ಕಲ್ಯಾಣದ ಕೈಜಾರಿದ ಕ್ರೆಡಲ್-ಫುಡ್ ಲ್ಯಾಬ್: ಡಾ. ಅಜಯ್ ಸಿಂಗ್ ಕೆಂಡಾಮಂಡಲ

ಕಲಬುರಗಿ,ಡಿ.25-ಕೆಲ ದಿನಗಳ ಹಿಂದೆಯಷ್ಟೇ ನವೀಕರಿಸಬಹುದಾದ ಇಂಧನ ಪ್ರಾದೇಶಿಕ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾಂತರಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೊಡೆತ ನೀಡಿದ್ದ ಸರ್ಕಾರ ಇದೀಗ ಕಲಬುರಗಿಯಲ್ಲಿದ್ದಂತಹ ವಿಭಾಗೀಯ ಆಹಾರ ಪ್ರಯೋಗಾಲಯವನ್ನು ಬೆಳಗಾವಿಗೆ ಸ್ಥಳಾಂತರ ಮಾಡಿರೋದು ಅಕ್ಷಮ್ಯ ಎಂದು ವಿದಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಸದರಿ ಕ್ರಮವನ್ನು ಕಟುವಾಗಿ ಖಂಡಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಕಚೇರಿಗಳು ಬರಬೇಕು ಎಂಬ ಬೇಡಿಕೆ ಇರುವಾಗಲೇ ಇದ್ದ ಕಚೇರಿಗಳನ್ನೇ ಎತ್ತಂಗಡಿ ಮಾಡುತ್ತಿರುವ ಸರ್ಕಾರದ ಕ್ರಮ ಖಂಡನೀಯ ಎಂದಿರುವ ಅವರು ಕಲಂ 371 (ಜೆ) ಅಭಿವೃದ್ಧಿ ಕೋಶ, ಕಲ್ಯಾಣ ಕರ್ನಾಟಕ ಪ್ರತ್ಯೇಕ ಸೆಕ್ರೆಟ್ರಿಯೆಟ್‍ನಂತಹ ಮಹತ್ವದ ಕಚೇರಿಗಳೇ ಇಲ್ಲಿ ಬರಲಿ ಎಂಬ ಆಗ್ರಹವಿರುವಾಗಲೇ ಇಲ್ಲಿರುವ ಕಚೇರಿಗಳನ್ನು ಸ್ಥಳಾಂತರ ಮಾಡುತ್ತಿರುವುದು ಅನ್ಯಾಯ, ಬಿಜೆಪಿ ಸರ್ಕಾರದ ಕಲ್ಯಾಣ ನಾಡಿನ ವಿರೋಧಿ ಧೋರಣೆಗೆ ಇದು ಕನ್ನಡಿ ಹಿಡಿದಿದೆ ಎಂದು ಡಾ. ಸಿಂಗ್ ಟೀಕಿಸಿದ್ದಾರೆ.
ಕಲ್ಯಾಣ ನಾಡೆಂದರೆ ಬಿಜೆಪಿಗೆ ಯಾಕೋ ಸಿಟ್ಟು ಇದ್ದಂತಿದೆ. ಅದಕ್ಕೇ ಇಲ್ಲಿನ 4 ದಶಕಗಳಿಂದ ಇದ್ದಂತಹ ಕಚೇರಿಗಳನ್ನೇ ಎತ್ತಿ ಬೇರೆಡೆ ಹಾಕುತ್ತಿದೆ. ಇದನ್ನು ನಾವೆಲ್ಲರೂ ವಿರೋಧಿಸಲೇಬೇಕು. ಸರ್ಕಾರ ಇಂತಹ ಅನ್ಯಾಯದ ಕ್ರಮಗಳನ್ನು ಬಿಟ್ಟು ಎಂದಿನಂತೆ ಕ್ರೆಡಲ್ ಕಚೇರಿ, ಆಹಾರ ಲ್ಯಾಬ್ ಕಲಬುರಗಿಯಲ್ಲೇ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.
