ಕಲ್ಯಾಣ ಕರ್ನಾಟಕದಲ್ಲಿ ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ, ವೈರಲ್ ಫೀವರ್

ಕಲಬುರಗಿ:ಸೆ.25: – ಮಹಾಮಾರಿ ಕೊರೋನಾ ಮೂರನೇ ಅಲೆಯ ಆತಂಕದಲ್ಲಿ ಇರುವಾಗಲೇ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಇದೀಗ ವೈರಲ್ ಫೀವರ್ ಜೊತೆಗೆ ಡೆಂಗ್ಯೂ ಹಾವಳಿ ಜನರನ್ನು ಆತಂಕಕ್ಕೀಡು ಮಾಡಿದೆ.
ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಆಸ್ಪತ್ರೆಗಳ ಬಹುತೇಕ ಹಾಸಿಗೆಗಳು ಭರ್ತಿಯಾಗಿವೆ. ಕಲಬುರ್ಗಿ ಜಿಲ್ಲೆಯೊಂದರಲ್ಲಿಯೇ ಒಂದೇ ತಿಂಗಳಲ್ಲಿ ಬರೋಬ್ಬರಿ 158 ಜನರಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಅದರಲ್ಲಿ ಶೇಕಡಾ 50ರಷ್ಟು ಮಕ್ಕಳು ಡೆಂಗ್ಯೂನಿಂದ ಬಳಲುತ್ತಿರುವುದು ಪೋಷರಲ್ಲಿ ಆತಂಕವನ್ನು ಹುಟ್ಟಿಸಿದೆ.
ಕಳೆದ ಜನವರಿಯಿಂದ ಇಲ್ಲಿಯವರೆಗೆ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಪತ್ತೆಯಾದ ಡೆಂಗ್ಯೂ, ವೈರಲ್ ಫೀವರ್ ಪ್ರಕರಣಗಳನ್ನು ನೋಡಿದರೆ ಕಳವಳ ಹುಟ್ಟಿಸುವಂತಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ 266 ಡೆಂಗ್ಯೂ ಪ್ರಕರಣ, 2500ಕ್ಕೂ ಅಧಿಕ ವೈರಲ್ ಫೀವರ್ ಪ್ರಕರಣಗಳು, ಬೀದರ್ ಜಿಲ್ಲೆಯಲ್ಲಿ 80 ಡೆಂಗ್ಯೂ, 300 ವೈರಲ್ ಫೀವರ್, ಯಾದಗಿರಿ ಜಿಲ್ಲೆಯಲ್ಲಿ 10 ಡೆಂಗ್ಯೂ, 300 ವೈರಲ್ ಫೀವರ್, ಕೊಪ್ಪಳ್ ಜಿಲ್ಲೆಯಲ್ಲಿ 25 ಡೆಂಗ್ಯೂ, 250 ವೈರಲ್ ಫೀವರ್, ಬಳ್ಳಾರಿ ಜಿಲ್ಲೆಯಲ್ಲಿ 90 ಡೆಂಗ್ಯೂ, 200 ವೈರಲ್ ಫೀವರ್, ರಾಯಚೂರು ಜಿಲ್ಲೆಯಲ್ಲಿ 80 ಡೆಂಗ್ಯೂ, 2000 ವೈರಲ್ ಫೀವರ್ ಪ್ರಕರಣಗಳು ಪತ್ತೆಯಾಗಿವೆ.
ಇದರಲ್ಲಿ ಆರು ವರ್ಷದೊಳಗಿನ ಒಟ್ಟು ಮೂವರು ಬಾಲಕರು ಸಾವನ್ನಪ್ಪಿದ್ದಾರೆ. ಅದರ ಜೊತೆಗೆ ಹತ್ತು ವರ್ಷಕ್ಕಿಂತ ಮೇಲ್ಪಟ್ಟು ಕೆಲ ಬಾಲಕರು ಸಾವಿಗೀಡಾಗಿರುವ ಕುರಿತು ವರದಿಯಾಗಿದೆ.
ಕಲಬುರ್ಗಿ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಡೆಂಗ್ಯೂ, ಮಲೇರಿಯಾ ಹಾಗೂ ವೈರಲ್ ಫೀವರ್‍ನಂತಹ ರೋಗಗಳು ಜನರನ್ನು ಬಾಧಿಸುತ್ತಿವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ರೋಗಗಳು ಹರಡದಂತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಎಚ್ಚೆತ್ತು ಸ್ವಚ್ಛತೆ ಕುರಿತು ಹೆಚ್ಚು ಗಮನಹರಿಸಬೇಕಿತ್ತು. ಆದಾಗ್ಯೂ, ಎಲ್ಲೆಂದರಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದು, ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಅಲ್ಲದೇ ರಸ್ತೆ ಪಕ್ಕದಲ್ಲಿ, ಬಡಾವಣೆಗಳಲ್ಲಿ ಕಸದ ರಾಶಿ ಕಾಣಿಸುತ್ತಿದ್ದು, ಸರಿಯಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಹೀಗಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ, ಮಲೇರಿಯಾ, ವೈರಲ್ ಫೀವರ್ ಉಲ್ಬಣಗೊಂಡು ಜನರು ರೋಗಗಳಿಗೆ ತುತ್ತಾಗುವಂತಾಗಿದೆ ಎಂಬುದು ಸಾರ್ವಜನಿಕರ ಅಳಲಾಗಿದೆ.