ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪರ ಹೋರಾಟ ಯಶಸ್ವಿ: 371(ಜೆ) ಕಲಂ ಸಮರ್ಪಕ ಅನುಷ್ಠಾನಕ್ಕಾಗಿ ಚಳುವಳಿಗೆ ನಿರ್ಧಾರ

ಕಲಬುರಗಿ:ಜೂ.3: 371ನೇ ಜೇ ಕಲಂ ಕಲ್ಯಾಣ ಕರ್ನಾಟಕ ಅಭಿವೃದ್ಧಿಪರ ಹೋರಾಟ ಯಶಸ್ವಿ ಮಾಡಿದ ಸಮಸ್ತ ಜನತೆಗೆ ಧನ್ಯವಾದಗಳು ಹಾಗೂ 371(ಜೆ) ಕಲಂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ರಾಜಕೀಯ ರಹಿತ ಹೋರಾಟಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಅಧ್ಯಕ್ಷ ಲಕ್ಷ್ಮಣ್ ದಸ್ತಿ ಅವರು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದ ಅಸ್ತಿತ್ವದ ರಕ್ಷಣೆಗೆ ಮತ್ತು ಬೆಂಗಳೂರಿನ ಕೆಲವು ಪಟ್ಟಭದ್ರ ಹಿತಾಸಕ್ತಿ ಶಕ್ತಿಗಳ ಕಲ್ಯಾಣ ಕರ್ನಾಟಕ ವಿರೋಧಿ ಧೋರಣೆಗೆ ಖಂಡಿಸಿ ನಗರದಲ್ಲಿ ಹಮ್ಮಿಕೊಂಡಿದ್ದ ಹೋರಾಟಕ್ಕೆ ಸ್ಪಂದಿಸಿ ನಮ್ಮ ಪ್ರದೇಶದ ಅಭಿವೃದ್ಧಿಪರ ಅಭಿಮಾನದಿಂದ ಶಿಕ್ಷಣ ಸಂಸ್ಥೆಗಳ ಮುಖಂಡರು, ಸಿಬ್ಬಂದಿವವರ್ಗ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಯಾ ಸಂಘ ಸಂಸ್ಥೆಗಳ,ಜನಪರ ಕನ್ನಡ ಪರ, ದಲಿತ ಹಿಂದುಳಿದ ಅಲ್ಪಸಂಖ್ಯಾತರ ಕಾರ್ಮಿಕ ರೈತ ಯುವಪರ ಸಂಘಟನೆಗಳು ಹಾಗೂ ಆಯಾ ಕ್ಷೇತ್ರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಪ್ರದೇಶದ ಸ್ವಾಭಿಮಾನದ ಪ್ರತೀಕವಾದ ಹೋರಾಟದ ಯಶ್ವಸ್ವಿಗೆ ಕಾರಣರಾದ ಸಮಸ್ತ ಜನತೆಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಧನ್ಯವಾದ ಸಲ್ಲಿಸುವುದಾಗಿ ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನ 371ನೇ ಜೇ ಕಲಂ ವಿಶೇಷ ಸ್ಥಾನಮಾನ ಜಾರಿಯಾದ ನಂತರ ಕರ್ನಾಟಕ ರಾಜ್ಯದ ಬಹುತೇಕ ಸರ್ಕಾರಿ ನೌಕರಿಗಳು ಮತ್ತು ಶೈಕ್ಷಣಿಕ ಪ್ರವೇಶಗಳು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳೆ ಪಡೆಯುತ್ತಿದ್ದಾರೆ ಇದರಿಂದ ರಾಜ್ಯದ ಇಪ್ಪತ್ನಾಲ್ಕು ಜಿಲ್ಲೆಗಳ ಜನರಿಗೆ ಅನ್ಯಾಯವಾಗುತ್ತಿದೆ ಹೀಗೆ ಮುಂದುವರೆದರೆ ಬರುವ ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದವರೇ ಕರ್ನಾಟಕದ ತುಂಬ ಎಲ್ಲ ನೌಕರಿಗಳು ಕಬಿಳಿಸುತ್ತಾರೆ ಎಂದು ಸುಳ್ಳು ಸುದ್ದಿಯನ್ನು ಸೃಷ್ಟಿಸಿ ನಮ್ಮ ಪ್ರದೇಶದ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ರಾಜಧಾನಿ ಬೆಂಗಳೂರಿನಲ್ಲಿ ಹಸಿರು ಪ್ರತಿಷ್ಠಾನ ಸಂಘಟನೆಯ ಮೂಲಕ ನಮ್ಮ ಕಲ್ಯಾಣ ಕರ್ನಾಟಕದ ವಿರುದ್ಧ ಪ್ರತಿಭಟನೆ ಮಾಡಿರುವುದಲ್ಲದೆ
ಇಪ್ಪತ್ನಾಲ್ಕು ಜಿಲ್ಲೆಗಳಲ್ಲಿ ಅಪಪ್ರಚಾರದ ಅಭಿಯಾನ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಹಸಿರು ಪ್ರತಿಷ್ಠಾನ ಹೆಸರಿನ ಸಂಘಟನೆ ಸಂವಿಧಾನದ 371ನೇ ಜೇ ಕಲಂ ತಿದ್ದುಪಡಿಯ ಮೂಲ ಆಶಯಕ್ಕೆ ವಿರುದ್ಧವಾಗಿ ಮತ್ತು ಸಂವಿಧಾನ ವಿರೋಧಿ ಧೋರಣೆ ಅನುಸರಿಸುವ ಮೂಲಕ ನಮ್ಮ ಪ್ರದೇಶದ ಅಭಿವೃದ್ಧಿ ವಿರುದ್ಧ ನಡೆಸುತ್ತಿರುವ ಅಪ ಪ್ರಚಾರವನ್ನು ಖಂಡಿಸಿ ಬರುವ ದಿನಗಳಲ್ಲಿ ಕಲ್ಯಾಣದ ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ್, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ನಮ್ಮ ಅಸ್ತಿತ್ವದ ರಕ್ಷಣೆಗೆ ಮತ್ತು 371ನೇ ಜೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯಿಸಿ, ಪಕ್ಷಾತೀತವಾಗಿ ಶುದ್ಧ ರಾಜಕೀಯೇತರ ತಳಹದಿಯ ಮೇಲೆ ಎಲ್ಲ ಧರ್ಮಗಳ, ಮಠಾಧೀಶರ, ಶಿಕ್ಷಣ ಸಂಸ್ಥೆಗಳ, ಸಂಘ ಸಂಸ್ಥೆಗಳ, ಸಂಘಟನೆಗಳ, ಆಯಾ ರಾಜಕೀಯ ಪಕ್ಷಗಳ ಸಂಯೋಗದಿಂದ ಹೋರಾಟ ನೆಡೆಸಲು ನಿರ್ಧರಿಸಲಾಗಿದೆ. ಇದಕ್ಕೆ ಪೂರಕವಾಗಿ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಹೋರಾಟದ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.