ಕಲ್ಯಾಣ ಕರ್ನಾಟಕಕ್ಕೆ 50 ಕೊಟಿ ರೂ.ಗಳ ಅತಿವೃಷ್ಟಿ ಪರಿಹಾರ ಪ್ಯಾಕೇಜ್ ಘೋಷಣೆಗೆ ಮಮಶೆಟ್ಟಿ ಆಗ್ರಹ

ಕಲಬುರಗಿ,ಡಿ.08:ಅತಿವೃಷ್ಟಿ ಹಾನಿ ಪರಿಹಾರವಾಗಿ ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕಕ್ಕೆ ಸುಮಾರು 50 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಹಾಗೂ ಜಿಲ್ಲೆಯಲ್ಲಿ ರೈತರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ಅತಿವೃಷ್ಟಿ ಮಳೆಯಿಂದ ಹಾನಿಯಾದ ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಬರಲಾರದಂತೆ ಆಗಿದೆ. ಈ ಕುರಿತು ಯಾವುದೇ ಚಕಾರವನ್ನು ಎತ್ತದೇ ಇರುವುದು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಾಗಿದೆ ಎಂದು ಟೀಕಿಸಿದರು.
ರೈತರ ವಾಣಿಜ್ಯಕ ಬೆಳೆಗಳಾದ ಹೆಸರು, ಉದ್ದು, ಸೋಯಾ ಹಾಗೂ ತೊಗರಿ ಕಣಜ ಎಂದು ಖ್ಯಾತಿ ಪಡೆದ ತೊಗರಿ ನಾಡಿನಲ್ಲಿ ತೊಗರಿ ಬೆಳೆಗಾರರ ಒಕ್ಕಲುತನ ಉಳಿಗಾಲದಂತಾಗಿದೆ. ರಾಜ್ಯದ ಬಿಜೆಪಿ ಸರ್ಕಾರ ಚುನಾಯಿತ ಪ್ರತಿನಿಧಿಗಳು ತಮ್ಮ ಅಸ್ತಿತ್ವಕ್ಕಾಗಿ ತಮ್ಮ ಖುರ್ಚಿಯ ಆಸೆಗಾಗಿ ಅಧಿಕಾರದ ಚುಕ್ಕಾಣೆ ಹಿಡಿಯಲು ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಉಪಚುನಾವಣೆ ಪ್ರಚಾರದಲ್ಲಿ ತೊಡಗಿದರೂ ಅನ್ನದಾತರ ನೆರವಿಗೆ ಬಾರದ ರಾಜ್ಯ ಸರ್ಕಾರ ರೈತರ ಕುರಿತು ಬರೀ ಮೊಸಳೆ ಕಣ್ಣೀರು ಹಾಕುವ ಮೂಲಕ ಕಲ್ಯಾಣ ಕರ್ನಾಟಕಕ್ಕೆ ದ್ರೋಹ ಬಗೆಯಲಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ತೊಗರಿಯ ನಾಡಿನಲ್ಲಿ ಅತೀ ಹೆಚ್ಚು ತೊಗರಿ ಬೆಳೆಗಾರರ ಆಸಕ್ತಿಯಿಂದ ತೊಗರಿ ಬೆಳೆಯುತ್ತಾರೆ. ಪ್ರತಿ ವರ್ಷ ಅಂದಾಜು 45 ಲಕ್ಷ ಕ್ವಿಂಟಾಲ್‍ನಿಂದ 50 ಲಕ್ಷ ಕ್ವಿಂಟಾಲ್‍ವರೆಗೆ ತೊಗರಿ ಬೆಳೆಯುತ್ತಾರೆ. ಆದಾಗ್ಯೂ, ಈ ವರ್ಷ ಸರಾಸರಿ ಅರ್ಧದಷ್ಟು ಕಡಿಮೆ ಅಂದರೆ 25 ಲಕ್ಷ ಕ್ವಿಂಟಲ್‍ದಿಂದ 30 ಲಕ್ಷ ಕ್ವಿಂಟಲ್‍ವರೆಗೆ ಮಾತ್ರ ಇಳುವರಿ ಬರುವ ಸಂಭವವಿದೆ. ಒಂದು ಕಡೆ ಅತಿವೃಷ್ಟಿ ಮಳೆಯಿಂದ ಹಾನಿಯುಂಟಾದರೆ, ಮತ್ತೊಂದು ಕಡೆಗೆ ತೊಗರಿ ಬೆಳೆ ನೆಟೆ ಹೋಗಿ ತೊಗರಿ ಒಣಗಿ ಸೊಡ್ಡಾಗಿ ನಿಂತಿದೆ. ರೈತರು ಇಂತಹ ಹೀನಾಯ ಪರಿಸ್ಥಿತಿಯಲ್ಲಿ ಇರುವಾಗ ರೈತರ ಕುರಿತು ಸರ್ಕಾರದ ನಿಷ್ಕಾಳಜಿ ಎದ್ದು ಕಾಣುತ್ತಿದೆ ಎಂದು ಅವರು ಕಟುವಾಗಿ ಟೀಕಿಸಿದರು.
