ಕಲ್ಯಾಣ ಕರ್ನಾಟಕದ ಅಮೂರ್ತ ಪರಂಪರೆ ಕಾಪಾಡಬೇಕು:ಹೃಷಿಕೇಶ್ ಬಹದ್ದೂರ್ ದೇಸಾಯಿ

ಕಲಬುರಗಿ,ನ.29:ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿನ ಅಮೂರ್ತ ಪರಂಪರೆಯನ್ನು ಜತನದಿಂದ ಕಾಪಾಡಿಕೊಂಡು ಬರಬೇಕಿದೆ ಎಂದು ಸಂಸ್ಕøತಿ ಚಿಂತಕ ಹಾಗೂ ಖ್ಯಾತ ಪತ್ರಕರ್ತ ಹೃಷಿಕೇಶ್ ಬಹದ್ದೂರ್ ದೇಸಾಯಿ ಅವರು ಪ್ರತಿಪಾದಿಸಿದರು.
ಸೋಮವಾರ ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಇತಿಹಾಸ ಸ್ನಾತಕೋತ್ತರ ಅಧ್ಯಯನ ವಿಭಾಗ ಹಾಗೂ ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕದ ಅಮೂರ್ತ ಪರಂಪರೆ ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿದ ಬಳಿಕ ಅವರು ಆಶಯ ಭಾಷಣದಲ್ಲಿ ತಿಳಿಸಿದರು.
ಗುರು ಪರಂಪರೆ ಎನ್ನುವುದೇ ಅಮೂರ್ತ ಪರಂಪರೆ. ಯಾವ ಅಂಶಗಳು ಕಲೆ-ಸಂಸ್ಕೃತಿ, ಸಾಮಾಜಿಕತೆ, ಧಾರ್ಮಿಕತೆ ಮೇಲೆ ಪ್ರಭಾವ ಬೀರಿವೆಯೋ ಅವೆಲ್ಲವೂ ಅಮೂರ್ತ ಪರಂಪರೆಯದ್ದು ಎಂದು ಅವರು ಹೇಳಿದರು.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಎಲ್ಲಾ ರೀತಿಯ ಧಾರ್ಮಿಕ ಪರಂಪರೆ ಕಾಣುತ್ತೇವೆ. ರಾಜ್ಯ, ದೇಶದ ಇತರೆ ಭಾಗಗಳಿಗೆ ಹೋಲಿಸಿದರೆ, ಇಲ್ಲಿ ಕೋಮುಗಲಭೆಗಳು, ದ್ವೇಷ-ಅಸೂಯೆಗಳು ಕಮ್ಮಿ ಎಂದು ಅವರು ತಿಳಿಸಿದರು.
ಭಾರತ ವಿವಿಧ ಧರ್ಮದ ದೇಶವಾಗಿದ್ದರೆ, ಕಲ್ಯಾಣ ಕರ್ನಾಟಕ ದಾಸರು, ವಚನಕಾರರು, ತತ್ವ ಪದಕಾರರು ಸೂಫಿ-ಸಂತರ ನೆಲೆ ಎಂದು ಅವರು ಬಣ್ಣಿಸಿದರು. ಹೆಸರಾಂತ ಸೂಫಿ ಸಂತಗೆ ಖಾಜಾ ಬಂದೇ ನವಾಜ್ (ಬಡವರ ಬಂಧು) ಎಂದು ಹೆಸರು ಇಟ್ಟಿದ್ದಲ್ಲ, ಬದಲಾಗಿ ಜನತೆ ಕೊಟ್ಟ ಬಿರುದು ಎಂದು ಅವರು ಹಾಡಿಹೊಗಳಿದರು.
ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಕಲಬುರಗಿ ಸರ್ಕಾರಿ ಮಹಾ ವಿದ್ಯಾಲಯದ ಇತಿಹಾಸ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಇಂದುಮತಿ .ಪಿ. ಪಾಟೀಲ ಅವರು, ಅಮೂರ್ತ ಪರಂಪರೆ ಎಂದರೆ ಚಲನ ಸ್ಥಿತಿಯಲ್ಲಿ ಇಲ್ಲದ ಅಥವಾ ಗೊತ್ತಿದ್ದು ಬೆಳಕಿಗೆ ಬಾರದ ಪರಂಪರೆ ಎಂದು ಅರ್ಥೈಸಿದರು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಮೂರ್ತ ಪರಂಪರೆ ಕುರಿತ ಕರಡು ಪುಸ್ತಕ ಬಿಡುಗಡೆಗೊಳಿಸಲಾಯಿತು. ಸರ್ಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ಶಂಕ್ರೆಪ್ಪ ಎಸ್. ಹತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಚಿತ್ತಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ ಕುಮಾರ್ ಸಾಲಿಮನಿ, ಸಮಾಜ ವಿಜ್ಞಾನ ವಿಭಾಗದ ಡೀನ್ ಅನಿಲ್ ಕುಮಾರ್, ಕರ್ನಾಟಕ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ವೀರಶೆಟ್ಟಿ, ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಪ್ರಕಾಶ್ ಮುಂತಾದವರು ಇದ್ದರು.