
ಕಲಬುರಗಿ,ಫೆ.26:ಕಲ್ಯಾಣ ಕರ್ನಾಟಕ ಪ್ರದೇಶವು ಇನ್ನಷ್ಟು ಅಭಿವೃದ್ಧಿ ಹೊಂದಲು ಬಸವರಾಜ್ ಬೊಮ್ಮಾಯಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ಕಲ್ಯಾಣ ಕರ್ನಾಟಕ ಉತ್ಸವದ ಮೂರು ದಿನಗಳ ಸಮಾರೋಪ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯಿಂದ ದೆಹಲಿ ಮಟ್ಟದವರೆಗೆ ಜನಪ್ರತಿನಿಧಿಗಳು ಆಗಿ ಹೋಗಿದ್ದಾರೆ. ಅವರಿಂದ ಈ ಭಾಗದ ಅಭಿವೃಧ್ಧಿ ಆಗಲಿಲ್ಲ. ಈ ಭಾಗದ ಅಭಿವೃದ್ಧಿಗೆ ಕಾಳಜಿ ತೋರಿಸಿದವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು. ಬಸವಣ್ಣನವರು ಸಮಾಜ ಸುಧಾರಣೆಗೆ ಕ್ರಾಂತಿ ಮಾಡಿದರು. ಅವರ ರೂಪದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಅಭಿವೃದ್ಧಿ ಕ್ರಾಂತಿಯನ್ನು ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ಕಲ್ಯಾಣ ಕರ್ನಾಠಕದ ವೈಭವವು ಇಡೀ ನಾಡು ನೋಡುತ್ತಿದ್ದಾರೆ. ಅದಕ್ಕೆ ಕಾರಣೀಕರ್ತರು ಮುಖ್ಯಮಂತ್ರಿಗಳು. ಕಾರ್ಯದರ್ಶಿಗಳನ್ನು ಕರೆಸಿ ಇಲ್ಲಿ ಉತ್ಸವ ಮಾಡಬೇಕು ಎಂದು ಮಾರ್ಗದರ್ಶನ ಮಾಡಿದರು. ಪ್ರತಿ ವರ್ಷ ಉತ್ಸವ ಆಗಬೇಕು. ಅದಕ್ಕಾಗಿ ಮತ್ತೊಮ್ಮೆ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳು ಆಗಬೇಕು ಎಂದು ಅವರು ಬಯಸಿದರು.
ಈ ಹಿಂದೆ ಹೈದ್ರಾಬಾದ್ ಕರ್ನಾಟಕದ ಹೆಸರನ್ನು ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಗರಕ್ಕೆ ಬಂದು ದಾಸ್ಯದ ಸಂಕೇತದ ಹೆಸರನ್ನು ಬದಲಾಯಿಸಿ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಕೇವಲ ಹೆಸರು ಬದಲಾವಣೆ ಮಾಡಿದರೆ ಅಭಿವೃದ್ಧಿ ಆಗದು ಎಂದುಕೊಂಡು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1,500ಕೋಟಿ ರೂ.ಗಳಿಗೆ ಹೆಚ್ಚಿಸಿದರು. ಸಾಮಾನ್ಯ ವ್ಯಕ್ತಿ ಎಂಬ ಖ್ಯಾತಿಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಂತರ ಆ ಅನುದಾನವನ್ನು 3000 ಕೋಟಿ ರೂ.ಗಳಿಗೆ ಹೆಚ್ಚಿಸಿದರು. ಅಭಿವೃದ್ಧಿಯ ನಾಯಕರಾಗಿರುವ ಬೊಮ್ಮಾಯಿ ಅವರು ನಾವು ಕೇಳದೇ ಇದ್ದರೂ ಸಹ ಬಜೆಟ್‍ನಲ್ಲಿ 5000 ಕೋಟಿ ರೂ.ಗಳಿಗೆ ಅನುದಾನ ಹೆಚ್ಚಿಸಿದ್ದಾರೆ. ಅದಕ್ಕಾಗಿ ಅಭಿನಂದಿಸುತ್ತೇವೆ ಎಂದು ಅವರು ತಿಳಿಸಿದರು.
