ಕಲ್ಯಾಣ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕಾರ: ಪ್ರಣವಾನಂದ್ ಸ್ವಾಮೀಜಿ ಎಚ್ಚರಿಕೆ

ಕಲಬುರಗಿ:ಏ.13: ಕಳೆದ ಮೂರು ವರ್ಷಗಳಿಂದ ಈಡಿಗ ಸಮಾಜದ ಬೇಡಿಕೆಗಳನ್ನು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ನಿರ್ಲಕ್ಷಿಸಿರುವ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಕಲ್ಯಾಣ ಕರ್ನಾಟಕ ಈಡಿಗ ಸಮುದಾಯ ಬಹಿಷ್ಕರಿಸುವುದಕ್ಕೆ ಕರೆ ಕೊಡಬೇಕಾಗುತ್ತದೆ ಎಂದು ಚಿತ್ತಾಪುರ ತಾಲ್ಲೂಕಿನ ಕರದಾಳು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಡಾ. ಪ್ರಣಾವಾನಂದ್ ಸ್ವಾಮೀಜಿ ಅವರು ಇಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ನೇರ ಎಚ್ಚರಿಕೆಯನ್ನು ನೀಡಿದರು.
ನಗರದ ಸನ್ ಇಂಟರ್‍ನ್ಯಾಷನಲ್ ಹೊಟೇಲ್‍ನಲ್ಲಿ ಶನಿವಾರ ಕಲ್ಯಾಣ ಕರ್ನಾಟಕ ಈಡಿಗ ಸಮುದಾಯದ ಮುಖಂಡರ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಡಿಗ ಸಮುದಾಯದವರು ಕಲ್ಯಾಣ ಕರ್ನಾಟಕದಲ್ಲಿ 18 ವರ್ಷ ಕುಲಕಸುಬು ಕಳೆದುಕೊಂಡಿದ್ದೇವೆ. ಹಲವಾರು ಬಾರಿ ಹೋರಾಟಗಳನ್ನು ಮಾಡಿದ್ದೇವೆ. ಚಿಂಚೋಳಿಯಿಂದ ಕಲಬುರ್ಗಿಯವರೆಗೆ ಪಾದಯಾತ್ರೆ ಮಾಡಲಾಗಿದೆ. ಅದೇ ರೀತಿ ದಕ್ಷಿಣ ಕನ್ನಡದಿಂದ ಬೆಂಗಳೂರಿಗೆ ಹೋಗಿ ಪ್ರತಿಭಟನೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದಲೂ 16 ಬೇಡಿಕೆಗಳನ್ನು ಈಡೇರಿಸಲು ಆಡಳಿತ ಮತ್ತು ವಿರೋಧ ಪಕ್ಷಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿವೆ ಎಂದು ಆಕ್ರೋಶ ಹೊರಹಾಕಿದರು.
ನಾವು ಮಾಡಿದ ಹೋರಾಟದ ಫಲವಾಗಿ ಹಿಂದಿನ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿನ ಬಿಜೆಪಿ ಸರ್ಕಾರವು ನಾರಾಯಣಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಮಾಡಿದರು. ಆದಾಗ್ಯೂ, ಅದನ್ನು ಜಾರಿಗೆ ತರಲಿಲ್ಲ. ಹೊಸ ಚುನಾವಣೆ ಬಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಹತ್ತು ತಿಂಗಳು ಕಳೆದರೂ ಸಹ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ನಾರಾಯಣಗುರುಗಳ ಅಭಿವೃದ್ಧಿ ನಿಗಮವನ್ನು ಜಾರಿಗೆ ತಂದು ನಿಗಮಕ್ಕೆ 500 ಕೋಟಿ ರೂ.