ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವ ಅದ್ಧೂರಿಯಾಗಿ ಆಚರಣೆಯ ಬಗ್ಗೆ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೆಯ ಪಾಟೀಲ ರೇವೂರರೊಂದಿಗೆ ಸಮಾಲೋಚನೆ

ಕಲಬುರಗಿ :ಜು.22: ನಮ್ಮ ದೇಶದ ಸ್ವತಂತ್ರ ನಂತರ ಒಂದು ವರ್ಷ ಒಂದು ತಿಂಗಳು ಎರಡು ದಿವಸಗಳ ಕಾಲ ವಿಳಂಬವಾಗಿ ಆಸಫ್‍ಜಾಹಿ ನಿಜಾಮ್ ಆಡಳಿತದಿಂದ ವಿಮುಕ್ತಿಗೊಂಡು ಅಖಂಡ ಭಾರತದಲ್ಲಿ 17ನೇ ಸೆಪ್ಟೆಂಬರ 1948 ರಂದು ವಿಲೀನವಾದ ಕಲ್ಯಾಣ ಕರ್ನಾಟಕ ಪ್ರದೇಶದ ಅಮೃತ ಮಹೋತ್ಸವ ಬರುವ 17ನೇ ಸೆಪ್ಟೆಂಬರ 2022ರಿಂದ ಆರಂಭವಾಗಿ 17ನೇ ಸೆಪ್ಟೆಂಬರ್ 2023ಕ್ಕೆ ಸಮಾರೋಪಗೊಳ್ಳುವದು.

ಕಲ್ಯಾಣ ಕರ್ನಾಟಕ ಪ್ರದೇಶದ ಪ್ರತಿಯೊಬ್ಬ ನಾಗರಿಕನಿಗೆ ಸ್ವಾಭಿಮಾನದ ಪ್ರತೀಕವಾದ ಈ ಅಮೃತ ಮಹೋತ್ಸವ ಕಲ್ಯಾಣದ ನೆಲ, ಜಲ, ಸಂಸ್ಕೃತಿ, ಇತಿಹಾಸ ಅಭಿವೃದ್ಧಿ ಪಥದ ವಿಶೇಷ ಬೆಳಕು ಚೆಲ್ಲುವ ಮುಖಾಂತರ ವರ್ಷವಿಡೀ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕೆ.ಕೆ.ಆರ್.ಡಿ.ಬಿ.ಯ ಅಧ್ಯಕ್ಷರು ವಿಶೇಷ ಮುತುವರ್ಜಿ ವಹಿಸಿರುವಂತೆ, ದಸರಾ ಮೈಸೂರು ಉತ್ಸವ ಮದರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಆಯಾ ಇಲಾಖೆಗಳಿಂದ ಮತ್ತು ಅಕಾಡೆಮಿಗಳ ಮೂಲಕ ಜನರ ಸಂಯೋಗ ದೊಂದಿಗೆ ಅದ್ಧೂರಿಯಾಗಿ ಕಾರ್ಯಕ್ರಮ ಗಳನ್ನು ಹಮ್ಮಿಕ್ಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಣ ದಸ್ತಿಯವರು ಕೆ.ಕೆ.ಆರ್.ಡಿ.ಬಿ.ಯ ಅಧ್ಯಕ್ಷರಾದ ದತ್ತಾತ್ರೇಯ ಚಂದ್ರಶೇಖರ ಪಾಟೀಲ ರೇವೂರ ರವರೊಂದಿಗೆ ವಿವರವಾಗಿ ಚರ್ಚಿಸಿ ಮನವರಿಕೆ ಮಾಡಿದರು.

ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರು, ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಬಗ್ಗೆ ಉತ್ಸವ ಸಮಿತಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಸಚಿವರು, ಜನಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿ ಗಳೊಂದಿಗೆ, ನಿರಂತರವಾಗಿ ಸಭೆಗಳನ್ನು ನಡೆಸಿ ಕಲ್ಯಾಣ ಅಮೃತ ಮಹೋತ್ಸವವನ್ನು ಜನಮಾನಸದ ಉತ್ಸವದ ರೂಪದಲ್ಲಿ ಆಚರಣೆಗೆ ತಮ್ಮ ಬದ್ಧತೆ ಪ್ರದರ್ಶಿಸುವದಾಗಿ ತಿಳಿಸಿದರು.