ಕಲ್ಯಾಣ ಕರ್ನಾಟಕದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಐತಿಹಾಸಿಕ ಕಾರ್ಯಕ್ರಮ:ದತ್ತಾತ್ರೇಯ ಪಾಟೀಲ್ ಸಿ.ರೇವೂರ್

ಕಲಬುರಗಿ,ಸೆ.14: ಕಲ್ಯಾಣ ಕರ್ನಾಟಕದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕಲಬುರಗಿಯಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯಲಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಸಿ.ರೇವೂರ್ ಅವರು ಹೇಳಿದರು.

ಬುಧವಾರದಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಸೆಪ್ಟೆಂಬರ್ 17 ರಂದು ಬೆಳಿಗ್ಗೆ 8.30 ಕ್ಕೆ ಸರ್ದಾರ ವಲ್ಲಭಭಾಯ್ ಪಟೇಲ್ ಮೂರ್ತಿಗೆ ಮಾರ್ಲಾಪಣೆ ಮಾಡುವರು. ಬೆಳಿಗ್ಗೆ 9 ಗಂಟೆಗೆ ಪೊಲೀಸ್ ಪರೆಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನರವೇರಿಸಲಿದ್ದಾರೆ. ಬೆಳಿಗ್ಗೆ 10.30 ಗಂಟೆಗೆ ಎನ್.ವಿ ಕಾಲೇಜು ಮೈದಾನದಲ್ಲಿ ಫಲಾನುಭವಿಗಳ ಉದ್ದೇಶಿಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 30 ರಿಂದ 40 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 15 ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ಸಾಂಸ್ಕೃತಿಕ ಕಲಾ ತಂಡಗಳ ಭವ್ಯ ಮೆರವಣಿಗೆ ನಡೆಯಲಿದ್ದು, ನಗರೇಶ್ವರ ಶಾಲೆ ಬಳಿ
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ
ಬಸವರಾಜ್ ಪಾಟೀಲ್ ಸೇಡಂ ಅವರು ಚಾಲನೆ ನೀಡುವರು ಎಂದರು.

ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ವತಿಯಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೊಸದಾಗಿ 316 ಬಸ್ಸಗಳನ್ನು ಖರೀದಿಸಲು 45 ಕೋಟಿ ರೂ. ಅನುದಾನ ನೀಡಲು ಮಂಜೂರಾತಿ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 1060 ಹೊಸದಾಗಿ ಶಾಲಾ ಕೊಠಡಿಗಳ (38 ತಾಲೂಕುಗಳಿಗೆ) ನಿರ್ಮಾಣಕ್ಕಾಗಿ 159 ಕೋಟಿ ರೂ. ಅನುದಾನ ನೀಡಲು ಮಂಡಳಿ ಮಂಜೂರಾತಿ ನೀಡಿದೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಈ ಭಾಗದ 7 ಜೆಲ್ಲೆಗಳಲ್ಲಿ 20 ಪರಿಶಿಷ್ಟ ಜಾತಿ ಹಾಗೂ 20 ಪರಿಶಿಷ್ಟ ಪಂಗಡದ ಹಾಸ್ಟೆಲ್ ನಿರ್ಮಾಣಕ್ಕಾಗಿ 204 ಕೋಟಿ ರೂ. ಅನುದಾನ ಮಂಜೂರಾತಿ ನೀಡಲಾಗಿದೆ.ವಕೊಪ್ಪಳ ಜೆಲ್ಲೆಯ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗಾಗಿ 40 ಕೋಟಿ ಹಾಗೂ ಕಲಬುರಗಿ ಕೋಟೆಯ ಅಭಿವೃದ್ಧಿಗೆ 20 ಕೋಟಿ ಅನುದಾನ ಮಂಜೂರಾತಿ ನೀಡಲಾಗಿದೆ.

ಮೂಲಭೂತ ಸೌಕರ್ಯದ ಅಡಿಯಲ್ಲಿ ರಾಯಚೂರು ವಿಮಾನ ನಿಲ್ದಾಣಕ್ಕಾಗಿ 50 ಕೋಟಿ ರೂ., ಬಳ್ಳಾರಿ ಹಾಗೂ ಕೊಪ್ಪಳ ವಿಮಾನ ನಿಲ್ದಾಣಕ್ಕಾಗಿ ತಲಾ 40 ಕೋಟಿ ರೂ. ಅನುದಾನ ಮಂಜೂರಾತಿ ನೀಡಲಾಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನೂತನ ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕಾಗಿ 29 ಕೋಟಿ ರೂ. ನೀಡಲಾಗಿದೆ ಎಂದು ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.

ಕಲಬುರಗಿಯಲ್ಲಿ ಮುಂದಿನ ತಿಂಗಳು ಆರೋಗ್ಯ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಡಿಸೆಂಬರ್ ತಿಂಗಳಿನಲ್ಲಿ ಮೆಗಾ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಸೆಪ್ಟೆಂಬರ್ 17ರ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಬೃಹತ್ ಮತ್ತು‌ ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಮುರಗೇಶ್ ನಿರಾಣಿ, ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಙಯೋಜನೆ ಮತ್ತು ಸಾಂಖ್ಯಿಕ ಸಚಿವ ಮುನಿರತ್ನ ಅವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.