ನಮ್ಮ ಭಾಗದ ಬಿಜೆಪಿ ಸಂಸದರ, ಉಸ್ತುವಾರಿ ಸಚಿವರು ಹಾಗೂ ಬಿಜೆಪಿ ಶಾಸಕರು ಏನು ಮಾಡುತ್ತಿದ್ದಾರೆ? ಕಚೇರಿಗಳೇ ಕೈಬಿಟ್ಟು ಹೋಗುವಾಗ ಇವರೆಲ್ಲರ ಮೌನಕ್ಕೆ ಯಾವ ಅರ್ಥ ನೀಡಲಿದೆ ಎಂಬುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು. ಇವರಿಗೆ ಕಲ್ಯಾಣದ ಅಭಿವೃದ್ಧಿ, ಜನತೆಯ ಅನುಕೂಲ ಬೇಕಿದ್ದಂತಿಲ್ಲವೆಂದು ಬಿಜೆಪಿ ಮುಖಂಡರ ಧೋರಣೆಯನ್ನು ತಮ್ಮ ಮಾತಿನಲ್ಲಿ ಖಾರವಾಗಿರ ಟೀಕಿಸಿದ್ದಾರೆ.
ಬಿಜೆಪಿ ಸರಕಾರ ಕಲ್ಯಾಣ ಕರ್ನಾಟಕ ಅದರಲ್ಲೂ ಕಲಬುರಗಿ ಜಿಲ್ಲೆಗೆ ತನ್ನ ತಾರತಮ್ಯ ನೀತಿ ಮುಂದುವರೆಸಿದೆ, ಹಿಂದಿನ ಕಾಂಗ್ರೆಸ್ ಸರಕಾರ ಕಕ ಭಾಗಕ್ಕೆ 371 (ಜೆ) ವಿಶೇಷ ಸ್ಥಾನಮಾನ ಸೇರಿದಂತೆ ಹಲವು ಯೋಜನೆಗಳನ್ನು ಹಾಗೂ ಕಚೇರಿಗಳನ್ನು ಕಕ ಭಾಗಕ್ಕೆ ನೀಡುವ ಮೂಲಕ ಈ ಭಾಗದ ಪ್ರಾದೇಶಿಕ ಅಮತೋಲನವನ್ನು ನಿವಾರಿಸಲು ಮಾರ್ಗ ರೂಪಿಸಿತ್ತು. ಇದೀಗ ಬಿಜೆಪಿ ಸರ್ಕಾರ ಅದನ್ನೆಲ್ಲ ವಿರೋಧಿಸುವಂತಹ ನೀತಿ ರೂಪಿಸುತ್ತಿದೆ ಎಂದೂ ದೂರಿದ್ದಾರೆ.
ಕೆಕೆಆರ್‍ಡಿಬಿ ಅನುದಾನ ಬರುತ್ತಿಲ್ಲ, ತೊಗರಿ ರೈತರಿಗೆ ಪ್ರೋತ್ಸಾಹ ಧನವಿಲ್ಲದೆ ಖರೀದಿಗೆ ಮುಂದಾಗುತ್ತಿದ್ದಾರೆ, ಇಂತಹ ಅನ್ಯಾಯಗಳೊಂದಿಗೆ ಇದೀಗ ಸಾಲುಸಾಲು ಕಚೇರಿಗಳು ಕಲ್ಯಾಣ ನಾಡನ್ನು ಬಿಟ್ಟು ಹೋಗುತ್ತಿವೆ. ಕಲ್ಯಾಣದ ಹೆಸರು ಬದಲಾಯತೆ ವಿನಹಃ ಪ್ರಗತಿಯಾಗುತ್ತಿಲ್ಲ. ಬಿಜೆಪಿ ಸರ್ಕಾರದ ಇಂತಹ ನೀತಿಗಳಿಂದಾಗಿ ಕಲ್ಯಾಣ ಬರೀ ಹೆಸರಿಗೆ ಮಾತ್ರ ಎಂಬತಾಗಲಿದೆಯೇ ಹೊರತು ವಾಸ್ತವದಲ್ಲಿ ಏನೂ ಆಗುವುದಿಲ್ಲವೆಂದು ಡಾ. ಜಯ್ ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ..