
ಕಲಬುರಗಿ,ಮೇ.23-ಪ್ರಸ್ತುತ ನೂತನ ಸರಕಾರ ಕಲ್ಯಾಣ ಕರ್ನಾಟಕಕ್ಕೆ ಕನಿಷ್ಠ 8 ಮಂತ್ರಿ ಸ್ಥಾನಗಳನ್ನು ಕಡ್ಡಾಯವಾಗಿ ನೀಡಲು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 371ನೇ(ಜೆ) ಕಲಂ ತಿದ್ದುಪಡಿಯಂತೆ 2019ರ ವರೆಗೆ ಇದ್ದ ನಿಯಮಾವಳಿಗಳ ಪ್ರಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಕಲ್ಯಾಣ ಕರ್ನಾಟಕದ ಮಂತ್ರಿಗಳಲ್ಲಿ ಒಬ್ಬೊಬ್ಬರಿಗೆ 371ನೇ(ಜೆ) ಕಲಂ ಅಡಿ ಮಂಡಳಿಯ ನಿಯಮದಂತೆ ನಿಗಧಿತ ಅವಧಿಯ ವರೆಗೆ ಸರದಿಯಂತೆ (ರುಟೇಶನ) ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು, ಈ ಹಿಂದಿನ ಸರಕಾರದಲ್ಲಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಶಾಸಕರಿಗೆ ನೀಡಬೇಕೆಂಬ ಮಂಡಳಿಯ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಿರುವುದನ್ನು ರದ್ದು ಮಾಡಿ ಮಂತ್ರಿಗಳನ್ನೇ ಅಧ್ಯಕ್ಷರನ್ನಾಗಿ ಮಾಡಿ ಮಂಡಳಿಯ ಬಲವರ್ಧನೆ ಹೆಚ್ಚಿಸುವದರ ಜೊತೆಗೆ ಈ ಮೂಲಕ ಪರಿಣಾಮಕಾರಿ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಬೇಕು, 371ನೇ(ಜೆ) ಕಲಂ ತಿದ್ದುಪಡಿಯಡಿ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ವಾಯತ್ತ ಅಭಿವೃದ್ಧಿ ಮಂಡಳಿಯಾಗಿದ್ದು, ಈ ಮಂಡಳಿಯ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ 10 ವರ್ಷದ ಗಡುವನ್ನಿಟ್ಟುಕೊಂಡು ಕಲ್ಯಾಣದ ಅಭಿವೃದ್ಧಿಗೆ ವೈಜ್ಞಾನಿಕ ಕ್ರೀಯಾ ಯೋಜನೆಯನ್ನು ರೂಪಿಸಿ ಕಾಲಮಿತಿಯಲ್ಲಿ ಕಾರ್ಯಾಚರಣೆ ರೂಪದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಪ್ರಾದೇಶಿಕ ಅಸಮತೋಲನೆ ನಿವಾರಣೆ ಮಾಡುವ ಗುರಿಯನ್ನಿಟ್ಟುಕೊಳ್ಳಬೇಕು,ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ರಚನಾತ್ಮಕ ಕಾಲಮಿತಿಯ ಪ್ರಗತಿಗೆ ಡಾ. ನಂಜುಂಡಪ್ಪ ವರದಿಯ ಮಾನದಂಡವನ್ನು ಆಧಾರವನ್ನಿಟ್ಟುಕೊಂಡು, ಒಂದು ಗ್ರಾಮ ಪಂಚಾಯತಿಯನ್ನು ಸೂಚ್ಯಂಕ ಮಾಡಿಕೊಂಡು ಕಲ್ಯಾಣ ಕರ್ನಾಟಕ ವರದಿ ತಯಾರಿಸಿ ಆ ವರದಿಯ ಆಧಾರದ ಮೇಲೆ ವೈಜ್ಞಾನಿಕ ಕ್ರೀಯಾ ಯೋಜನೆಯನ್ನು ರೂಪಿಸಬೇಕು. ಇದಕ್ಕೆ ಪೂರಕವಾಗಿ ಮಂಡಳಿಯಲ್ಲಿ ತಜ್ಞರ ಯೋಜನಾ ಅಧಿಕಾರಿಗಳ ವಿಭಾಗ ಅಸ್ತಿತ್ವಕ್ಕೆ ತರಬೇಕು, ಕೆ.ಕೆ.ಆರ್.ಡಿ.ಬಿ.ಗೆ ಮಂಜೂರಾಗುವ ಹಣ ಆಯಾ ವರ್ಷದ ಅವಧಿಯಡಿ ಕಾಲಮಿತಿಯಲ್ಲಿ ಬಳಸಿಕೊಳ್ಳಲು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡು ಪಾರದರ್ಶಕತೆಯಂತೆ ಹಣ ಉಪಯೋಗ ಮಾಡುವುದರ ಜೊತೆಗೆ ಭೌತಿಕ ಕಾಮಗಾರಿಗಳು ಯುದ್ಧೋಪಾಯದಲ್ಲಿ ನಡೆಯಬೇಕು, 371ನೇ(ಜೆ) ಕಲಂ ಸಂವಿಧಾನ ತಿದ್ದುಪಡಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪನೆ ಮಾಡಬೇಕು, ಈ ಹಿಂದಿನ ಸರಕಾರ ಈ ಬೇಡಿಕೆಯ ಬಗ್ಗೆ ಭರವಸೆ ನೀಡಿತ್ತು. ಆದರೆ, ಈಡೇರಿಸಿಲ್ಲ. ಈ ಬೇಡಿಕೆಯ ಬಗ್ಗೆ ನೂತನ ಸರಕಾರ ಬದ್ಧತೆಯನ್ನು ಪ್ರದರ್ಶಿಸಿ ತುರ್ತಾಗಿ ಜಾರಿಗೆ ತರಬೇಕು, 371ನೇ(ಜೆ) ಕಲಂ ತಿದ್ದುಪಡಿಯಡಿ ನೇಮಕಾತಿ ಮತ್ತು ಮುಂಬಡ್ತಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾದರಿಯ ಮಾನದಂಡದಂತೆ ಅನುಷ್ಠಾನ ಮಾಡಬೇಕು,371ನೇ(ಜೆ) ಕಲಂ ನಿಯಮಗಳಂತೆ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಕಚೇರಿಗಳು, ವಿಭಾಗೀಯ ಕೇಂದ್ರ ಕಲಬುರಗಿಗೆ ಸ್ಥಳಾಂತರ ಮಾಡಬೇಕು, ವಿಶೇಷ ಸ್ಥಾನಮಾನ ಪಡೆದಿರುವ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿ ನೂತನ ಸರಕಾರ ವರ್ಷದಲ್ಲಿ ಎರಡು ಬಾರಿ ಸಂಪುಟ ಸಭೆಗಳನ್ನು ವಿಭಾಗೀಯ ಕೇಂದ್ರ, ಕಲಬುರಗಿಯಲ್ಲಿ ನಡೆಸಬೇಕು. ವರ್ಷದ ಆರಂಭ ಫೆಬ್ರುವರಿ ತಿಂಗಳಲ್ಲಿ ಮತ್ತು ವರ್ಷದ ಕೊನೆ ಹಂತ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಬೇಕು, 371ನೆ(ಜೆ) ಕಲಂ ತಿದ್ದುಪಡಿಯಡಿ ಕಲ್ಯಾಣ ಕರ್ನಾಟಕದ ಮೀಸಲಾತಿ ಕೋಟಾದಡಿ ಮತ್ತು ರಾಜ್ಯಮಟ್ಟದ ಮೆರಿಟ್ ಕೋಟಾದಲ್ಲಿ ನೇಮಕವಾದ 4194 ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಹೈಕೋರ್ಟಿನಲ್ಲಿ ಪ್ರಶ್ನಿಸಿ ದಾವೆ ಹೂಡಿರುವ ವಿಷಯಕ್ಕೆ ಸಂಬಂಧಿಸಿ ನೂತನ ಸರಕಾರ ನೂತನ ಅಡ್ವೋಕೇಟ್ ಜನರಲ್ ಅವರ ಮೂಲಕ ನೇಮಕಾತಿಗಳಿಗೆ ಸಮರ್ಥವಾಗಿ ಮಂಡಿಸಿಕೊಂಡು ನಮ್ಮ ಅಭ್ಯರ್ಥಿಗಳಿಗೆ ತಕ್ಷಣ ನ್ಯಾಯ ಒದಗಿಸಿಕೊಡಲು ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು, 37ನೇ(ಜೆ) ಅಡಿ ನಮ್ಮ ಪಾಲಿನ ಖಾಲಿ ಇರುವ ಸಹಸ್ರಾರು ಹುದ್ದೆಗಳು ಸಹಜ ಪ್ರಕ್ರಿಯೆಯಂತೆ ಭರ್ತಿ ಮಾಡಬೇಕು. ಅದರಂತೆ ಮುಂಬಡ್ತಿಗಳು ಸಹ ಒಂದು ದಿನವು ತಡೆಯದೆ ಬಡ್ತಿಗಳು ನೀಡಬೇಕು. ಗುಲಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ, ಕಲ್ಯಾಣದ ವಿಶ್ವವಿದ್ಯಾಲಯಗಳ, ಶಾಲಾಕಾಲೇಜುಗಳ, ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಬೇಕು,
ಈ ಹಿಂದಿನ ಸರಕಾರದ ಅವಧಿಯಲ್ಲಿ ಪ.ಜಾತಿ ಮತ್ತು ಪ.ಪಂಗಡ ಮಾದರಿಯಂತೆ ನೇಮಕಾತಿಗಳಿಗೆ ಸಂಬಂಧಿಸಿದಂತೆ ಕೆಲವಷ್ಟು ಪ್ರಕ್ರಿಯೆ ಕೈಗೊಳ್ಳಲಾಗಿದೆ. ಆದರೆ, ಮುಂಬಡ್ತಿಗಳಿಗೆ ಸಂಬಂಧಿಸಿ ಸಂಪುಟ ಉಪಸಮಿತಿ ಕಳೆದ ಮಾರ್ಚ ತಿಂಗಳಲ್ಲಿ ಸಭೆಯಲ್ಲಿ ಕೈಗೊಂಡ ಸಭೆಯ ನಡಾವಳಿಗಳಂತೆ ಅಯಾ ಇಲಾಖೆಯ ಮುಂಬಡ್ತಿಗಳು ರಾಜ್ಯಮಟ್ಟದ ಜೇಷ್ಠತೆಯ ಆಧಾರದಂತೆ, ಪರಿಗಣಿಸಿ ಕಲ್ಯಾಣದ ಅಭ್ಯರ್ಥಿಗಳಿಗೆ ಮುಂಬಡ್ತಿಗಳಲ್ಲಿ ನ್ಯಾಯ ಒದಗಿಸಬೇಕು, ಪ್ರಸ್ತುತ ನೂತನ ಮಂತ್ರಿ ಮಂಡಲದಲ್ಲಿ ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಸದಾ ಸ್ಪಂಧಿಸುವ ನಾಯಕರಾದ ಪ್ರಿಯಾಂಕ್ ಖರ್ಗೆಯವರು, ಸಂಪುಟ ಸಚಿವರುಗಳಾಗಿರುವುದು ಸಂತಸದ ವಿಷಯವಾಗಿದೆ. ಅದರಂತೆ, ಮುಂದೆ ನೂತನವಾಗಿ ಸಂಪುಟದಲ್ಲಿ ಬರುವ ನಮ್ಮ ಭಾಗದ ಸಚಿವರು ರಾಜಕಿಯ ಇಚ್ಛಾಶಕ್ತಿಯನ್ನು ವ್ಯಕ್ತಪಡಿಸಿ ಬದ್ಧತೆ ಪ್ರದರ್ಶನ ಮಾಡುವ ಮೂಲಕ ನಮ್ಮ ಭಾಗದ ಜ್ವಲಂತ ಬೇಡಿಕೆಗಳಿಗೆ ಈಡೇರಿಸಬೇಕು ಎಂದು ಒತ್ತಾಯಿಸಿದರು.