ಭಾಲ್ಕಿ:ಜು.8: ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಾಗಿ ಬಜೆಟ್‍ನಲ್ಲಿ ಪ್ರಕಟಿಸಿರುವುದು ಈ ಭಾಗದ ಜನರಲ್ಲಿ ಅಭಿವೃದ್ಧಿಯ ಭರವಸೆ ಮೂಡಿಸಿದೆ ಎಂದು ತಿಳಿಸಿರುವ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ನಿರ್ಧಾರ ಅಸಮತೋಲನ ನಿವಾರಣೆಗೆ ಪೂರಕವಾಗಿದೆ, ಈ ಹಿಂದೆ ಮಂಜೂರಾದ ಹಣವೂ ಖರ್ಚಾಗದೆ ಹಾಗೇ ಉಳಿಯುತ್ತಿತ್ತು, ಈಗ ಸರಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ ಎಂಬುದು ಬಜೆಟ್‍ನಲ್ಲೇ ಖಾತ್ರಿಯಾಗಿದೆ ಎಂದು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಪ್ರಗತಿಗೆ ಪೂರಕವಾಗಿ ರಾಯಚೂರು ಬಳಿಯ ಕಲ್ಮಲಾ ಜಂಕ್ಷನ್‍ನಿಂದ ಸಿಂಧನೂರು ಬಳಿಯ ಬಳ್ಳಾರಿ-ಲಿಂಗಸುಗೂರು ರಸ್ತೆ ವೃತ್ತದವರೆಗೆ ಒಟ್ಟು 78 ಕಿ.ಮೀ. ಉದ್ದದ ರಸ್ತೆಯನ್ನು 1,696 ಕೋಟಿ ರೂ.ವೆಚ್ಚದಲ್ಲಿ ಹೈಬ್ರೀಡ್ ಆನ್ಯುಟಿ ಮಾದರಿಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ಅಭಿವೃದ್ಧಿ ಪಡಿಸುವುದಾಗಿ ಘೋಷಿಸಿರುವುದು ಈ ಭಾಗದ ಸಂಪರ್ಕಾಭಿವೃದ್ಧಿಯಲ್ಲಿ ಕ್ರಾಂತಿಯನ್ನೇ ತರಲಿದೆ.
ಬೀದರ್‍ನಲ್ಲಿ ಕೃಷ್ಣಮೃಗ ಸಂರಕ್ಷಣಾ ಮೀಸಲು ಪ್ರದೇಶ ನಿರ್ಮಾಣ. ಕಲ್ಯಾಣ ಕರ್ನಾಟಕ ಭಾಗದ ಪ್ರವಾಸಿ ತಾಣಗಳಾದ ಹಂಪಿ, ಮೈಲಾರ, ಗಾಣಗಾಪುರ, ಸನ್ನತಿ, ಮತ್ತು ಮಳಕೇಡ, ಬೀದರ್, ರಾಯಚೂರು, ಕಲಬುರಗಿ, ಕೋಟೆಗಳ ಸಮಗ್ರ ಅಭಿವೃದ್ಧಿಗೆ 75 ಕೋಟಿ ರೂ. ಒದಗಿಸಲಾಗಿದ್ದು, ಇದರಿಂದ ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಅನುವಾಗುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವುದರಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಗೆ ಮತ್ತು ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುತ್ತದೆ.
ಕಲ್ಯಾಣ ಕರ್ನಾಟಕ ಭಾಗದ ರಾಷ್ಟ್ರೀಯ ಸಂರಕ್ಷಿತ ಸ್ಮಾರಕಗಳಾದ ಹಂಪಿಯ ವಿಜಯ ವಿಠ್ಠಲ ದೇವಾಲಯ, ಬೀದರ್ ಕೋಟೆಯಲ್ಲಿ ರಾತ್ರಿಯ ವೇಳೆ 3 ಡಿ ಪೆÇ್ರಜೆಕ್ಷನ್ ಮಲ್ಟಿ ಮೀಡಿಯಾ ಧ್ವನಿ ಬೆಳಕಿನ ಪ್ರದರ್ಶನ ಯೋಜನೆಯೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 400 ಸಮುದಾಯ ಶೌಚಾಲಯ ಸಂಕೀರ್ಣ ನಿರ್ಮಾಣ ಮಾಡುವುದು ಕೂಡ ಈ ಭಾಗದ ನೈರ್ಮಲ್ಯ ಕಾಪಾಡುವಲ್ಲಿ ಮತ್ತು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.