ಕಲ್ಯಾಣದ ಕಲ್ಯಾಣವನ್ನೇ ಮರೆತ ಬಜೆಟ್: ಹರ್ಷಾನಂದ ಗುತ್ತೇದಾರ ವ್ಯಂಗ್ಯ

ಕಲಬುರಗಿ:ಫೆ.17:ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿರುವ ಬಜೆಟ್ ಜನಪರವಾಗಿರದೇ ಕೇವಲ ಒಂದು ವರ್ಗವನ್ನು ಒಲೈಸುವ ಬಜೆಟ್ ಆಗಿದೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಬಜೆಟ್ ಇದು ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿಗಳು ಘೋಷಣೆಗಳ ಭರದಲ್ಲಿ ಕಲ್ಯಾಣ ಕರ್ನಾಟಕದ ಪ್ರಗತಿಯನ್ನೇ ಮರೆತಿದ್ದಾರೆ ಅಲ್ಲದೇ ಈ ಹಿಂದೆ ಬಿಜೆಪಿ ಸರ್ಕಾರ ಘೋಷಿಸಿದ್ದ 5 ಸಾವಿರ ಕೋಟಿಯನ್ನೇ ಮತ್ತೆ ಪ್ರಸ್ತಾಪಿಸಿ ಈ ಭಾಗದ ಜನರ ಕಿವಿಯ ಮೇಲೆ ಹೂವಿಡಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿರುವ ಬಜೆಟ್ ರೈತ ವಿರೋಧಿ, ಅಭಿವೃದ್ಧಿ ವಿರೋಧಿ ಬಜೆಟ್ ಆಗಿದೆ ಇದರಿಂದ ನಿರೀಕ್ಷಿತ ಪ್ರಗತಿ ಸಾಧ್ಯವಿಲ್ಲ ‘ಸಿದ್ದರಾಮಯ್ಯನವರು ಒಂದು ಸಮುದಾಯದ ತುಷ್ಟೀಕರಣಕ್ಕಾಗಿ ಲಕ್ಷಾಂತರ ಕೋಟಿ ಸಾಲ ಮಾಡಿ ಕನ್ನಡಿಗರನ್ನು ಸಂಪೂರ್ಣವಾಗಿ ಮುಳುಗಿಸಿದ್ದಾರೆ. ಸಾಲದ ಸುಳಿಗೆ ಕರುನಾಡು ಸಿಲುಕಿದೆ. ಕರ್ನಾಟಕ ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಬಿದ್ದಿದೆ. ಆರ್ಥಿಕತೆ ಹಳ್ಳ ಹಿಡಿದಿದೆ’ ಎಂದು ತಿಳಿಸಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಾಲ ಮಾಡಿರುವ ಆರ್ಥಿಕ ವರ್ಷ ಇದಾಗಿದೆ. ಸರ್ಕಾರ ಮಾಡಿರುವ ಸಾಲ ಉತ್ಪಾದಕ ವಲಯಕ್ಕೆ ಪೂರಕವಾಗಿರದೇ, ಅನುತ್ಪಾದಕ ವಲಯಕ್ಕೆ ಮೀಸಲಾಗಿದೆ. ಆದಾಯವನ್ನು ಹೆಚ್ಚಿಸಲು ಯಾವುದೇ ಉಪಕ್ರಮಗಳನ್ನು ಘೋಷಿಸದೇ, ಕೇವಲ ಸಾಲದ ಹೊರೆಯ ಹೇರಿಕೆಯನ್ನು ಜನಸಾಮಾನ್ಯರ ಮೇಲೆ ಹೇರಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.