ಕಲ್ಯಾಣ ಕರ್ನಾಟಕದ ಭಾವೈಕ್ಯ ನಿಧಿ ಆಲ್ದಾಳ: ಮಹಿಪಾಲರೆಡ್ಡಿ

ಕಲಬುರಗಿ.ಮೇ.28:ವಿಶ್ವವಿದ್ಯಾಲಯದಂತಹ ಶಿಕ್ಷಣದ ಒಂದಂಶವೂ ಪಡೆಯದ ಎಲ್.ಬಿ.ಕೆ.ಆಲ್ದಾಳರು ತಾವೇ ಒಂದು ರಂಗಭೂಮಿ ವಿಶ್ವವಿದ್ಯಾಲಯದಂತಿದ್ದರು ಎಂದು ಕಲಬುರಗಿಯ ಹಿರಿಯ ಪತ್ರಕರ್ತ-ಲೇಖಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಹೇಳಿದರು.
ಯಡ್ರಾಮಿ ತಾಲೂಕಿನ ಸಗರಾದ್ರಿ ಸಾಂಸ್ಕøತಿಕ ಸಂಗಮ ವೇದಿಕೆ ಹಾಗೂ ಶ್ರೀ ಮುರುಘೇಂದ್ರ ಶಿವಯೋಗಿ ವಿರಕ್ತಮಠದ ಸಹಯೋಗದಲ್ಲಿ ಇತ್ತೀಚೆಗೆ ನಿಧನ ಹೊಂದಿದ ರಂಗಕರ್ಮಿ ಎಲ್.ಬಿ.ಕೆ.ಆಲ್ದಾಳ ಅವರಿಗೆ ಆಯೋಜಿಸಿದ್ದ ಆನ್‍ಲೈನ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್.ಬಿ.ಕೆ.ಆಲ್ದಾಳ ಹೆಸರಿನಿಂದ ನಾಡಿನ ತುಂಬೆಲ್ಲ ತಮ್ಮದೆ ಆದ ಛಾಪು ಮೂಡಿಸಿದವರು. ಲಾ¯ಮಹ್ಮದ ಬಂದೇನವಾಜ ಖಲೀಫ್ ಆಲ್ದಾಳ. ಇವರ ಪೂರ್ಣ ಹೆಸರು ಕೇಳಿದಾಗ ಮಾತ್ರ ಇವರೊಬ್ಬ ಇಸ್ಲಾಂ ಧರ್ಮಿಯರು ಎಂಬುದು ಗೊತ್ತಾಗುತ್ತಿತ್ತು. ಹುಟ್ಟು ಮುಸ್ಲಿಂನಾಗಿದ್ದರೂ ಅವರೊಬ್ಬ ಕಲ್ಯಾಣ ನಾಡಿನ ಸೌಹಾರ್ದದ ನೆಲೆಯಾಗಿದ್ದರು. ತತ್ವಪದಗಳು, ಜಾನಪದ, ಪೌರಾಣಿಕ, ಐತಿಹಾಸಿಕ ನಾಟಕ ಅಲ್ಲದೆ, ವೀರಶೈವ ಲಿಂಗಾಯತ ಮಠಗಳ ಇತಿಹಾಸ ಪುರುಷರ ಚರಿತ್ರೆಗಳ ರಚಿಸುವುದರ ಮೂಲಕ ಸಾವಿರಾರು ಓದುಗರನ್ನು ತಮ್ಮತ್ತ ಸೆಳೆದಿದ್ದರು ಎಂದರು.
ಕಲ್ಯಾಣ ಕರ್ನಾಟಕದಲ್ಲಿ ಸೌಹಾರ್ದ ನೆಲೆ ಒದಗಿಸುವಲ್ಲಿ ಒಂದು ಗಟ್ಟಿ ಸಾಹಿತ್ಯ ಕಟ್ಟಿಕೊಡುವುದರ ಮೂಲಕ ತಾವೆ ಒಬ್ಬ ರಂಗ ಸಂತನಾಗಿ ಹೊರಹೊಮ್ಮಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಾಯಿತು. ಕೇವಲ ಏಳನೆಯ ತರಗತಿ ಓದಿ, ರಚಿಸಿದ ‘ನಮಸ್ಕಾರ’ ನಾಟಕ, ವಚನಗಳು ವಿಶ್ವವಿದ್ಯಾಲಯದ ಎಂ.ಎ.ತರಗತಿಯ ಪಠ್ಯವಾಗುವುದೆಂದರೆ ಸಾಮಾನ್ಯ ಸಂಗತಿ ಅಲ್ಲ. ಆ ಸಾಹಿತ್ಯದಲ್ಲಿನ ರಸಾನುಭವವೆ ಇದಕ್ಕೆ ಕಾರಣವಾಗಿದೆ ಎಂದರು. ತಮ್ಮ ಅತ್ಯಂತ ಕಡು ಬಡತನದಲ್ಲಿ ಸ್ವಲ್ಪವೂ ವಿಚಲಿತರಾಗದೆ ಅವರು ಗೈದ ಸಾಹಿತ್ಯ ಸೇವೆ ಅನುಪಮವಾದದ್ದು. ಆ ಮೂಲಕ ನಾಡಿನ ತುಂಬೆಲ್ಲ ಆಲ್ದಾಳರ ಒಂದು