ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಪಕ್ಷಾತೀತ ಹೋರಾಟಕ್ಕೆ ಬಿ.ಆರ್ ಪಾಟೀಲ ನೇತೃತ್ವ ವಹಿಸಲು ಮನವಿ

ಕಲಬುರಗಿ:ಎ.3: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ ಸ್ಥಳಾಂತರಗೊಂಡ ಯೋಜನೆಗಳು ಮರಳಿ ತರಲು ಹಾಗೂ ಈ ಭಾಗದ ಅಭಿವೃದ್ಧಿಗೆ ಉಗ್ರ ಹೋರಾಟ ರೂಪಿಸುವ ಅಗತ್ಯವಿದೆ.ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹೋರಾಟಕ್ಕೆ ಮಾಜಿ ಶಾಸಕ ಬಿ.ಆರ್.ಪಾಟೀಲ ನೇತೃತ್ವ ವಹಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮನವಿ ಮಾಡಿದ್ದಾರೆ.

ಇತ್ತೀಚೆಗೆ ವಿವಿಧ ಪಕ್ಷಗಳ ಮುಖಂಡರ ಮತ್ತು ಹೋರಾಟಗಾರರ ಸಭೆ ನಡೆದು ಪಕ್ಷಾತೀತ ಹೋರಾಟದ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಈ ಸಭೆಯಲ್ಲಿ ಮಾಜಿ ಶಾಸಕ ಬಿ.ಆರ್.ಪಾಟೀಲ ಅವರು ಹೋರಾಟದ ನೇತೃತ್ವವನ್ನು ವಹಿಸಿದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಬೀಳುತ್ತದೆ ಎಂದು ಸಭೆಯಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಲಬುರ್ಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಈಗ ಕೈಗೆ ಎಟುಕದ ಮಾತಾಗಿದೆ.ಕೇಂದ್ರ ಸರಕಾರ ಒಂದೋಂದೇ ಯೋಜನೆಗಳು ಇಲ್ಲಿಂದ ಎತ್ತಂಗಡಿ ಮಾಡುತ್ತಿದ್ದರು ಆಡಳಿತ ಪಕ್ಷದವರು ಸೇರಿದಂತೆ ವಿರೋಧ ಪಕ್ಷದ ನಾಯಕರು ಮೌನ ವಹಿಸಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಉದ್ಯೋಗ ಸೃಷ್ಷಿಸಲು ಕೈಗಾರಿಕೆಗಳ ಸ್ಥಾಪನೆ ಅಗತ್ಯವಿದೆ.ಅದರಂತೆ ವಿವಿಧ ಯೋಜನೆಗಳ ಇಲಾಖೆಗಳೂ ಬೇಕು.ಆದರೆ ಸರಕಾರ ಇದಕ್ಕೆ ತದ್ವಿರುದ್ಧವಾಗಿ ಇದ್ದ ಬದ್ದ ಯೋಜನೆಗಳು ಕಿತ್ತುಕೊಂಡು ದ್ರೋಹ ಬಗೆಯುತ್ತಿದೆ.ಇನ್ನು ಕೈಗಾರಿಕೆಗಳ ಸ್ಥಾಪನೆಗೆ ಇಚ್ಛಾಶಕ್ತಿ ಪ್ರದರ್ಶಿಸುತಿಲ್ಲ.ನಮ್ಮ ಭಾಗದ ಜನಪ್ರತಿನಿಧಿಗಳು ಒತ್ತಡ ತರುತಿಲ್ಲ.ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಈ ಭಾಗದಲ್ಲಿ ನಿರುದ್ಯೋಗ ತಾಂಡವಾಡುತ್ತದೆ.

ಕಲ್ಯಾಣ ಕರ್ನಾಟಕ ಪ್ರದೇಶ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿಯಲು ರಾಜಕೀಯ ನಾಯಕರ ಹಿತಾಸಕ್ತಿ ಕೊರತೆ ಎಂದರೆ ತಪ್ಪಾಗಲಾರದು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಲ್ಯಾಣ ನಾಡಿನ ಮೇಲಿರುವ ಕಾಳಜಿ ಮರೆಯಾದಂತೆ ಕಾಣುತ್ತದೆ.ಕಲ್ಯಾಣ ಕರ್ನಾಟಕ ಜನರಿಗೆ ಅಭಿವೃದ್ಧಿ ಕನಸು ತೊರಿಸಿ ಈಗ ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೋರಾಟದ ಕ್ರಾಂತಿ ಆದರೆ ಮಾತ್ರ ಅಭಿವೃದ್ಧಿ ಸಾಧ್ಯ.ಹೀಗಾಗಿ ಪ್ರಭಲ ಮತ್ತು ಗಟ್ಟಿಯಾಗಿ ಹೋರಾಟ ಮಾಡುವ ನಾಯಕತ್ವ ಬೇಕು.ಇದಕ್ಕೆ ಮಾಜಿ ಶಾಸಕ ಬಿ.ಆರ್.ಪಾಟೀಲ ಅವರೇ ಸೂಕ್ತವಾಗಿದ್ದು, ಪಕ್ಷಾತೀತ ಹೋರಾಟಕ್ಕೆ ಅವರು ನೇತೃತ್ವ ವಹಿಸಿದರೆ ಕನ್ನಡ ಭೂಮಿ ಜಾಗೃತಿ ಸಮಿತಿ ಬೆಂಬಲಿಸಿ ಹೋರಾಟದಲ್ಲಿ ಭಾಗವಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ ‌