
ಕಾಳಗಿ :ಮಾ.15: ಕಲ್ಯಾಣ ಕರ್ನಾಟಕದ ಶಿಲ್ಪಕಲೆಗಳ ತವರೂರು ಎಂದೇ ಸುಪ್ರಸಿದ್ಧಿಯನ್ನು ಪಡೆದಿರುವ “ದಕ್ಷಿಣಕಾಶಿ” ಕಾಳಗಿಯಲ್ಲಿ, ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರ ನೇತೃತ್ವದಲ್ಲಿ ಇದೇ ಮಾರ್ಚ್ ತಿಂಗಳ ಅಂತ್ಯದಲ್ಲಿ ಪ್ರಥಮ ಬಾರಿಗೆ ಕಾಳಗಿ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಬಹು ವಿಜೃಂಭಣೆಯಿಂದ ನಡೆಯಲಿದೆ ಎಂದು ಕಸಾಪ ಕಾಳಗಿ ತಾಲೂಕು ಅಧ್ಯಕ್ಷ ಸಂತೋಷ ಕುಡ್ಡಳ್ಳಿ ತಿಳಿಸಿದ್ದಾರೆ.
ಕೋಟಿ ಲಿಂಗಗಳ ತಾಣ, ನೈಸರ್ಗಿಕವಾಗಿ ಪುಟಿದೇಳುತ್ತಿರುವ ಜೀವ ಜಲಧಾರೆಗಳು, ನಕ್ಷತ್ರ ಮಾದರಿಗಳಲ್ಲಿ ವಿಶೇಷವಾಗಿ ಕೆತ್ತಲ್ಪಟ್ಟಿರುವ ಶಿಲ್ಪಕಲೆಗಳು, ಕನ್ನಡ ಸಾಹಿತ್ಯವನ್ನು ಎತ್ತಿ ಹಿಡಿಯುವಂತಹ ಶಾಸನಗಳು, ನಯನಮನೋಹರವಾಗಿ ಹರಿಯುತ್ತಿರುವ ರೌದ್ರಾವತಿ ನದಿಯ ನರ್ತನದಿಂದ ಕಂಗೋಳಿಸುತ್ತಿರುವ ಸಾಹಿತ್ಯದ ಚಿಲುಮೆ ಕಾಳಗಿಯಲ್ಲಿ ಇದುವರೆಗೂ ಕನ್ನಡದ ಕಹಳೆಯನ್ನು ಊದದಿರುವುದು ವಿಪರ್ಯಾಸವೇ ಸರಿ.
ಕಾಳಗಿ ತಾಲೂಕಿನವರೇ ಆಗಿರುವ ಕಲಬುರಗಿ ಜಿಲ್ಲೆಯ ಕಸಾಪ ಅಧ್ಯಕ್ಷರಾದ ವಿಜಯಕುಮಾರ ತೇಗಲತಿಪ್ಪಿ ಅವರು, ಹಬುದಿನಗಳಿಂದಾದರೂ ಸರಿ, ಕನ್ನಡದ ಕಿಚ್ಚನ್ನು ಹೊತ್ತಿಸುವ ನಿಟ್ಟಿನಲ್ಲಿ ಕಾಳಗಿಯಲ್ಲಿ ಪ್ರಥಮ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಈ ಭಾಗದ ಸಾಹಿತ್ಯಾಸಕ್ತರಿಗೆ ಸಂತೋಷವನ್ನುಂಟು ಮಾಡಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕಾಳಗಿ ತಾಲೂಕು ಕಸಾಪ ಅಧ್ಯಕ್ಷ ಸಂತೋಷ ಕುಡ್ಡಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಭಾವಿಸಭೆಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಬೆಕಾಗುವ ಸಮಗ್ರ ಮಾಹಿತಿ, ಸಲಹೆ-ಸೂಚನೆಗಳನ್ನು ಕ್ರೂಢಿಕರಿಸಿದರು. ವಿವಿಧ ಕನ್ನಡಪರ ಸಂಘಟನೆಗಳ ಮಾರ್ಗದರ್ಶನ, ಸಾಹಿತಿಗಳ ಅಭಿಪ್ರಾಯ, ಕನ್ನಡಾಸಕ್ತರ ಅನಿಸಿಕೆ, ಸಮ್ಮೇಳನಕ್ಕೆ ಬೇಕಾಗುವ ಸಾಮಗ್ರಿಗಳು, ಭವ್ಯಮೇರವಣಿಗೆ, ಕಲಾ ತಂಡಗಳ ಪ್ರದರ್ಶನ, ಕವಿಗೋಷ್ಠಿಗಳು, ಕವನವಾಚನಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಚಿಂಚೋಳಿ ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ಅವರನ್ನು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಘೋಸಿಸಲಾಯಿತು.
ದಕ್ಷಿಣಕಾಶಿ ಕಾಳಗಿಯಲ್ಲಿ ಪ್ರಪ್ರಥಮವಾಗಿ ನಡೆಯುವ ಕನ್ನಡ ಜಾತ್ರೆಗೆ ತಾಲೂಕಿನ ನಾಗರಿಕರು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು, ಕನ್ನಡಪರ ಸಂಘಟನಾಕಾರರು, ಸ್ತ್ರೀ..ಶಕ್ತಿ ಸಂಘಗಳು ಸೇರಿದಂತೆ ಪ್ರತಿಯೊಬ್ಬರೂ ಈ ಕನ್ನಡದ ಕೆಲಸಕ್ಕೆ ಕೈಜೋಡಿಸಿ ಕಾಳಗಿಯಾಧ್ಯಾಂತ ಕನ್ನಡದ ಕಲರವ ಚಿಮ್ಮಿಸುವಂತಾಗಬೇಕು ಎಂದು ಕಾಳಗಿ ತಾಲೂಕು ಕಸಾಪ ಅಧ್ಯಕ್ಷ ಸಂತೋಷ ಕುಡ್ಡಳ್ಳಿ ಮನವಿ ಮಾಡಿಕೊಂಡರು.
ಯಲ್ಲಾಲಿಂಗ ಮಾಲಿಪಾಟೀಲ, ಸತೀಶ್ಚಂದ್ರ ಸುಲೆಪೇಟ್, ಮಲ್ಲಿನಾಥ ಪಾಟೀಲ ಕಾಳಗಿ, ಶೇಖರಮಲಿಪಾಟೀಲ, ರಾಜಕುಮಾರ ರಾಜಾಪೂರ, ಪ್ರಶಾಂತ ಕದಂ, ಶಿವರಾಜ ಪಾಟೀಲ ಹೆಬ್ಬಾಳ, ಶ್ರೀಕಾಂತ ಕದಂ, ಪರಮೇಶ್ವರ ಕಟ್ಟಿಮನಿ, ಸಂತೋಷ ನರನಾಳ, ರಮೇಶ ಕಿಟ್ಟದ, ರಾಜೇಂದ್ರಬಾಬು ಹೀರಾಪೂರಕರ್, ನಿಂಬೆಣ್ಣಪ್ಪ ಪಾಟೀಲ, ರಾಜು ಪವಾರ ಮಂಗಲಗಿ, ಸಂತೋಷ ಜಾಧವ ಕಾಳಗಿ, ರಮೇಶ ಜಾಧವ, ಭೀಮರಾಯ ಮಲಘಾಣ, ಶರಣಗೌಡ ಭಂಟನಳ್ಳಿ, ಕೃಷ್ಣಾ ಸಿಂಗಶೇಟ್ಟಿ ಸೇರಿದಂತೆ ಅನೇಕರಿದ್ದರು.
.