ದೊಡ್ಡ ಅಭಿಮಾನಿ ಬಳಗವೆ ಹುಟ್ಟಿಕೊಂಡಿತು. ಅವರ ಈ ಜೀವನ, ಸಾಹಿತ್ಯ ಸೇವೆ ಗುರುತಿಸಿ ರಾಜ್ಯೋತ್ಸವ, ಡಾ| ಗುಬ್ಬಿವೀರಣ್ಣ ಪ್ರಶಸ್ತಿ, ಆಳ್ವಾಸ್ ನುಡಿಸಿರಿ, ವರದರಾಜ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ ಪುರಸ್ಕಾರಗಳು ಅವರನ್ನು ಅಪ್ಪಿಕೊಂಡವು. ಕಲ್ಯಾಣ ಕರ್ನಾಟಕದಲ್ಲಿಯೇ ರಂಗಭೂಮಿಯ ಹಿರಿಯ ದಿಗ್ಗಜರಾಗಿದ್ದ ಎಲ್.ಬಿ,ಕೆ.ಆಲ್ದಾಳರು ತಮ್ಮ ವಿವಿಧ ಪ್ರಕಾರದ ಸಾಹಿತ್ಯದ ಮೂಲಕ ನಮ್ಮ ಮಧ್ಯೆ ಅಮರರಾಗಿದ್ದಾರೆ. ಅವರ ಆದರ್ಶ ಜೀವನ ನಮಗೆಲ್ಲಾ ಸರ್ವಕಾಲಕ್ಕೂ ಮಾದರಿಯಾಗಿದೆ ಎಂದು ಅವರನ್ನು ಸ್ಮರಿಸಿದರು.
ಇದಕ್ಕೂ ಮೊದಲು ಸಗರಾದ್ರಿ ಸಾಂಸ್ಕøತಿಕ ಸಂಗಮದ ಗೌರವ ಸಂಚಾಲಕರಾದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಈ ಕೊರೊನಾ ತಂದ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಗಮದ ಹುಣ್ಣಿಮೆ ಕಾರ್ಯಕ್ರಮ ಭೌತಿಕವಾಗಿ ನಡೆಸಲು ಸಾಧ್ಯವಾಗಲಿಲ್ಲ. ಈ ಕಾರಣವಾಗಿ ಆನ್ಲೈನ್ ಮೂಲಕ ಸರಣಿ-24ರ ಕಾರ್ಯಕ್ರಮ ಯಶಸ್ವಿಯಾಗಿದ್ದು ತುಂಬಾ ಸಂತೋಷಕರ. ಇಂತಹ ಸಂದಿಗ್ಧ ಪರಿಸ್ಥಿತಿ ಮುಂದುವರೆದರೆ ಸಂಗಮದ ಕಾರ್ಯಚಟುವಟಿಕೆಗಳು ಆನ್‍ಲೈನ್ ಮೂಲಕವೆ ನಡೆಸಲಾಗುವುದು. ಇಂದಿನ ಈ ಹುಣ್ಣಿಮೆಯಲ್ಲಿ ವಿಶೇಷವಾಗಿ ರಂಗಸಂತ ಜಂಗಮ ಆಲ್ದಾಳರಿಗೆ ನುಡಿನಮನ ಅರ್ಪಿಸಿದ್ದು ಸ್ತುತ್ಯಾರ್ಹವಾಗಿದೆ ಎಂದರು.
ಈ ಆನ್‍ಲೈನ್ ಕಾರ್ಯಕ್ರಮದಲ್ಲಿ ಖ್ಯಾತ ಸಂಶೋಧಕಿ ಡಾ| ಹನುಮಾಕ್ಷಿ ಗೋಗಿ ಧಾರವಾಡ, ಸಾಹಿತಿ, ಚಿಂತಕ ಮಲ್ಲಿಕಾರ್ಜುನ ಕಡಕೋಳ ದಾವಣಗೆರೆ, ಹಿರಿಯ ಪತ್ರಕರ್ತ ಬಾಬುರಾವ ಯಡ್ರಾಮಿ, ಸುಧೀಂದ್ರ ಕುಲಕರ್ಣಿ ಬೆಂಗಳೂರು, ಬೆಳಗಾವಿಯ ಶಮಾ ಜಮಾದಾರ ಯರಗಟ್ಟಿ, ಕೋಲಾರದ ಅಶೋಕಬಾಬು, ಬಾಗಲಕೋಟೆ ಗುಳೇದಗುಡ್ಡದ ಶಿವಕುಮಾರ ಕರನಂದಿ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ಸಾಹಿತಿ, ಲೇಖಕರು, ಆಲ್ದಾಳರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲೇಖಕ ಪ್ರಹ್ಲಾದ ಪತ್ತಾರ ನಿರೂಪಿಸಿದರು, ಸಂತೋಷ ನವಲಗುಂದ ವಂದಿಸಿದರು.