ಕಲ್ಯಾಣ ಕರ್ನಾಟಕದ ಎಲ್ಲ ಹುದ್ದೆಗಳ ತಕ್ಷಣ ನೇಮಕಾತಿಗೆ ನಮೋಶಿ ಆಗ್ರಹ

ಕಲಬುರಗಿ,ಜು.30: ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಗಳನ್ನು ಮಾಡಿಕೊಳ್ಳಲು ಆದಷ್ಟು ಬೇಗನೆ ಎಲ್ಲಾ ಇಲಾಖೆ ಹುದ್ದೆಗಳನ್ನು ಗುರುತಿಸಿ ತಕ್ಷಣ ತುಂಬಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ತಕ್ಷಣ 371(ಜೆ) ಪ್ರಕಾರ ಬಡ್ತಿ ಮೂಲಕ ಹುದ್ದೆಗಳನ್ನು ತುಂಬಬೇಕು ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಉಪನ್ಯಾಸಕರ ಕೌನ್ಸಲಿಂಗ್ ಕರೆಯದಿರುವುದು ಸಂತೋಷದ ವಿಷಯವಾಗಿದೆ. ಆದಾಗ್ಯೂ, ಒಟ್ಟು ಹುದ್ದೆಗಳ ಸಂಖ್ಯೆ 12844 ಅದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೃಂದದ ಮಾತ್ರ ಕೇವಲ ಶೇಕಡಾ 10ರಷ್ಟು ಹುದ್ದೆಗಳಿಗೆ ಮಾತ್ರ. ವರ್ಗಾವಣೆ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಉಪನ್ಯಾಸಕರಿಗೆ ತೊಂದರೆ ಆಗುತ್ತಿದೆ. ಕಾರಣ 4 ವರ್ಷಗಳಿಂದÀ ವರ್ಗಾವಣೆ ಇಲ್ಲದೆ ಇರುವುದರಿಂದ ಈ ಸಾರಿ ವರ್ಗಾವಣೆ ಅರ್ಜಿ ಸಲ್ಲಿಸಿದ ಎಲ್ಲ ಉಪನ್ಯಾಸಕರಿಗೆ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕೆಂದು ಶಿಕ್ಷಣ ಸಚಿವರಿಗೆ ಕೋರಿದ್ದಾರೆ.
ಉಪನ್ಯಾಸಕರ ಕಾರ್ಯಭಾರ ಬಗ್ಗೆ ಇಲಾಖೆಯಲ್ಲಿ ಗೊಂದಲ ಏರ್ಪಟ್ಟಿದ್ದು ನಿರ್ಧಿಷ್ಟವಾದ ಕಾರ್ಯಭಾರದ ಬಗ್ಗೆ ಸಂಘದ ಸದಸ್ಯರಗಳೊಂದಿಗೆ ಹಾಗೂ ಎಲ್ಲ ವಿಧಾನ ಪರಿಷತ್ ಸದಸ್ಯರಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವಂತೆ, ಕಲ್ಯಾಣ ಕರ್ನಾಟಕ ಭಾಗದ ಶಾಲಾ/ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳಿಗಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಜ್ಞಾನ ಪಿಯುಸಿ ಕೋರ್ಸ್‍ಗಳಿಗೆ ಹೆಚ್ಚಿನ ಆದ್ಯತೆ ನೀಡಿ ಎಲ್ಲ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗಗಳನ್ನು ಪ್ರಾರಂಭಿಸುವಂತೆ ಅವರು ಒತ್ತಾಯಿಸಿದ್ದಾರೆ.
ಹೈದ್ರಾಬಾದ್ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕೇತರ ಉಪನ್ಯಾಸಕರ ಗೊಂದಲಗಳನ್ನು ಬಗೆಹರಿಸಿ ಶೀಘ್ರ ಪ್ರತ್ಯೇಕವಾಗಿ ಜೇಷ್ಠಪಟ್ಟಿಯನ್ನು ತಯ್ಯಾರಿಸಿ ಇಲಾಖೆ ಕಾಲಮಿತಿಯೊಳಗೆ ಪ್ರಕಟಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ ಅವರು, ಶಿಕ್ಷಣ ಸಚಿವರು ಎಲ್ಲ ಅಂಶಗಳ ಕುರಿತು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗನೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.