ಕಲ್ಯಾಣ ಕರ್ನಾಟಕಕ್ಕೆ ಹಲವರ ಕೊಡುಗೆಡಬ್ಬಲ್ ಎಂಜಿನ್ ಸರ್ಕಾರದ್ದು ಬದ್ದತೆ:ದತ್ತಾತ್ರೇಯ ರೇವೂರ

ಕಲಬುರಗಿ,ಫೆ.26:ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತ್ರತ್ವದ ಡಬಲ್ ಎಂಜಿನ್ ಸರ್ಕಾರ ಈ ಭಾಗದ ಅಭಿವೃದ್ಧಿಗೆ ಬದ್ದತೆ ತೋರಿದೆ ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವುರ ಅಭಿಪ್ರಾಯ ಪಟ್ಟರು.

ಕಲ್ಯಾಣ ಕರ್ನಾಟಕ ಉತ್ಸವದ ಎರಡನೇ ದಿನವಾದ ಶನಿವಾರ ಸಾಂಸ್ಕøತಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 100 ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿ ಪಡಿಸುವ ಬದ್ದತೆ ಮೆರೆದ ಪರಿಣಾಮ ಈ ಭಾಗದ ರಾಯಚೂರು, ಯಾದಗಿರಿ ಜಿಲ್ಲೆಗಳನ್ನು ಮಹತ್ವಾಕಾಂಕ್ಷೆಯ ಜಿಲ್ಲೆಗಳೆಂದು ಪರಿಗಣಿಸಿ ಅಭಿವೃದ್ಧಿ ಮಾಡಲು ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಕೋಟ್ಯಂತರ ರೂ. ನೀಡುತ್ತಿದ್ದರೆ, ರಾಜ್ಯ ಸರ್ಕಾರ ಮಂಡಳಿಗೆ ವರ್ಷದಿಂದ ವರ್ಷಕ್ಕೆ ಅನುದಾನವನ್ನು 5,000 ಕೋಟಿ ರೂ. ವರೆಗೆ ಹೆಚ್ಚಳ ಮಾಡುವ ಮೂಲಕ ಬರಿ ಹೆಸರು ಬದಲಾವಣೆಯಿಂದಲ್ಲ ನಿಜವಾಗಿ ಕಲ್ಯಾಣ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಬದ್ದತೆ ಮೆರೆದ ಸರ್ಕಾರ ಇದಾಗಿದೆ ಎಂದರು.

ಈ ಭಾಗದ ಅಭಿವೃದ್ಧಿಗೆ ರಾಜ್ಯಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ವೈಜನಾಥ ಪಾಟೀಲರು ಸೇರಿದಂತೆ ಅನೇಕರ ಕೊಡುಗೆ ಇದೆ ಎಂದು ಒತ್ತಿ ಹೇಳಿದರು.

ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ದಾಸರು ಶರಣರ ನಾಡಿನ ಸಂಸ್ಕೃತಿಯ ಅನಾವರಣ ಕಲ್ಯಾಣ ಕರ್ನಾಟಕ ಉತ್ಸವದಿಂದ ಆಗಿದೆ. ಉತ್ಸವ ಆಯೋಜನೆಗೆ ಬಿಜೆಪಿ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗ ಹಾಗೂ ಬದ್ದತೆ ಕಾರಣವಾಗಿದೆ. ಮಂಡಳಿಯ ಅನುದಾನವನ್ನು 3000ಕ್ಕೆ ಏರಿಸಿದ್ದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು 5,000 ಕ್ಕೆ ಘೋಷಿಸಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು. ಆ ಮೂಲಕ ಈ ಭಾಗದ ಅಭಿವೃದ್ಧಿಯ ಪಣ ತೊಟ್ಟಿದ್ದಾರೆ ಎಂದರು

ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಮಾತನಾಡಿ ಉತ್ಸವ ಈ ಭಾಗದ ಶ್ರೀಮಂತಿಕೆಯ ಪ್ರತಿತಿಯಾಗಿದೆ. ಆದರೆ ಇದಕ್ಕೆ ಶ್ರಮಿಸಿದವರ ಪೈಕಿ ಖರ್ಗೆಯವರ ಕೊಡುಗೆಯೂ ಇದೆ ಎಂದು ಸ್ಮರಿಸಿದರು.

ವೇದಿಕೆ ಮೇಲೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ. ಸೇರಿ ಅನೇಕರು ಇದ್ದರು.