹಾಕುತ್ತಿರುವುದನ್ನು ವೀಕ್ಷಿಸಿದರು. ಸುಮಾರು 210 ಮಕ್ಕಳು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ನನ್ನ ಕಸ ನನ್ನ ಜವಾಬ್ದಾರಿ ವಿಷಯದ ಮೇಲೆ ನಡೆದ ಚಿತ್ರಕಲೆ ಬಿಡಿಸುವ ಸ್ಪರ್ಧೆಯಲ್ಲಿ ಸುಮಾರು 525 ಮಕ್ಕಳು ಭಾಗವಹಿಸಿ ಕಸ ಸಂಸಗ್ರಹಣೆ, ವಿಲೇವಾರಿ ಕುರಿತು ತರಹೆವಾರಿ ಚಿತ್ರಗಳು ಬಿಡಿಸಿದರು.