ಕಲ್ಯಾಣ ಕರ್ನಾಟಕದ ಎರಡು ಕಚೇರಿಗಳು ಬಾಗಲಕೋಟಗೆ ಸ್ಥಳಾಂತರ ಖಂಡನೀಯ:ಲಕ್ಷ್ಮಣ ದಸ್ತಿ

ಕಲಬುರಗಿ:ಮಾ:12: ಕೃಷ್ಣಾ ಭಾಗ್ಯ ಜಲನಿಗಮದಡಿ ಬರುವ ಅಚ್ಚುಕಟ್ಟು ಪ್ರದೇಶಾಭಿವೃದ್ಧಿಗೆ ಸಂಬಂಧಿಸಿದ ಕಲ್ಯಾಣ ಕರ್ನಾಟಕ ಪ್ರದೇಶದ ಹಸನಾಪೂರದ ವಿಭಾಗಿಯ ಕಚೇರಿ ಮತ್ತು ಭಾತಂಬ್ರಾ ಉಪ ವಿಭಾಗೀಯ ಕಚೇರಿ ಈ ಎರಡೂ ಕಚೇರಿಗಳು ಸಿಬ್ಬಂದಿ ಮತ್ತು ಮೂಲ ಸೌಕರ್ಯಗಳ ಸಮೇತ ಕಿತ್ತೂರು ಕರ್ನಾಟಕದ ಬಾಗಲಕೋಟಗೆ ಸ್ಥಳಾಂತರ ಮಾಡಿರುವುದು ಸಂವಿಧಾನದ 371ನೇ(ಜೆ) ಕಲಂ ತಿದ್ದುಪಡಿಯ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸರಕಾರ ಬಹಿರಂಗ ವಾಗಿಯೇ ದ್ರೋಹ ಬಗೆದಿರುವುದು ಖಂಡನೀಯವಾಗಿದೆ ಎಂದು 371ನೇ ಕಲಂ ಹೋರಾಟಗಾರ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಬಲವಾಗಿ ಖಂಡಿಸಿದ್ದಾರೆ.
ಸರಕಾರ ಒಂದು ಕಡೆ ಖಾಲಿ ಇರುವ ನಮ್ಮ ಪಾಲಿನ ಹುದ್ದೆಗಳನ್ನು ತುಂಬದೇ ನಿರ್ಲಕ್ಷ ಮತ್ತು ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಮತ್ತೊಂದು ಕಡೆ ನಮ್ಮ ಪ್ರದೇಶದ ಕಚೇರಿಗಳನ್ನು ಸ್ಥಳಾಂತರ ಮಾಡಿ ನಮ್ಮ ಪಾಲಿನ ಮಂಜೂರಾದ ಹುದ್ದೆಗಳಿಗೆ ಕೋಕ್ ಕೊಟ್ಟು ನಾಶ ಮಾಡುತ್ತಿದ್ದಾರೆ. ಪ್ರಸ್ತುತ ಎರಡು ಕಚೇರಿಗಳ ಸ್ಥಳಾಂತರದಿಂದ ನಮ್ಮ ಹಕ್ಕಿನ ಮಂಜೂರಾದ 46 ಹುದ್ದೆಗಳು ನಾಶವಾಗುತ್ತಿವೆ. ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ರಚನಾತ್ಮಕ ಪ್ರಗತಿಗೆ ಮತ್ತು ಇಲ್ಲಿ ಉದ್ಯೋಗಗಳನ್ನು ಸೃಷ್ಟಿಸಬೇಕೆಂಬ ಸದುದ್ದೇಶದಿಂದ ನಮ್ಮ ಹೋರಾಟದ ಫಲವಾಗಿ ಭಾರತ ಸರಕಾರ 371ನೇ(ಜೆ) ಕಲಂ ಜಾರಿಗೆ ತಂದಿದೆ. ರಾಜ್ಯ ಸರಕಾರ ಇದಕ್ಕೆ ರಾಜಕೀಯ ಇಚ್ಛಾಶಕ್ತಿ ನೀಡದೇ ನಮ್ಮ ಮೇಲೆ ಗಧಾ ಪ್ರಹಾರ ಮಾಡುತ್ತಾ ನಮ್ಮ ಭಾಗದ ಕಚೇರಿಗಳನ್ನು ಸರಣಿಯಾಗಿ ಮುಂಬೈ ಕರ್ನಾಟಕಕ್ಕೆ ಸ್ಥಳಾಂತರ ಮಾಡುತ್ತಿರುವುದು ಯಾವ ನ್ಯಾಯ? ರಾಜ್ಯ ಸರಕಾರದ ಈ ಮಲತಾಯಿ ಧೋರಣೆ, ಕಲ್ಯಾಣ ಕರ್ನಾಟಕದ ಜನಮಾನಸಕ್ಕೆ ಅತೀವ ನೋವುಂಟು ಮಾಡಿದೆ.
