ಕಲ್ಯಾಣ ಕರ್ನಾಟಕದಲ್ಲಿ ಮಾದರಿ ಪೂರ್ವ ಪ್ರಾಥಮಿಕ ಶಾಲೆ ತೆರೆಯಲು ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಸಲಹೆ

ಕಲಬುರಗಿ.ಡಿ.03:ಕಲ್ಯಾಣ ಕರ್ನಾಟಕ ಪ್ರದೇಶವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಬೇಕಾದರೆ,ಈ ಭಾಗದ ಪ್ರತಿಯೊಂದು ತಾಲ್ಲೂಕಿನಲ್ಲಿ ” ಮಾದರಿ ಪೂರ್ವ ಪ್ರಾಥಮಿಕ” ಶಾಲೆಗಳನ್ನು ತೆಗೆಯಬೇಕು ಎಂದು ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಏಳು ಜಿಲ್ಲೆಗಳನ್ನೊಳಗೊಂಡ ಕಲ್ಯಾಣ ಕರ್ನಾಟಕದ ಎಲ್ಲಾ ತಾಲ್ಲೂಕಿನಲ್ಲೂ ಮಾದರಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಿದರೆ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ‘ ಬದಲಾವಣೆ’ ತರಲು ಸಾಧ್ಯ ಎಂದು ಸರಕಾರಕ್ಕೆ ಸಲಹೆಯನ್ನು ನೀಡಿದ್ದಾರೆ.
ಕಳೆದ ಹಲವು ದಶಕದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿರುವ ಡಾ.ಗುರುರಾಜ ಕರ್ಜಗಿ ಅವರು ಕೆಲವು ಸಂದರ್ಭಗಳಲ್ಲಿ ಸರಕಾರಕ್ಕೆ ‘ ಅತ್ಯಮೂಲ್ಯವಾದ’ ಸಲಹೆಗಳನ್ನು ನೀಡಿರುವ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ.
ಪ್ರಸ್ತುತ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ(ರಿ)ದ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಅವರು,ಯಾವುದೇ ಪ್ರತಿಫಲಾಕ್ಷವಿಲ್ಲದೆ, ಈ ಭಾಗವನ್ನು ಎಲ್ಲಾ ಕ್ಷೇತ್ರದಲ್ಲೂ ‘ ಸರ್ವಾಂಗೀಣ ಅಭಿವೃದ್ಧಿ ‘ ಪಡಿಸಬೇಕು ಎಂಬ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ಮಕ್ಕಳಿಗೆ 5 ವರ್ಷದೊಳಗೆ ನಾವು ಏನನ್ನು ಹೇಳಿಕೊಡುತ್ತೇವೆ ಅದು ಬೇಗನೆ ಮನವರಿಕೆ ಆಗುತ್ತದೆ. ಇದು ಕಲಿಕೆಯ ಹಂತವಾಗಿರುವುದರಿಂದ ಮಕ್ಕಳಿಗೆ ನಾವು ‘ ನಾಯಕತ್ವದ ಗುಣಗಳನ್ನು’ ಬೆಳಸಬೇಕಾದ ಅಗತ್ಯವಿದೆ ಎಂಬುದು ಅವರ ಸಲಹೆಯಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಕ್ಷೇತ್ರದಲ್ಲಿ ಕೆಲವು ಸುಧಾರಣೆಗಳನ್ನು ಜಾರಿಗೆ ಮಾಡಿದರೆ ಮಾತ್ರ, ‘ ಇತರೆ’ ಭಾಗಗಳಂತೆ ಈ ಪ್ರದೇಶವು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಹಳ್ಳಿಗಳಲ್ಲಿ ಅಂಗನವಾಡಿ ಕೇಂದ್ರಗಳಿದ್ದರೂ ಅಲ್ಲಿ ಕನಿಷ್ಠ ಪಕ್ಷ ಮೂಲಭೂತ ಸೌಕರ್ಯಗಳಿಲ್ಲ.
ಹಳೆಯದಾದ ಕಟ್ಟಡ, ಪೀಠೋಪಕರಣ , ಕುಡಿಯುವ ನೀರು ಇತ್ಯಾದಿಗಳಲ್ಲಿ ಬದಲಾವಣೆ
ಆಗಬೇಕು ಎಂದು ಒತ್ತಿ ಹೇಳಿದ್ದಾರೆ.
ಕೇವಲ ಒಂದು ಸಂಘ ಸಂಸ್ಥೆ ಅಥವಾ ವ್ಯಕ್ತಿಯಿಂದ ಇದು ಸಾಧ್ಯವಿಲ್ಲ. ಈ ಭಾಗದ ಜನಪ್ರತಿನಿಧಿಗಳು, ಉದ್ಯಮಿಗಳು, ಎನ್ ಜಿಒ, ಅಧಿಕಾರಿ ವರ್ಗ, ಸೇರಿದಂತೆ ಪ್ರತಿಯೊಬ್ಬರೂ ಕೈ ಜೋಡಿಸಿದರೆ ಮಾತ್ರ ಇದು ‘ ನನಸಾಗಲು’ ಸಾಧ್ಯ ಎಂದು ಕರ್ಜಗಿ ಅವರು ಹೇಳುತ್ತಾರೆ.
ವಿಶ್ವ ಪ್ರಸಿದ್ಧ ಒರಿಸ್ಸಾದ ಪುರಿ ಜಗನ್ನಾಥನ ತೇರು ಎಳೆಯಲು ಸಾವಿರಾರು ಜನರು ಕೈ ಜೋಡಿಸಿದಂತೆ,ಕಲ್ಯಾಣ ಕ‌ರ್ನಾಟಕ ಭಾಗದಲ್ಲಿ ಸಮಗ್ರ ಶಿಕ್ಷಣದ ಸುಧಾರಣೆಗೆ ಎಲ್ಲರೂ
ಮುಂದೆ ಬರಬೇಕು.ಒಂದಿಬ್ಬರಿಂದ ಮಾತ್ರ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬುದನ್ನು
ಅರ್ಥಮಾಡಿಕೊಳ್ಳಬೇಕು ಎಂಬ ಮನವಿಯನ್ನೂ ಸಹಾ ಮಾಡಿದ್ದಾರೆ.

ನನ್ನ ಪ್ರಕಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಬೇಕಾದರೆ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಬೇಕಾದ ಅಗತ್ಯವಿದೆ.ಜಗತ್ತಿನಲ್ಲಿ ಬದಲಾವಣೆ ಶಿಕ್ಷಣದಿಂದ ಮಾತ್ರ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ಕೊಟ್ಟಿದ್ದಾರೆ.

ಪಠ್ಯಕ್ರಮವನ್ನು ಬದಲಾಯಿಸಿ ಸ್ವಯಂ ಉದ್ಯೋಗ ಪಡೆಯುವಂತಹ‌ ಶಿಕ್ಷಣವನ್ನು ನೀಡಬೇಕು.ವೈದ್ಯಕೀಯ, ಇಂಜಿನಿಯರಿಂಗ್ ಮಾಡುವುದೇ ವಿದ್ಯಾರ್ಥಿಗಳ ಗುರಿಯಾಗಿರ ಬಾರದು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವಂತೆಯು ಶಿಫಾರಸ್ಸು ಮಾಡಿದ್ದಾರೆ.
ಮನಸ್ಥಿತಿ ಬದಲಾಗಬೇಕು
ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರ ಮನಸ್ಥಿತಿ ಬದಲಾಗದ ಹೊರತು,ಶಿಕ್ಷಣದಲ್ಲಿ ಬದಲಾವಣೆ ತರುವುದು ಅಷ್ಟು ಸುಲಭವಲ್ಲ.’ ಯುದ್ದಕ್ಕೆ ಹೊರಟ ಸೈನಿಕ ಎದುರಾಳಿ ವಿರುದ್ಧ ರಣರಂಗದಲ್ಲಿ ಹೋರಾಡಿ ಗೆದ್ದೇ ಗೆಲ್ಲುತ್ತೇನೆ ಎಂಬಂತೆ ನಮ್ಮ ಶಿಕ್ಷಕರು ಕೂಡ ಅದೇ ರೀತಿ ಇರಬೇಕು’.
ಇದು ಹಿಂದುಳಿದ ಪ್ರದೇಶ, ನಾವು ಪಾಠ ಮಾಡಿದರೂ ಪ್ರಯೋಜನವಿಲ್ಲ ಎಂದು ‘ಸಿನಿಕತನದಿಂದ’ ಹೊರಬರಬೇಕು. ಮಕ್ಕಳನ್ನು ಕಲಿಕೆಯತ್ತ ಆಕರ್ಷಣೆ ಮಾಡಬೇಕು. ಇಂದಿನ‌
ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.

