ಕಲ್ಯಾಣ ಕರ್ನಾಟಕದಲ್ಲಿ ನಮೋ ಮತಬೇಟೆ

ಬೆಂಗಳೂರು,ಜ.೧೯: ಮುಂದಿನ ವಿಧಾನಸಭಾ ಚುನಾವಣೆಯ ಗೆಲುವಿನ ಮೇಲೆ ಕಣ್ಣಿಟ್ಟು ರಾಜ್ಯದಲ್ಲಿ ಮತಬೇಟೆ ಆರಂಭಿಸಿರುವ ಪ್ರಧಾನಿ ನರೇಂದ್ರಮೋದಿ ಅವರು ಇಂದು ಕಲ್ಯಾಣ ಕರ್ನಾಟಕದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಮುಂದೆ ಈ ಭಾಗದಲ್ಲಿ ಕಮಲ ಅರಳಿಸಲು ತಮ್ಮದೇ ಆದ ವ್ಯೂಹ ರಚಿಸಿದ್ದಾರೆ.ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯಲು ಇದುವರೆಗೂ ಸಾಧ್ಯವಾಗಲಿಲ್ಲ. ಹಾಗಾಗಿ, ಈ ಭಾಗದಲ್ಲಿ ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚಿನ ಸ್ಥಾನ ಗೆಲ್ಲಲು ರಣತಂತ್ರ ರೂಪಿಸಿರುವ ಬಿಜೆಪಿ ಪ್ರಧಾನಿ ಮೋದಿ ಅವರ ಮೂಲಕ ಮತಬೇಟೆಗೆ ಇಳಿದಿದೆ.೧೦ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸವನ್ನು ಪ್ರಧಾನಿ ಮೋದಿ ಅವರು ಇಂದು ನಡೆಸಿದ್ದು, ಈ ಮೂಲಕ ಈ ಭಾಗದ ಅಭಿವೃದ್ಧಿಯ ಮಂತ್ರವನ್ನು ಬಿಜೆಪಿ ಮುಂದಿಟ್ಟು ಮತದಾರರನ್ನು ಓಲೈಸುವ ಕಸರತ್ತು ನಡೆಸಿದೆ.ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಡಿತ ಬಿಗಿಯಾಗಿದ್ದರೂ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ವಿಧಾನಸಭಾ ಚುನಾವಣೆಯಲ್ಲೂ ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆ ಅವರ ತವರಲ್ಲೇ ಕಮಲ ಅರಳಿಸುವ ಯೋಜನೆಯನ್ನು ಬಿಜೆಪಿ ಮಾಡಿದ್ದು, ಅದರ ಭಾಗವಾಗಿ ಪ್ರಧಾನಿ ನರೇಂದ್ರಮೋದಿ ಅವರು ಕಲಬುರಗಿ ಮತ್ತು ಯಾದಗಿರಿಯಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜನರ ಮನ ಓಲೈಸುವ ಕಸರತ್ತು ನಡೆಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ೪೧ ಕ್ಷೇತ್ರಗಳಿದ್ದು, ಬಿಜೆಪಿಯ ೧೮, ಕಾಂಗ್ರೆಸ್‌ನ ೨೧ ಶಾಸಕರಿದ್ದು, ಜೆಡಿಎಸ್ ಇಬ್ಬರು ಶಾಸಕರನ್ನು ಹೊಂದಿದೆ.ಈ ಭಾಗದಲ್ಲಿ ೩೦ ಸ್ಥಾನಗಳಲ್ಲಿ ಕಮಲ ಅರಳಿಸುವ ನೀಲ ನಕಾಶೆಯನ್ನು ಬಿಜೆಪಿ ತಯಾರು ಮಾಡಿದ್ದು, ಪ್ರಧಾನಿ ಮೋದಿ ಅವರ ಮೂಲಕ ಮತದಾರರ ಮನಗೆಲ್ಲುವ ಪ್ರಯತ್ನವನ್ನು ಬಿಜೆಪಿ ನಡೆಸಿದೆ.ದೆಹಲಿಯಿಂದ ವಿಶೇಷ ವಿಮಾನದಲ್ಲಿ ಕಲಬುರಗಿಗೆ ಬಂದಿಳಿದ ಪ್ರಧಾನಿ ಮೋದಿ ಅವರು, ಯಾದ್‌ಗಿರ್‌ಗೆ ತೆರಳಿ ಜಲಜೀವನ ಮಿಷನ್ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ, ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣೆ ಪುನಶ್ಚೇತನ ಹಾಗೂ ಆಧುನೀಕರಣ ಯೋಜನೆಯನ್ನು ಲೋಕಾರ್ಪಣೆ ಮಾಡಿದರು.ಕಲಬುರಗಿಯಲ್ಲಿ ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಉತ್ತರ ಕರ್ನಾಟಕದ ೫ ಜಿಲ್ಲೆಗಳ ೫೨,೦೭೨ ತಾಂಡಾ/ಅಲೆಮಾರಿ ಜನರಿಗೆ ಹಕ್ಕುಪತ್ರಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ಸರ್ಕಾರದ ಹಲವು ಶಾಸಕರು, ಹಲವು ಸಚಿವರು, ಸಂಸದರು ಉಪಸ್ಥಿತರಿದ್ದರು.