ಗಳನ್ನು ಒದಗಿಸುವಂತೆ, ನಾರಾಯಣಗುರುಗಳ ಮೂತಿರ್ಯನ್ನು ಬೆಂಗಳೂರಿನ ವಿಧಾನಸೌಧ ಮುಂದೆ ಅನಾವರಣಗೊಳಿಸುವಂತೆ, 12ನೇ ಶತಮಾನದ ಅನುಭವ ಮಂಟಪದಲ್ಲಿನ ಹೆಂಡದ ಮಾರಯ್ಯನವರ ಜಯಂತಿಯನ್ನು ಸರ್ಕಾರವೇ ಆಚರಿಸುವಂತೆ ಹಾಗೂ ಕುಲಕಸುಬು ಕಳೆದುಕೊಂಡವರಿಗೆ ಮತ್ತೆ ಸೇಂದಿ ಮತ್ತು ನೀರಾ ಎತ್ತುವುದಕ್ಕೆ ಅನುಮತಿ ಕೊಡುವಂತೆ ಇಲ್ಲವಾದಲ್ಲಿ ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಅವರು ಒತ್ತಾಯಿಸಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಸೇಂದಿ ಎತ್ತುವುದಕ್ಕೆ ಅನುಮತಿ ನಿರಾಕರಿಸಿದಲ್ಲಿ ಸಂತ್ರಸ್ತ ಕುಟುಂಬಗಳು ಬದುಕು ಮಾಡಲು ಪ್ರತಿ ಕುಟುಂಬಕ್ಕೆ ಎರಡು ಎಕರೆ ಜಮೀನು ಕೊಡುವಂತೆ ಕೋರಲಾಗಿತ್ತು. ಅಂತಹ ಪರ್ಯಾಯ ಕ್ರಮಗಳನ್ನಾದರೂ ಸರ್ಕಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದ ಆಡಳಿತ ಮತ್ತು ಪ್ರತಿಪಕ್ಷವು ಈಡಿಗ ಸೇರಿದಂತೆ ಒಟ್ಟು 26 ಪಂಗಡಗಳನ್ನು ಕೇವಲ ರಾಜಕೀಯಕ್ಕಾಗಿ ಮಾತ್ರ ಬಳಸಿ ಕಡೆಗಣಿಸುತ್ತಿರುವುದರಿಂದ ವಿರುದ್ಧ ಕಲ್ಯಾಣ ಕರ್ನಾಟಕ ಈಡಿಗ ಸಮುದಾಯದವು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಕುರಿತು ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಇದೇ ಏಪ್ರಿಲ್ 25ರವರೆಗೆ ನಾವು ಸರ್ಕಾರ ಹಾಗೂ ವಿರೋಧ ಪಕ್ಷಗಳಿಗೆ ಕಾಯುತ್ತೇವೆ. ಈಗಾಗಲೇ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದಾಗ ಜಿಲ್ಲೆಯ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಡಾ. ಶರಣಪ್ರಕಾಶ್ ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆಗಳಿಗೆ ಬೆಂಬಲಿಸಿದ್ದರು. ಮುಂದೆ ನಮ್ಮ ಸರ್ಕಾರ ಬಂದರೆ ಖಂಡಿತವಾಗಿಯೂ ಈಡೇರಿಸುತ್ತೇವೆ ಎಂಬ ಭರವಸೆ ಕೊಟ್ಟಿದ್ದರು. ಈಗ ಅವರದೇ ಸರ್ಕಾರ ಇದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಂಸದ ಡಾ. ಉಮೇಶ್ ಜಾಧವ್ ಅವರು ತಮಗೆ ಭೇಟಿ ಮಾಡಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆಗ ಭೇಟಿ ಮಾಡಿದವರು ಈಗಲೂ ಸಹ ನನಗೆ ಭೇಟಿಯಾಗಿಲ್ಲ ಎಂದು ಹೇಳಿದ ಅವರು, ಆಡಳಿತ ಮತ್ತು ವಿರೋಧ ಪಕ್ಷದವರ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಅನಿವಾರ್ಯವಾಗಿ ನಾವು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದರು.
