ಕಲ್ಯಾಣ ಕರ್ನಾಟಕದ ಹಿರಿಯ ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಯಲ್ಲಿ ಅನ್ಯಾಯ: ನಮೋಶಿ

ಕಲಬುರಗಿ.ಮೇ.21:ಕಲ್ಯಾಣ ಕರ್ನಾಟಕ ಭಾಗದ ಹಿರಿಯ ವೈದ್ಯಾಧಿಕಾರಿಗಳ ಹುದ್ದೆಗಳ ಭರ್ತಿ ಮಾಡುವ ಪ್ರಕ್ರಿಯೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಶಶೀಲ್ ಜಿ. ನಮೋಶಿ ಅವರು ಆರೋಪಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಇರುವ ಹಿರಿಯ ವೈದ್ಯಾಧಿಕಾರಿಗಳು, ತಜ್ಞರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಮತ್ತು ದಂತ ವೈದ್ಯಾಧಿಕಾರಿಗಳ ಹುದ್ದೆಗಳು ಮತ್ತು ಬ್ಯಾಕ್‍ಲಾಗ್ ಹುದ್ದೆಗಳ ನೇಮಕಾತಿ ಅಧಿಸೂಚನೆ 2020ರ ಸೆಪ್ಟೆಂಬರ್ 10ರ ನೇಮಕಾತಿ ಅಧಿಸೂಚನೆಯನ್ನು ಅನ್ಯಾಯವನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಕಳೆದ 2020ರ ಸೆಪ್ಟೆಂಬರ್ 10ರಂದುಯ ನೇಮಕಾತಿ ಕುರಿತು ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಕಲ್ಯಾಣ ಕರ್ನಾಟಕದ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳು 151, ಕಲ್ಯಾಣ ಕರ್ನಾಟಕೇತರ 1095 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 2020ರ ಸೆಪ್ಟೆಂಬರ್ 16ರಂದು ಅರ್ಜಿ ಸಲ್ಲಿಸಲು ಪ್ರಾರಂಭ ಹಾಗೂ 2020 ಅಕ್ಟೋಬರ್ 15ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಅದರಂತೆ ವೈದ್ಯಾಧಿಕಾರಿಗಳ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಳೆದ ಏಪ್ರಿಲ್ 3ರಂದು ಪ್ರಕಟಿಸಿದ್ದಾರೆ. ಅದರಲ್ಲಿ ಉಳಿದ ವೃಂದ (ಕಲ್ಯಾಣ ಕರ್ನಾಟಕೇತರ) 947, ಕಲ್ಯಾಣ ಕರ್ನಾಟಕ 113 ಬ್ಯಾಕ್‍ಲಾಗ್ ಉಳಿದ ವೃಂದ (ಕಲ್ಯಾಣ ಕರ್ನಾಟಕೇತರ) ಐದು ಒಟ್ಟು 1065 ನಮ್ಮ ಕಲ್ಯಾಣ ಕರ್ನಾಟಕದ ಅನೇಕ ವೈದ್ಯಾಧಿಕಾರಿಗಳು ಹೆಚ್ಚಿನ ಅಂಕ ಮತ್ತು ಪ್ರತಿಶತ: ಪಡೆದು ಆಯ್ಕೆಯಾಗಿದ್ದಾರೆ. ತಾತ್ಕಾಲಿಕ ಆಯ್ಕೆಪಟ್ಟಿ ವಿಶೇಷ ಸೂಚನೆಯಂತೆ 371(ಜೆ) ಮೂಲ ಸೌಕರ್ಯಗಳನ್ನು ಪಡೆಯಲು ಇಚ್ಛಿಸಿದಲ್ಲಿ ನಿಗದಿಪಡಿಸಿರುವ ಹದಿನೈದು ದಿನಗಳೊಳಗೆ ಇಚ್ಛಾಪತ್ರವನ್ನು ಸಲ್ಲಿಸಲು ಸೂಚಿಸಿರುತ್ತಾರೆ. ಅದರಲ್ಲಿ ಅನೇಕ ಅಭ್ಯರ್ಥಿಗಳು ಇಚ್ಛಾಪತ್ರವನ್ನು ಸಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಳೆದ ಮೇ 12ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ್ದಾರೆ. ಅದರಲ್ಲಿ ಉಳಿದ ವೃಂದ (ಕಲ್ಯಾಣ ಕರ್ನಾಟಕೇತರ) 911, ಕಲ್ಯಾಣ ಕರ್ನಾಟಕ 132 ಜನ ಬ್ಯಾಕ್‍ಲಾಗ್ ಉಳಿದ ವೃಂದ (ಕಲ್ಯಾಣ ಕರ್ನಾಟಕೇತರ) ನಾಲ್ಕು, ಕಲ್ಯಾಣ ಕರ್ನಾಟಕ- 1 ಸೇರಿ ಒಟ್ಟು 35 ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮ ಆಯ್ಕೆ ಪಟ್ಟಿಯಲ್ಲಿ ಕೈಬಿಟ್ಟಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದರಿ ಸುತ್ತೋಲೆಯಂತೆ ನೇಮಕಾತಿಗಾಗಿ ಸೂಚಿಸಲಾದ ಅರ್ಜಿಯಲ್ಲಿಯೇ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನು ಯಾವ ವೃಂದದ ಹುದ್ದೆಗಳಿಗೆ ಸೇರಬಯಸುತ್ತೀರೆಂದು ಆಯ್ಕೆಯನ್ನು ಕೇಳಬಹುದಾಗಿದೆ. ನಂತರ ಯಾವುದೇ ಕಾರಣಕ್ಕೂ ಆಯ್ಕೆಯನ್ನು ಬದಲಾಯಿಸಲು ಸಾಧ್ಯವಿರುವುದಿಲ್ಲ. ಅದರಂತೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸುವಾಗ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ಮೆರಿಟ್ ಮತ್ತು ವೃಂದವನ್ನು ಪರಿಗಣಿಸಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಬೇಕು ಎಂದು ಅವರು ತಿಳಿಸಿದ್ದಾರೆ.
ಅಂತಿಮ ಆಯ್ಕೆಪಟ್ಟಿ ಪ್ರಕಟಿಸುವ ಮುಂಚೆ ಯಾವುದೇ ಇಚ್ಛೆಯನ್ನು ಅಭ್ಯರ್ಥಿಗಳಿಂದ ಪಡೆಯುವಂತಿಲ್ಲ. ಹೀಗಿದ್ದರೂ ಕೂಡ ಇಚ್ಛಾಪತ್ರವನ್ನು ಕೇಳಿ ಅಭ್ಯರ್ಥಿಗಳನ್ನು ಗೊಂದಲದಲ್ಲಿ ಸಿಲುಕಿಸಿ ಅವರಿಗೆ ಅನ್ಯಾಯವನ್ನು ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.
ಅದೇ ರೀತಿಯಾಗಿ ಪಿಯು ಇಲಾಖೆಯಲ್ಲಿ ಕೂಡ ತಪ್ಪಾಗಿತ್ತು. ನ್ಯಾಯಾಲಯವು ತೀರ್ಪು ಕಲ್ಯಾಣ ಕರ್ನಾಟಕ ಭಾಗದ ಆಯ್ಕೆಯಾದ ಉಪನ್ಯಾಸಕ ಆಯ್ಕೆ ಪಟ್ಟಿ ಸರಿಪಡಿಸಬೇಕು ಎಂದು ತೀರ್ಪು ಪ್ರಕಟಿಸಿತು. ಅದರಂತೆ ಸುಮಾರು ಉಪನ್ಯಾಸಕರ ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗದವರಿಗೆ ದೊರೆಯಿತು. ಆದ್ದರಿಂದ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.