ಪ್ರತಿ ದಿನ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ 50000ಕ್ಕೂ ಹೆಚ್ಚು ಜನರು ಈಗ ಭಾಗವಹಿಸಿದ್ದಾರೆ. ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಜಯವಾಗಲಿ ಎಂದು ಅವರು ಘೋಷಣೆ ಹಾಕಿದರು. ಕಾರ್ಯಕ್ರಮ ಸಮಾರೋಪಗೊಳ್ಳುತ್ತಿದ್ದಂತೆಯೇ ರೇವೂರ್ ಅವರು ಸಭಿಕರನ್ನುದ್ದೇಶಿಸಿ ಬಸವರಾಜ್ ಬೊಮ್ಮಾಯಿ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಹರಸಿ ಕುಳಿತ ಸ್ಥಳದಿಂದಲೇ ಎದ್ದುನಿಂತು ಬೊಮ್ಮಾಯಿ ಅವರತ್ತ ಟಾರ್ಚ್ ಮೂಲಕ ಬೆಳಕು ಹಾಕಿ ಎಂದು ಕೋರಿದಾಗ ಸಭಿಕರು ತಮ್ಮ ತಮ್ಮ ಮೊಬೈಲ್ ಟಾರ್ಚ್‍ಗಳ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕಡೆಗೆ ಬೆಳಕು ಹರಿಸಿದರು.
ನಂತರ ರಾಜ್ಯದ ಬೃಹತ್ ಮತ್ತು ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್. ನಿರಾಣಿ ಅವರು ಮಾತನಾಡಿ, 39000 ಕೋಟಿ ರೂ.ಗಳ ಉತ್ತಮ ಬಜೆಟ್ ಮೂಲಕ ನವ ಕರ್ನಾಟಕ, ನವ ಭಾರತ ನಿರ್ಮಾಣದ ಕೆಲಸಕ್ಕೆ ಮುಖ್ಯಮಂತ್ರಿಗಳು ನಾಂದಿ ಹಾಡಿದ್ದಾರೆ. ಅವರು 24/7 ಕೆಲಸ ಮಾಡುತ್ತಿದ್ದಾರೆ. 18 ತಾಸುಗಳಿಗಿಂತಲೂ ಹೆಚ್ಚು ಕಾಲ ಕಾರ್ಯನಿರ್ವಹಿಸಿ, ಪ್ರತಿ ದಿನ 500 ಕಿ.ಮೀ. ಪ್ರವಾಸ ಮಾಡಿರುವ ದನಿವರಿಯದ ಬಸವರಾಜ್ ಬೊಮ್ಮಾಯಿ ಅವರು ಕೆಲಸ ಮಾಡುತ್ತಿದ್ದಾರೆ. ಹಿಂದುಳಿದ ಹಣೆಪಟ್ಟಿ ಹೋಗಬೇಕು. ಶಿಕ್ಷಣದ ಸುಧಾರಣೆ ಆಗಬೇಕು. ಕೈಗಾರಿಕೆಗಳು ಬರಬೇಕು. ಮುಂದಿನ ವರ್ಷವೂ ಸಹ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ರೇವೂರ್ ಅವರ ನೇತೃತ್ವದಲ್ಲಿ ಮತ್ತೆ ಉತ್ಸವ ನಡೆಸೋಣ ಎಂದರು.
ಶ್ರೀಮತಿ ಸೀಮಾ ಪಾಟೀಲ್ ತಂಡದವರು ಆರಂಭದಲ್ಲಿ ನಾಡಗೀತೆ ಹಾಡಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪ್ರಧಾನ ಕಾರ್ಯದರ್ಶಿ ಅನಿರುದ್ಧ ಶ್ರವಣ್ ಅವರು ಸ್ವಾಗತಿಸಿದರು. ಕಲ್ಯಾಣ ದರ್ಶನ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ರಾಜ್ಯದ ಬೃಹತ್ ಮತ್ತು ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್. ನಿರಾಣಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್, ಶಾಸಕರಾದ ಎಂ.ವೈ. ಪಾಟೀಲ್, ಶಶೀಲ್ ಜಿ. ನಮೋಶಿ, ಬಾಬುರಾವ್ ಚಿಂಚನಸೂರ್, ಡಾ. ಅವಿನಾಶ್ ಜಾಧವ್, ಬಿ.ಜಿ. ಪಾಟೀಲ್, ನಗರಾಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ್ ಕುಲಕರ್ಣಿ, ಬಸವರಾಜ್ ಮತ್ತಿಮೂಡ್, ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್, ಕರ್ನಾಟಕ ರಾಜ್ಯ ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ವಿದ್ಯಾಸಾಗರ್ ಶಾಬಾದಿ, ಮುಖಂಡರಾದ ಡಾ. ವಿಕ್ರಮ್ ಪಾಟೀಲ್, ಶಿವಕಾಂತ್ ಮಹಾಜನ್, ಅಂಬಾರಾಯ್ ಅಷ್ಟಗಿ, ಈಶಾನ್ಯ ವಲಯ ಪೋಲಿಸ್ ಮಹಾನಿರೀಕ್ಷಕ ಅಗರವಾಲ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಬಡೋಲೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್, ನಗರ ಪೋಲಿಸ್ ಆಯುಕ್ತ ಆರ್. ಚೇತನ್ ಮುಂತಾದವರು ಉಪಸ್ಥಿತರಿದ್ದರು.