ಕಲ್ಯಾಣ ಕರ್ನಾಟಕದ ಹಕ್ಕಿಗಾಗಿ ನಿರಂತರ ಹೋರಾಟಕ್ಕೆ ನಿರ್ಧಾರ

ಕಲಬುರಗಿ,ಏ.2-ಕಲ್ಯಾಣ ಕರ್ನಾಟಕದ ಹಕ್ಕಿಹಾಗಿ ನಿರಂತರ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಜನಪರ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶದ ಪ್ರತ್ಯೇಕ ಬಜೆಟ್ ಮಂಡನೆ ಕನಸಾಗಿಯೇ ಉಳಿದಿದೆ. 371ನೇ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನದ ಬಗ್ಗೆ , ಮಂತ್ರಿ ಮಂಡಲದಲ್ಲಿ ಸ್ಥಾನ ನೀಡುವ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಈ ಭಾಗಕ್ಕೆ ಮಂಜೂರಾದ ಯೋಜನೆಗಳು, ಮಂಜೂರಾಗಬೇಕಾದ ಯೋಜನೆಗಳು ಮತ್ತು ಇದ್ದಂತಹ ಯೋಜನೆಗಳು, ನೆನೆಗುದಿಗೆ ಬಿದ್ದಿವೆ. ಅನೇಕ ಯೋಜನೆಗಳನ್ನು ಸ್ಥಳಾಂತರ ಮಾಡುತ್ತಿರುವುದು, ರದ್ದು ಮಾಡಲಾಗುತ್ತಿದೆ. ಇದರಿಂದ ಕರ್ನಾಟಕ ರಾಜ್ಯದಲ್ಲಿ ನಮ್ಮ ಭವಿಷ್ಯವಿಲ್ಲವೆಂಬುದು ಸ್ಪಷ್ಟವಾಗುತ್ತಿದೆ. ಇದನ್ನು ಗಮನದಲ್ಲಿಟ್ಟು ಕೊಂಡು ಸಮಿತಿ ಫೆಬ್ರುವರಿ 2ನೇ ವಾರದಲ್ಲಿ ಸರ್ವ ಪಕ್ಷಗಳ ಸಭೆ ನಡೆಸಿದ್ದು, ಈ ಸಭೆಯಲ್ಲಿ ಎಲ್ಲಾ ಪಕ್ಷಗಳ ನಾಯಕರ ಸಂಘಟಿತ ಇಚ್ಛಾಶಕ್ತಿ ವ್ಯಕ್ತಪಡಿಸಲು ಒಕ್ಕೋರಲಿನಿಂದ ಒತ್ತಾಯಿಸಲಾಗಿದೆ. ಅದರಂತೆ ಆದಷ್ಟೂ ಶೀಘ್ರ ಮುಖ್ಯಮಂತ್ರಿಗಳ ಹತ್ತಿರ ಸರ್ವ ಪಕ್ಷಗಳ ನಿಯೋಗ ತೆಗೆದುಕೊಂಡು ಹೋಗುವ ಬಗ್ಗೆ ನಿರ್ಣಯಿಸಿರುವಂತೆ ನಿಯೋಗ ಹೋಗಲೇಬೇಕಾಗಿದೆ. ಇದರ ಜೊತೆಗೆ ನಿರಂತರ ಒತ್ತಡ ಹೋರಾಟಗಳು ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ಭಾಗದ ಅಭಿವೃದ್ಧಿಯ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದರ ವಿರುದ್ಧ ಧರ್ಮಾತೀತವಾಗಿ, ಪಕ್ಷಾತೀತವಾಗಿ, ವರ್ಗಾತೀತವಾಗಿ ಶುದ್ಧ ರಾಜಕೀಯೇತರ ತಳಹದಿಯ ಮೇಲೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸಂಘಟಿತ ಜನಾಂದೋಲನ ಸ್ವರೂಪ ತರುವುದು ಅತಿ ಅವಶ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೂಜ್ಯರ, ಗಣ್ಯರ, ಹಾಗೂ ಎಲ್ಲಾ ಕ್ಷೇತ್ರದವರ ಅಭಿಪ್ರಾಯ ತೆಗೆದುಕೊಂಡು ಅವರ ಸಲಹೆ, ಸಹಕಾರ ಬೆಂಬಲ ಪಡೆಯಲು, ಕಲ್ಯಾಣ ಕರ್ನಾಟಕದ ಧರ್ಮಗುರುಗಳು ಮತ್ತು ಮಠಾಧೀಶರೊಂದಿಗೆ, ಹಾಲಿ ಮತ್ತು ಮಾಜಿ ಸಚಿವರು, ಸಂಸದರು, ಶಾಸಕರೊಂದಿಗೆ ಎಲ್ಲಾ ರಾಜಕೀಯ ಮುಖಂಡರೊಂದಿಗೆ, ಬುದ್ಧಿ ಜೀವಿಗಳು, ಚಿಂತಕರು, ಸಾಹಿತಿಗಳು, ಆಯಾ ಕ್ಷೇತ್ರದ ಗಣ್ಯರು, ಸ್ವಾತಂತ್ರ ಹೋರಾಟಗಾರರು, ಏಕೀಕರಣ ಹೋರಾಟಗಾರರು, ಮಾಧ್ಯಮ ಗಣ್ಯರು, ಕನ್ನಡಪರ, ಜನಪರ, ದಲಿತ, ಹಿಂದುಳಿದ, ಅಲ್ಪ ಸಂಖ್ಯಾತರ ರೈತ, ಕಾರ್ಮಿಕ, ಯುವ ಮತ್ತು ವಿದ್ಯಾರ್ಥಿ ಪರ ಹೋರಾಟಗಾರರೊಂದಿಗೆ, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಮುಖಂಡರೊಂದಿಗೆ, ಪ್ರತ್ಯೇಕವಾಗಿ ಸಮಾಲೋಚನೆ ಸಭೆಗಳು ನಡೆಸಿ ನಮ್ಮ ಹಕ್ಕಿನ ಅಭಿವೃದ್ಧಿಗಾಗಿ ಹೋರಾಟ ಮುಂದುವರೆಸಬೇಕೆ? ಇಲ್ಲವೆ ನಮ್ಮದೇ ಆದ ಶ್ರೀಮಂತ ಇತಿಹಾಸ ಹೊಂದಿರುವ ಅಪಾರ ಜಲ ಸಂಪತ್ತು, ಭೂ ಸಂಪತ್ತು, ಖನಿಜ ಸಂಪತ್ತು, ಮಾನವ ಸಂಪತ್ತು ಹೊಂದಿರುವ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯ ರಚನೆಗಾಗಿ ಹೋರಾಡಬೇಕೆಂಬುದರ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿ ನಿರ್ಧರಿಸಲು ಬರುವ ದಿನಗಳಲ್ಲಿ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ “ಕಲ್ಯಾಣ ಕರ್ನಾಟಕ ಜನತಾ ಮಹಾ ಅಧಿವೇಶನ” ನಡೆಸಲು ನಿರ್ಧರಿಸಲಾಗಿದೆ. ಈ ಐತಿಹಾಸಿಕ ಕಲ್ಯಾಣ ಕರ್ನಾಟಕ ಮಹಾ ಅಧಿವೇಶನದಲ್ಲಿ ಎಲ್ಲಾ ಧರ್ಮಗುರುಗಳು, ಮಠಾಧೀಶರು, ಹಾಲಿ ಮತ್ತು ಮಾಜಿ ಸಚಿವರು, ಸಂಸದರು, ಶಾಸಕರು, ಎಲ್ಲಾ ಪಕ್ಷಗಳ ಮುಖಂಡರು, ಬುದ್ಧಿ ಜೀವಿಗಳು, ಚಿಂತಕರು, ಆರ್ಥಿಕ ತಜ್ಞರು, ಕಲ್ಯಣ ಕರ್ನಟಕ ಪರ ಹೋರಾಟಗಾರರು ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಮುಖಂಡರು, ಸಾಹಿತಿಗಳು ಸೇರಿದಂತೆ ಎಲ್ಲಾ ಕ್ಷೇತ್ರದ ಆಯ್ದ 200 ರಿಂದ 500 ಪ್ರತಿನಿಧಿಗಳು ಭಾಗವಹಿಸುವಂತೆ ಆಯಾ ಕ್ಷೇತ್ರದ ಗಣ್ಯರ ಸಮ್ಮತಿ ಪಡೆದು “ಮಹಾ ಅಧಿವೇಶನ” ಹಮ್ಮಿಕೊಳ್ಳ ಲಾಗುವುದು ಎಂದು ತಿಳಿಸಿದರು.
ಈ ಅಧಿವೇಶನದಲ್ಲಿ ಕೈಗೊಳ್ಳುವ ನಿರ್ಣಯದಂತೆ ನಮ್ಮ ಹಕ್ಕಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಸಂಘಟಿತ ರಾಜಕಿಯ ಒತ್ತಡ ತರುವುದರ ಬಗ್ಗೆ, ಉಗ್ರ ಸ್ವರೂಪದ ರೀತಿಯಲ್ಲಿ ಧರಣಿ ಸತ್ಯಾಗ್ರಹ, ರಸ್ತೆ ತಡೆ, ಹೆದ್ದಾರಿ ತಡೆ, ರೈಲು ರೋಕೊ, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಬಂದ್, ಹೀಗೆ ವಿನೂತನ ಮಾದರಿಯ ನಿರಂತರ ಹೋರಾಟಗಳು ನಡೆಸಿ ವಿಧಾನ ಸೌಧ ಮುತ್ತಿಗೆ ಹಾಕಲು ಮಹಾ ಅಧಿವೇಶನದಲ್ಲಿ ಚರ್ಚಿಸಿ ಸರ್ವಾನುಮತದ ದಿಟ್ಟ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಮನೀಷ್ ಜಾಜು, ಶಿವಲಿಂಗಪ್ಪ ಬಂಡಕ್, ಲಿಂಗರಾಜ ಸಿರಗಾಪೂರ, ಮಹಮ್ಮದ ಮಿರಾಜೊದ್ದೀನ್, ಅಸ್ಲಂ ಚೌಂಗೆ, ಭದ್ರಶೆಟ್ಟಿ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.