ಕುಲಕಸುಬು ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿರುವ ಸಮಾಜಕ್ಕೆ ಕಾಂಗ್ರೆಸ್ ಸರ್ಕಾರ ಎರಡು ಬಜೆಟ್‍ಗಳನ್ನು ಮಂಡಿಸಿದರು ನಿಗಮಕ್ಕೆ ಹಣ ನೀಡುವುದಾಗಲಿ ಅಥವಾ ಸಮುದಾಯಕ್ಕೆ ಪರ್ಯಾಯ ಯೋಜನೆಗಳನ್ನು ಘೋಷಿಸಿದಾಗಲೇ ಮಾಡದೆ ಕೇವಲ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ 90 ಸಾವಿರದಷ್ಟು ಮತದಾರರಿಗೆ ಬಣ್ಣದ ಮಾತು ಹೇಳಿ ವಂಚಿಸುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ವಿಪಕ್ಷ ನಾಯಕರು ಪ್ರಮುಖ ಕೇಂದ್ರವಾಗಿರುವ ಕಲ್ಯಾಣ ಕರ್ನಾಟಕದಲ್ಲಿ ಕಳೆದ 18 ವರ್ಷಗಳಿಂದ ಈಡಿಗರು ಕುಲಕಸುಬು ವೃತ್ತಿಯನ್ನು ಕಳೆದುಕೊಂಡು ನಿರಾಶ್ರಿತರಾದರು ಎಲ್ಲ ರಾಜಕೀಯ ಪಕ್ಷಗಳು ಬಳಸಿ ಬಿಸಾಕುವ ಪ್ರವೃತ್ತಿಯನ್ನು ತೋರುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಮುಖಂಡರು ಒಕ್ಕೋರಳಿನಿಂದ ಈ ನೀತಿಯ ವಿರುದ್ಧ ಕಟು ನಿರ್ಧಾರ ಕೈಗೊಳ್ಳಲು ಸಮ್ಮತಿಯನ್ನು ನೀಡಿದ್ದು ಏಪ್ರಿಲ್ 26ರಂದು ಅಂತಿಮ ಪ್ರಕಟಣೆಯನ್ನು ಮಾಡಲಾಗುವುದು ಎಂದು ಅವರು ಹೇಳಿದರು.
ನೀರಾ ಎತ್ತುವುದಕ್ಕೆ ಉಡುಪಿ, ಚಿಕ್ಕಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗಕ್ಕೆ ಅನುಮತಿ ನೀಡಲಾಗಿದೆ. ಹಾಗಾಗಿ ಆ ಭಾಗದ ಲೋಕಸಭಾ ಚುನಾವಣೆಯಲ್ಲಿ ಅಲ್ಲಿಯ ಈಡಿಗ ಸಮುದಾಯದವರು ಪಾಲ್ಗೊಳ್ಳುತ್ತಾರೆ. ಕಲ್ಯಾಣ ಕರ್ನಾಟಕದಲ್ಲಿ ಮಾತ್ರ ಇಂತಹ ಸಮಸ್ಯೆ ಇದ್ದು, ಹಾಗಾಗಿ ಕೊನೆಯ ಹೋರಾಟದ ಭಾಗವಾಗಿ ಲೋಕಸಭಾ ಚುನಾವಣೆಯನ್ನು ಕಲ್ಯಾಣ ಕರ್ನಾಟಕದಲ್ಲಿ ಬಹಿಷ್ಕರಿಸಲು ಕರೆ ಕೊಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಉಪಾಧ್ಯಕ್ಷ ಮಹಾದೇವ್ ಗುತ್ತೇದಾರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕಡೇಚೂರ್, ವೆಂಕಟೇಶ್ ಗುಂಡಾನೂರು ಚಂದ್ರಶೇಖರ್ ಗಾರಂಪಳ್ಳಿ ಚಿಂಚೋಳಿ, ನಾಗಯ್ಯ ಗುತ್ತೇದಾರ್, ಮಹೇಶ್ ಗುತ್ತೇದಾರ್, ಸಿದ್ದಲಿಂಗ ಗುತ್ತೇದಾರ್, ಜಗದೇವ್ ಗುತ್ತೇದಾರ್ ಕಲ್ಲಬೆನೂರು, ಮಲ್ಲಯ್ಯ ಗುತ್ತೇದಾರ್, ರಾಜು ಗುತ್ತೇದಾರ್ ಬೊಮ್ಮನಹಳ್ಳಿ, ಸಂತೋಷ್ ಗುತ್ತೇದಾರ್, ಸುರೇಶ್ ಗುತ್ತೇದಾರ್, ಭೀಮಯ್ಯ ಗುತ್ತೇದಾರ್, ಹನುಮಂತ್ ಮಾನವಿ ಮುಂತಾದವರು ಉಪಸ್ಥಿತರಿದ್ದರು.