ಕಲ್ಯಾಣ ಕರ್ನಾಟಕ ಅಭಿವೃದ್ಧಿ:ನರಿಬೋಳ ಆಶಯ

ಕಲಬುರಗಿ,ಜೂ 10:ಡಾ.ಶರಣಪ್ರಕಾಶ ಪಾಟೀಲ,ಪ್ರಿಯಾಂಕ್ ಖರ್ಗೆ,ಈಶ್ವರ ಖಂಡ್ರೆ ಮತ್ತು ಶರಣಬಸಪ್ಪಗೌಡ ದರ್ಶನಾಪುರ ಅವರ ಉಸ್ತುವಾರಿಯಲ್ಲಿ ಕಲ್ಯಾಣ ಕರ್ನಟಕದ ಕಲಬುರಗಿ, ಬೀದರ, ಯಾದಗಿರಿ ಜಿಲ್ಲೆಗಳು ಅಭಿವೃದ್ಧಿ ಪಥದಲ್ಲಿ ಸಾಗುವುದರಲ್ಲಿ ಅನುಮಾನವಿಲ್ಲ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ಆಶಯ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಸಚಿವರಾದ ಕೂಡಲೆ ವಿರೋಧ ಪಕ್ಷದಲ್ಲಿದ್ದಾಗ ಆಡಿದ್ದ ಮಾತುಗಳನ್ನ ಕಾರ್ಯರೂಪಕ್ಕೆ ತರುವ ಮಾತುಗಳನ್ನಾಡಿ ಮಾತಿಗಷ್ಟೇ ಸೀಮಿತವಾಗದೆ ಹಲವು ಹಗರಣಗಳ ತನಿಖೆಗೆ ಚಾಲನೆ ನೀಡಿದ್ದಲ್ಲದೆ,ಭ್ರಷ್ಟಾಚಾರ ಮಾಡುವವರಿಗೆ ಜಿಲ್ಲೆಯಲ್ಲಿ ಇರಲು ಬಿಡುವುದಿಲ್ಲ ಎಂದಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮುಂಗಾರು
ಅವಧಿಯಲ್ಲಿ ರೈತರು ಬೀಜ ಮತ್ತು ಗೊಬ್ಬರ ಸಮಸ್ಯೆ ಎದುರಿಸದಂತೆ ಅಗತ್ಯ ಪ್ರಮಾಣದ ದಾಸ್ತಾನು ಇರುವಂತೆ ಜಾಗ್ರತೆ ವಹಿಸಲು ಈಗಾಗಲೇ ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಮೇಲಾಗಿ, ತೊಗರಿ ರೋಗಕ್ಕೆ ಕಾಡುವ ನೆಟೆರೋಗ ಸಮಸ್ಯೆಯ ನಿರ್ವಹಣೆ ಕುರಿತು ರೈತರಿಗೆ ತರಬೇತಿ ನೀಡಲು ತೊಗರಿ ನೆಟೆರೋಗ ನಿರ್ವಹಣೆ, ಬಸವನ ಹುಳು ನಿಯಂತ್ರಣ ಕುರಿತು ರೈತರಿಗೆ ಕಾಲಕಾಲಕ್ಕೆ ಮಾಹಿತಿ ಒದಗಿಸಲು ಕೃಷಿ ಇಲಾಖೆ ವತಿಯಿಂದ “ಕೃಷಿ ಮಾಹಿತಿ ರಥ”ಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಕಲಬುರಗಿಯ ಇ.ಎಸ್.ಐ.ಸಿ ಆಸ್ಪತ್ರೆಗೆ ಹೊಂದಿಕೊಂಡಂತೆ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆ ಮಂಜೂರಾತಿಗಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಕಾರ್ಯ ಆರಂಭಿಸಿದ್ದಾರೆ.ನಗರದಲ್ಲಿ ಅತಿ ಶೀಘ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ,ಟ್ರಾಮಾ ಆಸ್ಪತ್ರೆ ಲೋಕಾಪರ್ಣೆಗೊಳಿಸುವುದಾಗಿ ಭರವಸೆ ನೀಡಿದ್ದಾರೆ.ಕಲ್ಯಾಣ ಕರ್ನಾಟಕ ಭಾಗದ ಎಲ್ಲ ರಾಜ್ಯ ಸರಕಾರಿ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ಈಶ್ವರ ಖಂಡ್ರೆ ಶರಣಬಸ್ಸಪ್ಪಗೌಡ ದರ್ಶನಾಪುರ ಅವರುಗಳು ಕೂಡಾ ಚುರುಕಿನಿಂದ ಕೆಲಸ ಪ್ರಾರಂಭಿಸಿರುವದು ನೋಡಿದರೆ ಕ ಕ ಜಿಲ್ಲೆಗಳು ಅಭಿವೃದ್ಧಿಪಥದಲ್ಲಿ ಸಾಗುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.