‘ನಮ್ಮ ಗುರಿ ಸಾಧಿಸಲು ಸಣ್ಣ. ಯೋಜನೆ ಇರಬಾರದು. ಎತ್ತರಕ್ಕೆ ತರಬೇಕು’ ಎಂಬ ಸ್ವಾಮಿ ವಿವೇಕಾನಂದರ ಸಂದೇಶವನ್ನು ಶಿಕ್ಷಕರು ಅಳವಡಿಸಿಕೊಳ್ಳಬೇಕು. ಹಾಗಲೇ ಭವಿಷ್ಯದ ಪ್ರಜೆಗಳನ್ನು ಸಜ್ಜುಗೊಳಿಸಲು ಸಾಧ್ಯವಾಗುತ್ತದೆ ಎಂಬುದು ಅವರ ಸಲಹೆಯಾಗಿದೆ.

ಇದು ಹಿಂದುಳಿದ ಪ್ರದೇಶವಲ್ಲ
ಖ್ಯಾತ ಶಿಕ್ಷಣ ತಜ್ಞ ಡಾ|| ಗುರುರಾಜ ಕರ್ಜಗಿ ಅವರ ಪ್ರಕಾರ ಕಲ್ಯಾಣ ಕರ್ನಾಟಕ ಪ್ರದೇಶವು ಹಿಂದುಳಿದಿದೆ ಎಂಬುದನ್ನು ಸುತರಾಂ ಒಪ್ಪುವುದಿಲ್ಲ. 12 ನೇ ಶತಮಾನದಲ್ಲಿಯೇ ಕಲ್ಯಾಣ ಕರ್ನಾಟಕ
‘ ವಚನ ಸಾಹಿತ್ಯ,ದಾಸ ಸಾಹಿತ್ಯ, ಚಳುವಳಿ ಸೇರಿದಂತೆ ಹಲವು ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆದಿದೆ.
‘ ಕಾಯಕವೇ ಕೈಲಾಸ ‘ ಎಂದ ಬಸವಣ್ಣ,ಅಲ್ಲಮಪ್ರಭು, ಸೇರಿದಂತೆ ಅನೇಕರು ವಚನ ಸಾಹಿತ್ಯದ ಮೂಲಕ ಈ ಪ್ರದೇಶವನ್ನು ಎಲ್ಲಾ ಕ್ಷೇತ್ರಗಳಲ್ಲೂ ‘ ಶ್ರೀಮಂತ ‘ ಗೊಳಿಸಿದ್ದಾರೆ.
ಕೈಗಾರಿಕೆ, ನೀರಾವರಿ, ಕೃಷಿ, ಶಿಕ್ಷಣ ಸೇರಿದಂತೆ ಅನೇಕ ವಲಯದಲ್ಲಿ ಸಾಧಿಸುವುದು ಸಾಕಷ್ಟಿದೆ.ಇಚ್ಛಾ ಶಕ್ತಿಯ ಕೊರತೆಯಿಂದ ನಾವು ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿಲ್ಲ ಎಂಬ ಅಸಮಾಧಾನವನ್ನು ಹೊರಹಾಕಿದರು.


