ಕಲಬುರಗಿ.ಮೇ.29: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ನೂತನ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಕಾಲಮಿತಿಯ ಪ್ರಗತಿಗೆ ಮತ್ತು ಜ್ವಲಂತ ಸಮಸ್ಯೆಗಳ ನಿವಾರಣೆಗೆ ಗಂಭೀರ ಸವಾಲಾಗಿ ಸ್ವೀಕರಿಸಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ್ ದಸ್ತಿಯವರು ಆಗ್ರಹಿಸಿದರು.
ಸಮಿತಿ ಸೋಮವಾರ ಕರೆದ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಕಲ್ಯಾಣದ ಪರಿಣಾಮಕಾರಿ ಅಭಿವೃದ್ಧಿಗೆ ಮತ್ತು ಹೆಚ್ಚಿನ ಅನುದಾನಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕಿ ಹೋರಾಟ ನಡೆಸಿದ ಫಲ ಸ್ವರೂಪ ಸರ್ಕಾರ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಾ ಬಂದಿದೆ. ಆದರೆ ನಮ್ಮ ಪ್ರದೇಶದಲ್ಲಿ ಅನುದಾನ ವೆಚ್ಚವಾಗದೆ ಪ್ರಗತಿಯೂ ಆಗದೇ, ಆಗಿರುವ ಅನುದಾನದ ವೆಚ್ಚದಲ್ಲಿ ಭ್ರಷ್ಠಾಚಾರ ನಡೆದಿರುವುದು ಖಂಡನೀಯ ವಿಷಯವಾಗಿದೆ ಎಂದರು.
ಪ್ರಸ್ತುತ ಸರ್ಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಹೆಸರಿನಲ್ಲಿ ನಡೆದಿರುವ ಭ್ರಷ್ಠಾಚಾರದ ಬಗ್ಗೆ ಯಾವುದೇ ಮುಲಾಜಿಲ್ಲದೆ ತನಿಖೆ ನಡೆಸಬೇಕು. ಇದರಿಂದ ಭವಿಷ್ಯದಲ್ಲಿ ಭ್ರಷ್ಠ ರಾಜಕಾರಣಿಗಳಿಗೆ, ಭ್ರಷ್ಠ ಅಧಿಕಾರಿಗಳಿಗೆ ಪಾಠವಾಗುತ್ತದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಅಶೋಕ್ ಗುರೂಜಿ, ಲಿಂಗರಾಜ್ ಸಿರಗಾಪೂರ್, ಶಿವಲಿಂಗಪ್ಪ ಬಂಡಕ್, ಕಲ್ಯಾಣರಾವ್ ಪಾಟೀಲ್, ಭೀಮಶೆಟ್ಟಿ ಮುಕ್ಕಾ, ವೀರೇಶ್ ಪುರಾಣಿಕ್, ಬಿ.ಬಿ. ನಾಯಕ್, ಅಬ್ದುಲ್ ರಹೀಮ್, ಜ್ಞಾನಮಿತ್ರ ಸ್ಯಾಮ್ಯುವೆಲ್, ಮರಲಿಂಗಪ್ಪ ಖಿಣ್ಣಿಕೇರಿ, ಬಾಬು ಫಕ್ರುದ್ದೀನ್, ಸಾಜಿದ್ ಅಲಿ ರಂಜೋಲಿ, ಎಂ.ಡಿ. ಗೌಸ್, ಅಸ್ಲಂ ಚೌಂಗೆ, ರಾಜೇಶ್ ಶಿವಶರಣಪ್ಪ, ಸಂತೋಷ್ ಜವಳಿ, ಡಾ. ಮಾಜಿದ್ ದಾಗಿ, ಶಿವಾನಂದ್ ಅಣಜಗಿ, ಶರಣಬಸಪ್ಪ ಕೆ. ಅವರು ಮಾತನಾಡಿ, ಕಲ್ಯಾಣ ಕರ್ನಾಟಕದ ನೀರಾವರಿ, ಕೈಗಾರಿಕೆ, ರಸ್ತೆ, ಸಾರಿಗೆ, ಶಿಕ್ಷಣ, ಉದ್ಯೋಗ, 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನ, ಕೆ.ಕೆ.ಅರ್.ಡಿ.ಬಿಗೆ ಬಲಿಷ್ಠ ಸ್ವರೂಪ ನೀಡುವುದು ಮತ್ತು ಆ ಮೂಲಕ ಪರಿಣಾಮಕಾರಿ ಅಭಿವೃದ್ಧಿ ಮಾಡುವುದು ಸೇರಿದಂತೆ, ಮಹತ್ವದ ಸಲಹೆಗಳನ್ನು ನೀಡಿದರು. ಎಲ್ಲ ಪ್ರಮುಖರ ಸಲಹೆಯಂತೆ ಸಭೆಯ ಅಧ್ಯಕ್ಷತೆ ವಹಿಸಿದ ಲಕ್ಷ್ಮಣ್ ದಸ್ತಿಯವರು ಪ್ರಮುಖ ನಿರ್ಣಯಗಳನ್ನು ಮಂಡಿಸಿದರು.
ಕಲ್ಯಾಣ ಕರ್ನಾಟಕಕ್ಕೆ ಬಿಡುಗಡೆಯಾಗುವ ದೈನಂದಿನ ಬಜೆಟ್ ಹಣ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ವೈಜ್ಞಾನಿಕ ಕ್ರೀಯಾ ಯೋಜನೆಯಂತೆ ಪಾರದರ್ಶಕತೆಯ ಮಾನದಂಡದ ಆಧಾರದ ಮೇಲೆ ಕಾಲಮಿತಿಯಲ್ಲಿ ಆಯಾ ಸಾಲಿನಲ್ಲಿ ಹಣ ವೆಚ್ಚ ಮಾಡುವುದರ ಜೊತೆಗೆ ಗುಣಮಟ್ಟದ ಕಾಮಗಾರಿಗಳು ಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನೀಲಿ ನಕ್ಷೆಯನ್ನು ತಯಾರಿಸಿ ಬಹಿರಂಗಪಡಿಸಿ ಅದರ ಆಧಾರದ ಮೇಲೆ ಅಭಿವೃದ್ಧಿ ಕೈಗೊಳ್ಳಬೇಕು ಎಂದು ಸಭೆ ನಿರ್ಣಯಿಸಿತು.
ಸಮಿತಿ ಈಗಾಗಲೇ ಸರ್ಕಾರಕ್ಕೆ ಒತ್ತಾಯಿಸಿದಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಿ ಕಡ್ಡಾಯವಾಗಿ ಸಚಿವರೇ ಇದಕ್ಕೆ ಸರದಿವಾರು ಅಧ್ಯಕ್ಷರಾಗಬೇಕು ಮತ್ತು ಮಂಡಳಿಯ ಮೂಲಕ ದೂರದೃಷ್ಟಿಯ ವೈಜ್ಞಾನಿಕ ಕ್ರೀಯಾ ಯೋಜನೆಯಂತೆ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಹೆಸರಿನಲ್ಲಿ ದೈನಂದಿನ ಬಜೆಟ್ ಮತ್ತು ವಿಶೇಷ ಅನುದಾನದಡಿ ಆಗಿರುವ ಭ್ರಷ್ಠಾಚಾರಗಳ ಬಗ್ಗೆ ನಿರ್ದಾಕ್ಷಿಣವಾಗಿ ತನಿಖೆ ನಡೆಸಬೇಕು. ನೂತನ ಸಚಿವರು, ಶಾಸಕರು, ಅಭಿವೃದ್ಧಿಪರ ಅಹವಾಲುಗಳಿಗೆ ಮತ್ತು ಅಂತಹ ಜನರಿಗೆ ಮೊದಲನೇ ಆದಿತ್ಯ ನೀಡಬೇಕು. ಅಭಿವೃದ್ಧಿಯ ವಿಷಯಗಳಿಗೆ ಸ್ಪಂದಿಸುವ ಚಿಂತಕರ, ಹೋರಾಟಗಾರರ ಮನವಿಗಳಿಗೆ, ದೂರವಾಣಿ ಕರೆಗಳಿಗೆ ಸ್ಪಂದಿಸಬೇಕು ಎಂದು ಸಭೆ ತೀರ್ಮಾನ ತೆಗೆದುಕೊಂಡಿತು.
ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಸಂಬಂಧಿಸಿ ನೂತನ ಸಚಿವರಿಗೆ ಸಮಾಲೋಚನೆ ಸಭೆಗಳು ನಡೆಸಿ ಸಮಿತಿಯಿಂದ ಪ್ರಸ್ತಾವನೆ ಸಲ್ಲಿಸುವುದರ ಜೊತೆಗೆ ನಮ್ಮ ಸಚಿವರು ಮತ್ತು ಶಾಸಕರುಗಳ ಸಹಯೋಗದೊಂದಿಗೆ, ನೂತನ ಮುಖ್ಯಮಂತ್ರಿ, ಮತ್ತು ಉಪ ಮುಖ್ಯಮಂತ್ರಿಗಳ ಹತ್ತಿರ ನಿಯೋಗ ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸುವುದು. ಕಲ್ಯಾಣ ಕರ್ನಾಟಕದಲ್ಲಿ ಅಧಿಕಾರಶಾಹಿ ಮತ್ತು ಅಧಿಕಾರಿಗಳ ದರಬಾರಿಗೆ ಕಡಿವಾಣ ಹಾಕಿ ಅಧಿಕಾರಿಗಳಿಗೆ ಜನಪರ ಕಾಳಜಿಯಂತೆ ವರ್ತಿಸಲು, ಸಕಾಲದಲ್ಲಿ ಜನರ ಅರ್ಜಿಗಳ ವಿಲೆವಾರಿ ಮಾಡಲು ಕಟ್ಟುನಿಟ್ಟಾಗಿ ನೂತನ ಸರ್ಕಾರ ಆದೇಶಿಸಬೇಕು. 371ನೇ(ಜೆ) ಸಂಪುಟ ಉಪ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷರನ್ನು ಕಲ್ಯಾಣ ಕರ್ನಾಟಕದ ಸಚಿವರನ್ನೇ ನೇಮಿಸಬೇಕು. ಕಾಲಮಿತಿಯಲ್ಲಿ ಪ್ರತ್ಯೇಕ ಸಚಿವಾಲಯ ರಚನೆ ಮತ್ತು ವಿಶೆಷ ಸ್ಥಾನಮಾನದ ಪರಿಣಾಮಕಾರಿ ಅನುಷ್ಠಾ£ ಹಾಗೂÀ ಖಾಲಿ ಹುದ್ದೆಗಳ ಭರ್ತಿಗಳು ಮತ್ತು ಮುಂಬಡ್ತಿಗಳು ಕಾರ್ಯಾಚರಣೆ ರೂಪದಲ್ಲಿ ಕೈಗೊಳ್ಳಬೇಕು ಎಂದು ಸಭೆ ನಿರ್ಣಯಿಸಿತು.
ನೆನೆಗುದಿಗೆ ಬಿದ್ದಿರುವ ಬೇಡಿಕೆಗಳಾದ ಕಲ್ಯಾಣ ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆ, ನೀಮ್ಝ, ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ವತಿಯಿಂದ ಅಧಿಕೃತ ಒತ್ತಡ ತರುವುದು. ಸಮಿತಿಯಿಂದ ಅಭಿವೃದ್ಧಿ ಮತ್ತು 371ನೇ(ಜೆ) ಕಲಂ ದಡಿ ನಮ್ಮ ಮೀಸಲಾತಿಯ ನೇಮಕಾತಿಗಳ, ಮುಂಬಡ್ತಿಗಳ ವಿಷಯಗಳಿಗೆ ಸಂಬಂಧಿಸಿ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಭೇಟಿ ನೀಡಿ ಸಮಾಲೋಚನ ಅಭಿಯಾನ ನಡೆಸಲು ಸಭೆ ನಿರ್ಧರಿಸಿತು.
ದುಂಡು ಮೇಜಿನ ಸಭೆಯಲ್ಲಿ ಬಾಬುರಾವ್ ಗಂವ್ಹಾರ್, ಸಿದ್ರಾಮ್ ಭೈರಾಮಡಗಿ, ಇಕ್ಬಾಲ್ ಅಹಮದ್, ಸಾಬಿರ್ ಅಲಿ, ಪ್ರಭಾಕರ್, ಮಲ್ಲಿನಾಥ್ ಸಂಗಶೆಟ್ಟಿ, ಪರಮೇಶ್ವರ್ ಹಡಪದ್, ರಾಜು ಜೈನ್, ಮಲ್ಲಿಕಾರ್ಜುನ್ ಭೂಸನೂರ್, ಭೀಮರಾಯ್ ಕಂದಳ್ಳಿ, ಅನಿಲ್ ಕುಲಕರ್ಣಿ, ದೇವೇಂದ್ರ ಬಿರಾದಾರ್, ಮುನ್ನಿ ಬೇಗಂ, ಮುಮ್ತಾಜ್ ಬೇಗಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.