ಕಲ್ಯಾಣ ಕರ್ನಾಟಕಕ್ಕೆ ಬಳಕೆಯಾಗದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿ: ಅಟ್ಟೂರ್ ಆಕ್ರೋಶ

ಕಲಬುರಗಿ,ಮೇ.27: ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‍ಆರ್)ಯಡಿ ಸಾವಿರಾರು ಕೋಟಿ ರೂ.ಗಳ ನಿಧಿ ಸಂಗ್ರಹವಾಗಿದೆ. ಆದಾಗ್ಯೂ, ಕಲ್ಯಾಣ ಕರ್ನಾಟಕದ ನಾಲ್ಕೂ ಜಿಲ್ಲೆಗಳಲ್ಲಿ ನಯಾ ಪೈಸೆ ಸಹ ವೆಚ್ಚವಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿರುವುದು ಕಳವಳಕಾರಿ ವಿಷಯ ಎಂದು ಅಖಿಲ ಭಾರತ ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷ ಹಾಗೂ ನ್ಯಾಯವಾದಿ ಹಣಮಂತರಾಯ್ ಎಸ್. ಅಟ್ಟೂರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸಿಎಸ್‍ಆರ್ ಪೋರ್ಟಲ್‍ನಲ್ಲಿ ಕಳೆದ 2019-2020ರ ಆರ್ಥಿಕ ವರ್ಷದ ವರದಿಯಲ್ಲಿ ಈ ಕುರಿತು ಉಲ್ಲೇಖವಾಗಿದ್ದು, ಕೇಂದ್ರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ಈ ಪೋರ್ಟಲ್ ನಿರ್ವಹಿಸುತ್ತಿದೆ. ಪ್ರಸ್ತಾಪಿಸಿದ ಹಣಕಾಸು ವರ್ಷದಲ್ಲಿ ಸಿಎಸ್‍ಆರ್ ಯೋಜನೆ ಜಿಲ್ಲೆಗಳೆಂದು ಉಲ್ಲೇಖಿಸಿದ್ದರೂ ಹೆಚ್ಚಿನ ಅನುದಾನವನ್ನು ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ಸುತ್ತಮುತ್ತಲಿನ ಜಿಲ್ಲೆಗಳಿಗೆ ಬಳಕೆಯಾಗಿದೆ ಎಂದು ಅವರು ಹೇಳಿಕೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಪೈಕಿ ಯಾದಗಿರಿ ಜಿಲ್ಲೆಗೆ 50 ಲಕ್ಷ ರೂ.ಗಳು, ಬಳ್ಳಾರಿ ಜಿಲ್ಲೆಗೆ ಒಂದು ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು, ಬೀದರ್, ಕಲಬುರ್ಗಿ, ರಾಯಚೂರು ಮತ್ತು ಕೊಪ್ಪಳ್ ಜಿಲ್ಲೆಗಳು ಈ ನಿಧಿಯ ನೆರವಿನಿಂದ ವಂಚಿತಗೊಂಡಿವೆ ಎಂದು ವರದಿಯಿಂದ ಗೊತ್ತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಮಹತ್ವಾಕಾಂಕ್ಷೆ ಜಿಲ್ಲೆಗಳೆಂದು ಗುರುತಿಸಿದೆ. ಸುಸ್ಥಿರ ಅಭಿವೃದ್ಧಿ ಸಾಧಿಸಬೇಕಾದ ಕ್ಷೇತ್ರಗಳನ್ನು ಗೊತ್ತು ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಶಿಕ್ಷಣ, ಆರೋಗ್ಯ, ಸುಸ್ಥಿರ ಪರಿಸರ ನಿರ್ಮಾಣ ಸಿಎಸ್‍ಆರ್ ನೀತಿಯಾಗಿದ್ದು, ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿದೆ. ಇವೆಲ್ಲ ಕೇವಲ ಕಾಗದಕ್ಕೆ ಸೀಮಿತವಾಗಿದೆ ಎಂದು ಅವರು ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿಯಾದರೂ ಈ ಭಾಗದ ಜನರ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ. ಈಗಾಗಲೇ ಕೊರೋನಾ ಸೋಂಕಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಜನರ ಆರೋಗ್ಯಕ್ಕಾಗಿಯಾದರೂ ಈ ಹಣ ಬಿಡುಗಡೆಗೊಳಿಸಿ ಜನರ ಪ್ರಾಣ ಉಳಿಸುವ ಕಾರ್ಯ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಮಲತಾಯಿ ಧೋರಣೆ ಹಾಗೂ ರಾಜ್ಯ ಸರ್ಕಾರದಿಂದ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವುದು ಸರಿಯಲ್ಲ. ಈ ಭಾಗದ ಜನರ ಕಷ್ಟಕ್ಕೆ ಸ್ಪಂದಿಸಿ ಈ ಭಾಗ ಅಭಿವೃದ್ಧಿಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇಂತಹ ಅನ್ಯಾಯದ ವಿರುದ್ಧ ವಿರೋಧ ಪಕ್ಷದವರೂ ಕೂಡ ಗಟ್ಟಿಯಾಗಿ ಧ್ವನಿ ಎತ್ತಿದಾಗ ಮಾತ್ರ ಈ ಭಾಗ ಅಭಿವೃದ್ಧಿ ಅಗುತ್ತದೆ. ರಾಷ್ಟ್ರ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಒಂದೇ ಪಕ್ಷ ಇದ್ದರೆ ಈ ಭಾಗ ಅಭಿವೃದ್ಧಿ ಆಗಬಹುದು ಎಂಬ ನಿರೀಕ್ಷೆಯೊಂದಿಗೆ ಜನರು ಮತ ನೀಡಿದ್ದಾರೆ. ಆದಾಗ್ಯೂ, ಜನರ ಈ ನಂಬಿಕೆ ಹುಸಿಯಾಗಿದೆ. ಈ ಭಾಗಕ್ಕೆ ವಿಶೇಷವಾದ ಅನುದಾನ ನೀಡುವುದರೊಂದಿಗೆ ಅಭಿವೃದ್ಧಿಗೊಳಿಸುವ ಮೂಲಕ ಹೆಸರಿಗೆ ತಕ್ಕಂತೆ ಕಲ್ಯಾಣ ಕರ್ನಾಟಕ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.