ಕಲ್ಯಾಣ ಕರ್ನಾಟಕ ಅಭಿವೃದ್ಧಿ: ಶ್ವೇತಪತ್ರ ಹೊರಡಿಸಲು ಬಿಜೆಪಿ ಆಗ್ರಹ

ಕಲಬುರಗಿ,ಫೆ.13-ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳಾದರೂ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಜಿಲ್ಲಾ ಅಧ್ಯಕ್ಷ ಚಂದು ಪಾಟೀಲ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಆಗ್ರಹಿಸಿದರು.
ಪಕ್ಷದ ಕಚೇರಿಯಲ್ಲಿಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಕಚೇರಿ ಮುಂದೆ ಕಲ್ಯಾಣ ರಥ ತಂದು ನಿಲ್ಲಿಸಿದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ “ನಮ್ಮ ಪ್ರಶ್ನೆಗೆ ಉತ್ತರ ನೀಡಿ” ಎಂದು ಕಾಂಗ್ರೆಸ್ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ನಮ್ಮ ಪ್ರಶ್ನೆಗೆ ಉತ್ತರ ನೀಡದೆ, ನಾವು ಯಾರೂ ಇಲ್ಲದೇ ಇದ್ದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಪಕ್ಷದ ಕಚೇರಿ ಮುಂದೆ ಬಾಡಿಗೆ ವಾಹನ ತಂದು ನಿಲ್ಲಿಸಿ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಅವರಿಗೆ ಧಮ್ಮಿದ್ದರೆ, ತಾಕತ್ತಿದ್ದರೆ 8 ತಿಂಗಳ ಅವಧಿಯಲ್ಲಿ ಏನೇನು ಅಭಿವೃದ್ಧಿ ಮಾಡಿದ್ದೇವೆ ಎಂಬುವುದರ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳಾದರೂ ರಸ್ತೆ, ನೀರು, ಆರೋಗ್ಯ ಕ್ಷೇತ್ರ ಸೇರಿದಂತೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಕೆಲಸಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆಯೇ ಹೊರತು ಇವರ ಸಾಧನೆ ಶೂನ್ಯವಾಗಿದೆ ಎಂದರು. ಇದೇ ಸ್ಥಿತಿ ಮುಂದುವರೆದರೆ ಕಾಂಗ್ರೆಸ್ ಕಚೇರಿ ಮುಂದೆ ಸತ್ಯಾಗ್ರಹ ನಡೆಸುವುದು ಸೇರಿದಂತೆ ವಿವಿಧ ರೀತಿಯ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಕ್ಷದ ನಗರ ಜಿಲ್ಲಾ ಅಧ್ಯಕ್ಷ ಚಂದು ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳಾದರೂ ಕಲಬುರಗಿ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ರೀತಿಯ ಹಣ ಬಿಡುಗಡೆ ಮಾಡಿಲ್ಲ. ಸುಳ್ಳು ಹೇಳುವುದರ ಮೂಲಕ ಜನರ ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಜನರೇ ಇವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಬರಗಾಲದಿಂದ ತತ್ತರಿಸಿರುವ ರೈತರ ನೆರವಿಗೆ ಸರ್ಕಾರ ಬಂದಿಲ್ಲ. ತೊಗರಿ ಖರೀದಿ ಕೇಂದ್ರ ತೆರೆದಿಲ್ಲ. ಬೆಂಬಲ ಬೆಲೆ ನಿಗದಿ ಮಾಡಿಲ್ಲ. 8 ತಿಂಗಳಾದರೂ ಯಾವುದೇ ಅಭಿವೃದ್ಧಿ ಮಾಡದೆ ಪಕ್ಷದ ಕಚೇರಿ ಮುಂದೆ ಬಾಡಿಗೆ ವಾಹನ ನಿಲ್ಲಿಸಿದೆ. ಮುಂಬರುವ ದಿನಗಳಲ್ಲಿ ನಾವು ಸಹ ಕೇಂದ್ರ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ” ವಿಕಸಿತ ಭಾರತ ರಥ”ವನ್ನು ಕಾಂಗ್ರೆಸ್ ಕಚೇರಿ ಮುಂದೆ ನಿಲ್ಲಿಸುತ್ತೇವೆ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ ಅವರು ರಾಜಾರೋಷವಾಗಿ ಮಾತನಾಡುತ್ತಿದ್ದಾರೆ. ಅವರು ಎಂಎಲ್‍ಸಿ ಆಗಿದ್ದಾಗ ತಲೆಗೂದಲು ಕಸಿ ಮಾಡಿಸಿಕೊಳ್ಳಲು 1 ಕೋಟಿ ರೂ.ಪಡೆದ ದಾಖಲೆಗಳು ನಮ್ಮ ಬಳಿ ಇವೆ. ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲಿ ಅವರು ತೊಡಗಿದ್ದಾರೆ. ರಾಜಕೀಯ ಮಾಡುವುದಿದ್ದರೆ ನಮ್ಮ ಜೊತೆ ಅವರು ರಾಜಕೀಯ ಮಾಡಲಿ. ನಮ್ಮ ತಂದೆಯವರ ವಿಚಾರಕ್ಕೆ ಬಂದರೆ ಸರಿಯಿರುವುದಿಲ್ಲ. ವೈಯಕ್ತಿಕ ವಿಚಾರ ತೆಗೆದುಕೊಂಡು ರಾಜಕೀಯ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ಮಹಾಪೌರ ವಿಶಾಲ ಧರ್ಗಿ ಮಾತನಾಡಿ, ನಗರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಮನವಿ ಮಾಡಿದರು ಅವರು ಸ್ಪಂದಿಸಿಲ್ಲ. ಔಷಧ ಭವನಕ್ಕೆ ದಿ.ಚಂದ್ರಶೇಖರ ಪಾಟೀಲ ರೇವೂರ ಅವರ ಪುತ್ಥಳಿ ನೀಡಿದ್ದು, ಅದರಲ್ಲೂ ರಾಜಕೀಯ ಮಾಡಲಾಗುತ್ತಿದೆ. ಚಂದ್ರಶೇಖರ ರೇವೂರ ಅವರ ಹೆಸರಿಗೆ ಬಂದರೆ ಅವರ ಅಭಿಮಾನಿಗಳು ಸುಮ್ಮನಿರುವುದಿಲ್ಲ ಎಂದು ಹೇಳಿದರು.
ಮಹಾದೇವ ಬೆಳಮಗಿ, ಶಿವಯೋಗಿ ನಾಗನಳ್ಳಿ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.