ಉಚಿತವಾಗಿ ತರಬೇತಿ ಪಡೆಯಿರಿ
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಅಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸುಮಾರು 500
ರಿಂದ 600 ಸ್ಮಾರ್ಟ್ ಬೋರ್ಡ್ ಗಳನ್ನು ಬಳಕೆ ಮಾಡಲಾಗುತ್ತದೆ. ಇದರಲ್ಲಿ ಐಎಎಸ್‌, ಐಪಿಎಸ್, ಕೆಎಎಸ್ ಸೇರಿದಂತೆ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತದೆ. ರಾಜ್ಯದ ಯಾವುದೇ ಭಾಗದಲ್ಲೂ ಇಷ್ಟೊಂದು ಬಳಕೆ ಮಾಡುತ್ತಿಲ್ಲ. ಐಟಿಐ, ಪದವಿ, ಇಂಜಿನಿಯರಿಂಗ್, ಡಿಪ್ಲೋಮಾ ಸೇರಿದಂತೆ ಮತ್ತಿತರ ಕೋಸ್೯ಗಳನ್ನು ಪೂರ್ಣಗೊಳಿಸಿದ ಯುವಕರು/ ಯುವತಿಯರು ತರಬೇತಿ ಪಡೆದುಕೊಳ್ಳಬೇಕು ಎಂದು ಡಾ.ಕರ್ಜಗಿ ಅವರು ಪ್ರಾರ್ಥಿಸಿದರು.

ಒಬ್ಬ ಯುವಕ ಇಲ್ಲವೇ ಯುವತಿ ತರಬೇತಿ ಪಡೆದು ಕೆಎಎಸ್, ಐಎಎಸ್‌ ಸೇರಿದಂತೆ ಒಂದು ಉನ್ನತ ಹುದ್ದೆ ಪಡೆದರೆ, ಅದು ನೂರಾರು ವಿದ್ಯಾವಂತರಿಗೆ ‘ ಪ್ರೇರಣೆ’ಯಾಗಲಿದೆ. ಅದ್ದರಿಂದ ಎಲ್ಲಲ್ಲಿ ಸಾಧ್ಯವೋ ಅಂತಹ ಕಡೆ ತರಬೇತಿ ಕೇಂದ್ರಗಳಿಗೆ ಹೋಗುವುದನ್ನು ಮರೆಯಬೇಡಿ ಎಂದು ಯುವಜನತೆಯಲ್ಲಿ ಮನವಿ ಮಾಡಿಕೊಂಡರು.

ಶ್ರಮಪಟ್ಟರೆ ಯಶಸ್ಸು ಖಚಿತ
ನಾನು ಕಲ್ಯಾಣ ಕರ್ನಾಟಕದ ಯಾವುದೇ ಭಾಗಕ್ಕೆ ಹೋದರೂ ಪ್ರತಿಯೊಬ್ಬ ವಿದ್ಯಾರ್ಥಿಗಳು ನಾವು ಎಸ್ ಎಸ್ ಎಲ್ ಸಿ,ದ್ವೀತಿಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ, ಮಂಗಳೂರು, ಬೆಂಗಳೂರುನಂತೆ ಮೊದಲ ಸ್ಥಾನಕ್ಕೆ ಬರುವುದು ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಫಲಿತಾಂಶದಲ್ಲಿ ಸಾಕಷ್ಟು ಹಿಂದೆ ಇತ್ತು.ಅಲ್ಲಿನ ಶಿಕ್ಷಕರು ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಅಗತ್ಯವಾದ ತರಬೇತಿಯನ್ನು ನೀಡಿದರು. ಯಾವ ರೀತಿ ಸಿದ್ದವಾಗಬೇಕು, ಪರೀಕ್ಷೆಯನ್ನು ಎದುರಿಸುವ ರೀತಿ, ಸೇರಿದಂತೆ ಹಲವು ಮಾರ್ಗದರ್ಶನ ನೀಡಿದರು. ಪರಿಣಾಮ ಇಂದು ಅ ಜಿಲ್ಲೆಯು ಶಿಕ್ಷಣದಲ್ಲಿ ಮುಂದುವರಿದ ಜಿಲ್ಲೆಗಳಿಗೆ ಸವಾಲು ಒಡ್ಡುತ್ತಿದೆ. ಶಿಕ್ಷಕರು ಮೊದಲು ತಮ್ಮ ‘ ಮನಸ್ಥಿತಿಯನ್ನು ಬದಲಾವಣೆ’ಮಾಡಿಕೊಂಡರೆ ಉತ್ತಮ ಫಲಿತಾಂಶ ಬಂದೇ ಬರುತ್ತದೆ ಎಂದು ಅಭಿಪ್ರಾಯಪಟ್ಟರು.