ವಿಧಾನ ಪರಿಷತ್ ಚುನಾವಣೆಯು ಕೂಡ ಬಿಜೆಪಿ ಸರ್ಕಾರದ ಅಧಿಕಾರ ದಾಹಕ್ಕಾಗಿ ಪ್ರಮುಖವಾಗಿದೆ. ಎಲ್ಲಿಯೂ ಕೂಡ ಸರ್ಕಾರದ ಚುನಾಯಿತ ಪ್ರತಿನಿಧಿ ಸದಸ್ಯರು ಒಬ್ಬರು ತೊಗರಿ ಬೆಳೆಗಾರರ ಕುರಿತು ಚಕಾರ ಎತ್ತುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ತೊಗರಿ ನಾಡು ತೊಗರಿ ಮಂಡಳಿಗೆ ಕವಡೆ ಕಿಮ್ಮತ್ತು ಇಲ್ಲ. ಹೆಸರಿಗೆ ಮಾತ್ರ ತೊಗರಿ ಮಂಡಳಿಯಾಗಿದೆ. ಸುಮಾರು ವರ್ಷಗಳಿಂದಲ ಮಂಡಳಿಗೆ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಮಂಡಳಿ ಕುರಿತು ರಾಜ್ಯ ಸರ್ಕಾರವು ಜಾಣ ಕುರುಡನಂತೆ ವರ್ತಿಸುತ್ತಿದೆ ಎಂದು ಅವರು ಹೇಳಿದರು.
ರೈತರು ಎದುರಿಸುವ ಸವಾಲುಗಳು ಬೀಜ, ರಸಗೊಬ್ಬರ, ಔಷಧಿಗಳ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಸದಿ ಕಳೆಯುವವರ ಕೂಲಿಯೂ ಸಹ ಹೆಚ್ಚಾಗಿದೆ. ಸಿಕ್ಕಾಪಟ್ಟೆ ಲಾಗುವಾಡಿ ಮಾಡಿ ಬೆಳೆದ ತೊಗರಿ ಸಂಪೂರ್ಣ ನೆಲಕಚ್ಚಿದಂತಾಗಿದೆ. ತೊಗರಿ ಬೆಳೆಗಾರರು ಕುಸಿದಿದ್ದಾರೆ. ಮಾರುಕಟ್ಟೆಯಲ್ಲಿ ತೊಗರಿಗೆ ಬೆಂಬಲ ಬೆಲೆ ಇಲ್ಲ. ಈ ವರ್ಷ ರೈತರ ಕಣ್ಣೀರು ಕೈ ತೊಳೆದಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬ್ಯಾಂಕ್‍ಗಳಿಂದ ರೈತರಿಗೆ ಮೋಸವಾಗಿದೆ. ಅಲ್ಪಸ್ವಲ್ಪ ಪರಿಹಾರ ಹಣ ಸಾಲ ಇರುವ ರೈತರಿಗೆ ಮೊಟಕುಗೊಳಿಸಿ, ರೈತರ ಖಾತೆಗೆ ಸ್ಥಗಿತಗೊಳಿಸಿ, ಪರಿಹಾರ ಹಣ ಸಾಲ ಕಟ್ಟಿಸಲು ಮುಂದಾದ ಬ್ಯಾಂಕುಗಳು ರೈತರ ಗಾಯದ ಮೇಲೆ ಬರೆ ಎಳೆದಿವೆ. ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮಧ್ಯಪ್ರವೇಶ ಮಾಡಿ ರೈತರಿಗೆ ಬಂದ ಪರಿಹಾರದ ಹಣ ಸಂಪೂರ್ಣ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಗೌರಮ್ಮ ಪಿ. ಪಾಟೀಲ್, ಜಾವೇದ್ ಹುಸೇನ್, ಅಲ್ತಾಫ್ ಹುಸೇನ್ ಇನಾಂದಾರ್, ಸಿದ್ಧರಾಮ್ ಹರವಾಳ್, ಸಾಯಬಣ್ಣಾ ಗುಡುಬಾ, ರೇವಣಸಿದ್ದಪ್ಪ ಕಲಬುರ್ಗಿ ಮುಂತಾದವರು ಉಪಸ್ಥಿತರಿದ್ದರು.