ಕಲ್ಯಾಣ ಕರ್ನಾಟಕ ಅಮೃತ ಉತ್ಸವದ ಕಾರ್ಯಕ್ರಮಗಳ ಪ್ರಸ್ತಾವನೆ ಸಲ್ಲಿಸಲು ಸೂಚನೆ

ಕಲಬುರಗಿ.ಆ.02: ಕಲ್ಯಾಣ ಕರ್ನಾಟಕ ಅಮೃತ ಉತ್ಸವ-2022 ಅನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ನಡೆಸುವ ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮಗಳ ಕುರಿತಾದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಮಂಡಳಿ ಕಾರ್ಯದರ್ಶಿ ಆರ್. ವೆಂಕಟೇಶ್ ಕುಮಾರ್ ಅವರು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದರು.
ಮಂಗಳವಾರ ಕೆಕೆಆರ್‍ಡಿಬಿ ಕಚೇರಿಯಿಂದ 7 ಜಿಲ್ಲೆಗಳ ಅಧಿಕಾರಿಗಳೊಂದಿಗೆ ಝೂಮ್ ಮೀಟಿಂಗ್ ನಡೆಸಿ ಅವರು ಮಾತನಾಡುತ್ತಿದ್ದರು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳು ಅಮೃತ ಮಹೋತ್ಸವದ ಅಂಗವಾಗಿ ತಮ್ಮ ಇಲಾಖೆ ಅಡಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಸಂಬಂಧ 2 ದಿನಗಳಲ್ಲಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅವರು ಹೇಳಿದರು.
ಕ್ರೀಡೆ, ಕಲೆ-ಸಂಸ್ಕøತಿ, ಸಾಹಿತ್ಯ, ವಿಮೋಚನಾ ಹೋರಾಟದ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು. ಈ ಮೂಲಕ ಈ ಭಾಗದ ಕಲೆ-ಸಂಸ್ಕøತಿ, ಇತಿಹಾಸ-ಪರಂಪರೆಯನ್ನು ಈ ದೇಶಕ್ಕೆ ಪರಿಚಯಿಸಬೇಕು ಎಂದು ಒತ್ತಿ ಹೇಳಿದರು.
ಕ್ರೀಡೆಗಳು ಎಂದಾಕ್ಷಣ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಿಗೆ ಸೀಮಿತವಾಗಬಾರದು. ಕಬಡ್ಡಿ,ಕುಸ್ತಿ ಸೇರಿದಂತೆ ಬೆಳಕಿಗೆ ಬಾರದ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಹೇಳಿದರು.
ಕ್ರೀಡೆ, ಪ್ರಬಂಧ ಸ್ಪರ್ಧೆ, ಕಲೆ ಮುಂತಾದ ಸ್ಪರ್ಧೆಗಳನ್ನು ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ನಡೆಸಿ ವಿಜೇತರಾದವರಿಗೆ ಜಿಲ್ಲಾಮಟ್ಟದಲ್ಲಿ ಸಮಾರಂಭ ನಡೆಸಿ, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಗೌರವಿಸಬೇಕು. ನಂತರ ವಿಭಾಗ ಮಟ್ಟದ ವಿವಿಧ ಸ್ಪರ್ಧೆಗೆ ಕಳುಹಿಸಬೇಕು. ಇಲ್ಲಿ ಅಂತಿಮ ಅಯ್ಕೆ ನಂತರ ಮುಂದಿನ ತಿಂಗಳು ಸೆಪ್ಟಂಬರ್ 17 ರಂದು ಕಲಬುರಗಿಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುವ ಕಲ್ಯಾಣ ಕರ್ನಾಟಕ ದಿನಾಚರಣೆಯ ಪ್ರಧಾನ ಸಮಾರಂಭದಲ್ಲಿ ವಿಭಾಗ ಮಟ್ಟದ ವಿಜೇತರನ್ನು ಸನ್ಮಾನಿಸಲಾಗುವುದು ಎಂದರು.
