ಕಲ್ಯಾಣ ಕರ್ನಾಟಕದ ಏಮ್ಸ್ ಮತ್ತು ರೈತ ಸಂತ್ರಸ್ತರ ಹೋರಾಟಕ್ಕೆ ಕೇಂದ್ರ, ರಾಜ್ಯ ಸರ್ಕಾರ ಸ್ಪಂದಿಸಲು ದಸ್ತಿ ಒತ್ತಾಯ

ಕಲಬುರಗಿ:ಜ.10: ಕಲ್ಯಾಣ ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಗಾಗಿ ಹಾಗೂ ಸಂತ್ರಸ್ತ ರೈತರ ಬೇಡಿಕೆಗಳ ಇಡೇರಿಕೆಗಾಗಿ ಹೋರಾಟಗಳು ಆರಂಭಗೊಂಡಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಪಂದಿಸಬೇಕು ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ್ ದಸ್ತಿ ಅವರು ಒತ್ತಾಯಿಸಿದ್ದಾರೆ.
ಡಾ. ನಂಜುಂಡಪ್ಪ ವರದಿಯಂತೆ ಐಐಟಿ ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಗೆ ನೀಡಬೇಕೆಂದು ಸ್ಪಷ್ಟವಾಗಿ ನಿರ್ದೇಶನ ನೀಡಿದರೂ ಸಹ ಮುಂಬೈ ಕರ್ನಾಟಕದ ರಾಜಕೀಯ ನಾಯಕರ ಕುತಂತ್ರದಿಂದ ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಗೆ ಬರಬೇಕಾದ ಏಮ್ಸ್ ಧಾರವಾಡ ಜಿಲ್ಲೆಯ ಪಾಲಾಯಿತು. ಇದರಿಂದ ಬೇಸರಗೊಂಡು ನೊಂದ ರಾಯಚೂರು ಜಿಲ್ಲೆಯ ಜನಮಾನಸ ಕಲ್ಯಾಣ ಕರ್ನಾಟಕ ಪ್ರದೇಶದ ಮಹತ್ವಕಾಂಕ್ಷಿ ಜಿಲ್ಲೆಯಾದ ರಾಯಚೂರು ಜಿಲ್ಲೆಗೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಮಂಜೂರು ಮಾಡಬೇಕೆಂದು ಕಳೆದ 585 ದಿನಗಳಿಂದ ಸುದೀರ್ಘ ಹೋರಾಟ ನಡೆದಿದೆ. ಹೋರಾಟಕ್ಕೆ ಸ್ಪಂದಿಸಿ ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಕೇಂದ್ರ ಸರ್ಕಾರಕ್ಕೆ ಎರಡು ಪತ್ರಗಳನ್ನು ಬರೆದು ಏಮ್ಸ್ ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆಯಾಗಬೇಕೆಂದು ಅಧಿಕೃತವಾಗಿ ಪತ್ರ ಬರೆದು ತಿಳಿಸಿದ್ದಾರೆ ಎಂದುಅ ವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಅದರಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಭಗವಂತ್ ಖೂಬಾ, ಕೊಪ್ಪಳ್ ಮತ್ತು ರಾಯಚೂರು ಜಿಲ್ಲೆಯ ಸಂಸದರು ಹಾಗೂ ರಾಯಚೂರು ಜಿಲ್ಲೆಯ ಎಲ್ಲ ಶಾಸಕರು ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ಹೋರಾಟಬಾರರ ನಿಯೋಗ 2022ನೇ ಆಗಸ್ಟ್ 22ರಂದು ಕೇಂದ್ರ ಆರೋಗ್ಯ ಸಚಿವರಾದ ಮನ್ಸೂಖ್ ಮಾಂಡವಿಯಾ ಅವರಿಗೆ ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅವರೂ ಸಹ ನಿಯೋಗಕ್ಕೆ ಭರವಸೆ ನೀಡಿ ರಾಜ್ಯ ಸರ್ಕಾರದ ಶಿಫಾರಸ್ಸಿನಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಕೇಂದ್ರ ಸರ್ಕಾರ ತಕ್ಷಣ ಕಾಲಮಿತಿಯಲ್ಲಿ ಕ್ರಮ ಕೈಗೊಂಡು ಕಲ್ಯಾಣ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಾರಂಜಾ ನೀರಾವರಿ ಯೋಜನೆಗಾಗಿ ಗಡಿ ಜಿಲ್ಲೆ ಬೀದರ್, ಭಾಲ್ಕಿ ತಾಲ್ಲೂಕು, ಹುಮ್ನಾಬಾದ್ ಹೀಗೆ ಜಿಲ್ಲೆಯ ನಾಲ್ಕು ಮತಕ್ಷೇತ್ರದ ರೈತ ಸಂತ್ರಸ್ತರು ಕಾರಂಜಾ ಯೋಜನೆಗಾಗಿ ತಮ್ಮ ಜಮೀನು, ಮನೆ ಮಠ ಕಳೆದುಕೊಂಡು ನಿರ್ಗತಿಕರಾಗಿ ವೈಜ್ಞಾನಿಕ ಮಾನದಂಡದಂತೆ ಸಮರ್ಪಕ ಪರಿಹಾರ ಸಿಗದ ಕಾರಣ ಬೀದಿಪಾಲಾಗಿ ಗಡಿ ರಾಜ್ಯಗಳಿಗೆ ಗುಳೆ ಹೋಗಿದ್ದಾರೆ. ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ವೈಜ್ಞಾನಿಕ ಮಾನದಂಡದಂತೆ, ಸಮರ್ಪಕ ಪರಿಹಾರ ನೀಡಬೇಕೆಂದು ಬೀದರ್ ನಗರದಲ್ಲಿ ಐದುವರೆ ತಿಂಗಳುಗಳಿಂದ ಸುದೀರ್ಘವಾಗಿ ಆಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆದಿದೆ. ಸತ್ಯಾಗ್ರಹಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರದ ವತಿಯಿಂದ ಉಪ ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಸಚಿವರು, ಶಾಸಕರುಗಳು ಮತ್ತು ಹೋರಾಟಗಾರರೊಂದಿಗೆ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡುವ ಬಗ್ಗೆ ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿಕೃತ ಸಭೆ ನಡೆಸಿ ಬೇಡಿಕೆ ಈಡೇರಿಸುವ ಬಗ್ಗೆ ಭರವಸೆ ನೀಡಿದರು. ಆದಾಗ್ಯೂ, ಇನ್ನುವರೆಗೂ ಕ್ರಮ ಕೈಗೊಳ್ಳದೆ ಇರುವುದರಿಂದ ಹೋರಾಟ ನಿರಂತರವಾಗಿ ಮುಂದುವರೆದಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಹೋರಾಟದ ಬಗ್ಗೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಸಂತ್ರಸ್ತರ ಬೇಡಿಕೆ ಈಡೇರಿಸಲು ಅವರು ಆಗ್ರಹಿಸಿದ್ದಾರೆ.
ರಾಯಚೂರಿನಲ್ಲಿ ನಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಹಕ್ಕಿನ ನ್ಯಾಯಯುತವಾದ ಏಮ್ಸ ಹೋರಾಟಕ್ಕೆ ಮತ್ತು ಬೀದರ್‍ನಲ್ಲಿ ನಡೆದಿರುವ ರೈತ ಸಂತ್ರಸ್ತರ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಕಾಲಮಿತಿಯಲ್ಲಿ ಬೇಡಿಕೆ ಈಡೇರಿಸಲು ಅವರು ಒತ್ತಾಯಿಸಿದ್ದಾರೆ.