ಹಸನಾಪೂರ ವಿಭಾಗೀಯ ಕಚೇರಿ ಮತ್ತು ಭಾತಂಬ್ರ ಉಪ ವಿಭಾಗೀಯ ಕಚೇರಿಗಳ ಸ್ಥಳಾಂತರ ರದ್ದು ಮಾಡಬೇಕು, ಇಲ್ಲವಾದರೆ, ಬರುವ ದಿನಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಹೋರಾಟ ಮಾಡುವುದಲ್ಲದೇ, ಈ ಬಗ್ಗೆ ಜನಮಾನಸದಲ್ಲಿ ಪ್ರಸ್ತುತ ಸರಕಾರ ಅದರಲ್ಲೂ ಉತ್ತರ ಕರ್ನಾಟಕದ ಮುಖ್ಯಮಂತ್ರಿಗಳು ನೀರಾವರಿ ಮಂತ್ರಿಗಳು ಕಿತ್ತೂರು ಕರ್ನಾಟಕದವರಾಗಿರುವುದರಿಂದ, ಉದ್ದೇಶಪೂರ್ವಕ ವಾಗಿಯೇ ನಮ್ಮ ಕಚೇರಿಗಳು ತಮ್ಮ ಪ್ರದೇಶಕ್ಕೆ ಸ್ಥಳಾಂತರ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸಚಿವರು, ಸಂಸದರು, ಶಾಸಕರು ಸಂಘಟಿತವಾದ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಿ ಎರಡು ಕಚೇರಿಗಳು ನಮ್ಮ ಭಾಗಕ್ಕೆ ಪುನರ್ ಸ್ಥಾಪಿಸಲು ಕಾಲಮಿತಿಯ ಕ್ರಮ ಕೈಗೊಳ್ಳಲು ಸಮಿತಿ ಒತ್ತಾಯಿಸುತ್ತದೆ. ಈ ವಿಷಯಕ್ಕೆ ನಮ್ಮ ವಿಧಾನ ಸಭೆ ಸದಸ್ಯರು ಗಂಭೀರವಾಗಿ ಪರಿಗಣಿಸದಿದ್ದರೆ, ಬರುವ ವಿಧಾನ ಸಭೆ ಚುನಾವಣೆಯಲ್ಲಿ ಅವರು ತಕ್ಕ ಪಾಠ ಕಲಿಯಬೇಕಾಗುತ್ತದೆ. ಅಷ್ಟೇ ಅಲ್ಲದೇ ಆಡಳಿತ ರೂಢ ಪಕ್ಷ ಕೇವಲ ಮುಂಬೈ ಕರ್ನಾಟಕಕ್ಕೆ ಅಷ್ಟೇ ಸೀಮಿತವಲ್ಲದೇ, ಕಲ್ಯಾಣ ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ಭಾರತ ದೇಶದ ಪಕ್ಷವಾಗಿದೆ ಎಂಬುದು ಅರ್ಥ ಮಾಡಿಕೊಳ್ಳಬೇಕು. ಈ ವಿಷಯಕ್ಕೆ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅತೀ ಗಂಭೀರವಾಗಿ ಪರಿಗಣಿಸಿ ಹಸನಾಪೂರ ಮತ್ತು ಭಾತಂಬ್ರಾ ಕಚೇರಿಗಳ ಸ್ಥಳಾಂತರದಿಂದ ಸುಮಾರು 46 ಹುದ್ದೆಗಳ ನಷ್ಟ ತಪ್ಪಿಸಲು ಅಷ್ಟೇ ಅಲ್ಲದೇ ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ ಜಿಲ್ಲೆಗಳಿಗೆ ಅನ್ಯಾಯವಾಗದಂತೆ ತುರ್ತು ಕ್ರಮ ಕೈಗೊಂಡು ನ್ಯಾಯ ಒದಗಿಸಲು ಒತ್ತಾಯಿಸಲಾಗುತ್ತದೆ.