ಕಲ್ಯಾಣ ಕರ್ನಾಟಕ ಅಭಿವೃದ್ಧಿಯಲ್ಲಿ ಪತ್ರಕರ್ತರ ಕೊಡುಗೆ ಅಪಾರ : ಗುರುರಾಜ

ಲಿಂಗಸುಗೂರು.ಸೆ.೧೯- ಕಲ್ಯಾಣ ಕರ್ನಾಟಕ (ಹೈದ್ರಾಬಾದ್-ಕರ್ನಾಟಕ) ಹಿಂದುಳಿದ ಪ್ರದೇಶ ಎನ್ನುವ ಹಣೆ ಪಟ್ಟಿ ಅಳಿಸುವಲ್ಲಿ ಪತ್ರಕರ್ತರ ಪಾತ್ರ ಅಪಾರವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅದ್ಯಕ್ಷ ಗುರುರಾಜ ಗೌಡೂರು ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ಯ ಧ್ವಜಾರೋಹಣ ನೆರವೇರಿಸಿದ ಅವರು, ಇತ್ತೀಚಿನ ದಿನಗಳಲ್ಲಿನ ಕಲ್ಯಾಣ ಕರ್ನಾಟಕ ಹೆಸರಿಗೆ ತಕ್ಕಂತೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಹಲವು ಉನ್ನತ ಶೈಕ್ಷಣಿಕ ಸಂಸ್ಥೆಗಳು, ಕಾರ್ಖಾನೆಗಳು ಸ್ಥಾಪನೆಯಾಗಿ ನೂರಾರು ಉದ್ಯೋಗಗಳೂ ಸೃಷ್ಠಿಯಾಗಿವೆ. ಅಲ್ಲದೇ, ಈ ಭಾಗದ ವಿದ್ಯಾರ್ಥಿಗಳು ದಕ್ಷಿಣ ಕರ್ನಾಟಕಕ್ಕೆ ಪೈಪೋಟಿ ನೀಡುವಷ್ಟು ಬುದ್ಧಿವಂತವಾಗುತ್ತಿರುವುದು ಪ್ರಶಂಸನೀಯ. ಈ ಭಾಗದ ಅಭಿವೃದ್ಧಿಯಲ್ಲಿ ಮಾಧ್ಯಮ ಹೆಚ್ಚಿನ ಬೆಳಕು ಚೆಲ್ಲುವ ಮೂಲಕ ಸರಕಾರದ ಕಣ್ತೆರೆಸುತ್ತಿದೆ. ಮಾಡಿದ್ದು ಅಲ್ಪ, ಮಾಡಬೇಕಾದ್ದು ಬಹಳ ಎನ್ನುವಂತೆ ಸರಕಾರ ವಿಶೇಷವಾದ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುವ ಮೂಲಕ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕಿದೆ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಕೈಜೋಡಿಸುವ ಮೂಲಕ ಸರಕಾರದ ಮೇಲೆ ಒತ್ತಡ ಹಾಕಿ ಅಭಿವೃದ್ಧಿಗೆ ಮುಂದಾಗಬೇಕೆಂದು ಹೇಳಿದರು.
ಹಿರಿಯ ಪತ್ರಕರ್ತ ಎನ್. ಬಸವರಾಜ ರಾಷ್ಟ್ರಪಿತ ಮಹಾತ್ಮಾಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್‌ರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಅಮರಯ್ಯ ಘಂಟಿ, ಉಪಾದ್ಯಕ್ಷ ಮಹ್ಮದ್ ಖಾಜಾಹುಸೇನ್, ಜಿಲ್ಲಾ ಸಮಿತಿ ಸದಸ್ಯ ಶಿವರಾಜ ಕೆಂಭಾವಿ, ಕಾರ್ಯದರ್ಶಿ ರಾಘವೇಂದ್ರ ಭಜಂತ್ರಿ, ಪತ್ರಕರ್ತರಾದ ಹನುಮಂತ ಕನ್ನಾಳ, ಪಂಪಾಪತಿ, ಗಂಗಾಧರ ನಾಯಕ, ಯಲ್ಲಪ್ಪ ವಂದಲಿ, ರವಿಕುಮಾರ ಹೊಸಮನಿ, ಸಾದತಲಿ, ಪ್ರಮೋದ ಕುಲಕರ್ಣಿ ಸೇರಿದಂತೆ ಇದ್ದರು.