ಶಾಲಾ-ಕಾಲೇಜು, ವಿಶ್ವವಿದ್ಯಾಲಯ ಹಾಗೂ ಇನ್ನಿತರ ಮಟ್ಟದಲ್ಲಿ ಇದೇ ಆಗಸ್ಟ್ 15 ರಿಂದ ಸ್ಪರ್ಧೆಗಳನ್ನು ಆರಂಭಿಸಿ, ಸೆಪ್ಟಂಬರ್ 10 ರೊಳಗೆ ಮುಗಿಸಬೇಕು ಎಂದು ಅವರು ಹೇಳಿದರು.
ಈಗಾಗಲೇ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಇಲಾಖೆಗಳು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿವೆಯಾದರೂ, ಕಲ್ಯಾಣ ಕರ್ನಾಟಕ ಅಮೃತ ಉತ್ಸವÀದ ಅಂಗವಾಗಿ ಈ ಭಾಗದ ವಿಷಯ ಹಾಗೂ ಇತಿಹಾಸದ ಬೆಳಕು ಚೆಲ್ಲುವ ಕಾರ್ಯಕ್ರಮಗಳನ್ನು ಮುಂದುವರೆಸಬೇಕು ಎಂದು ಹೇಳಿದರು.
ಅಮೃತ ಉತ್ಸವದ ಅಂಗವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ವಿಶೇಷವಾಗಿ ಈ ಭಾಗದ ಕಲಾವಿದರಿಗೆ ಆದ್ಯತೆ ನೀಡಬೇಕು. ಹಾಫ್ ಮ್ಯಾರಥಾನ್ ಮುಂತಾದ ಕಾರ್ಯಕ್ರಮಗಳ ಆರಂಭಕ್ಕೂ ಮುನ್ನ ಕನಿಷ್ಠ ಅರ್ಧಗಂಟೆ ವಿವಿಧ ಕಲೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಹೇಳಿದರು.
ಆರೋಗ್ಯ ಇಲಾಖೆ ವತಿಯಿಂದ ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಬೇಕು. ಈ ಮೂಲಕ ಗ್ರಾಮೀಣ ಭಾಗದಲ್ಲಿ ಗುರುತರ ಸೇವೆ ಸಲ್ಲಿಸಬೇಕು ಎಂದು ಅವರು ಸಲಹೆ ನೀಡಿದರು.
ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು ಎಲ್ಲಾ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿದ್ದು, ಕಾರ್ಯಕ್ರಮಗಳ ಆಯೋಜನೆ ಕುರಿತಂತೆ ಆಯಾ ಜಿಲ್ಲೆಗಳಲ್ಲಿ ಸಮಿತಿಯ ಮುಖಂಡರಿಂದ ಸಲಹೆ-ಅಭಿಪ್ರಾಯ ಪಡೆಯಬಹುದು ಎಂದು ಅವರು ಇದೇ ಸಂದರ್ಭದಲ್ಲಿ ಅವರು ಅಧಿಕಾರಿಗಳಿಗೆ ಹೇಳಿದರು.
ಸದ್ಯದಲ್ಲೇ ಏಳೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಒಳಗೊಂಡಂತೆ ವಿಡಿಯೋ ಕಾನ್ಫೆರೆನ್ಸ್ ನಡೆಸಲಿದ್ದು, ಕಾರ್ಯಕ್ರಮಗಳ ಅಂತಿಮ ಚಿತ್ರಣ ನೀಡಲಾಗುವುದು ಎಂದು ಅವರು ಹೇಳಿದರು.
ಝೂಮ್ ಮೀಟಿಂಗ್‍ನಲ್ಲಿ ಮಂಡಳಿಯ ಜಂಟಿ ನಿರ್ದೇಶಕರಾದ ಪ್ರವೀಣ್ ಪ್ರಿಯಾ ಡೇವಿಡ್, ಶೈಕ್ಷಣಿಕ ಸಲಹೆಗಾರ ಎನ್.ಬಿ ಪಾಟೀಲ್, ವಿಶ್ವವಿದ್ಯಾಲಯಗಳ ರಿಜಿಸ್ಟ್ರಾರ್‍ಗಳು, ಸಂಬಂಧಪಟ್ಟ ಇಲಾಖೆಗಳ ಪ್ರಾದೇಶಿಕ ಹಾಗೂ 7 ಜಿಲ್ಲೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.