ಕಲ್ಯಾಣಕರ್ನಾಟಕ ಉತ್ಸವ ಸಚಿವ ಆನಂದ್ ಸಿಂಗ್ ರಾಷ್ಟ್ರ ಧ್ವಜಾರೋಹಣ ಜಿಲ್ಲೆಯ ಅಭಿವೃದ್ದಿಗೆ 598.60 ಕೋಟಿ ರೂ ಅನುದಾನ

ಬಳ್ಳಾರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಜಿಲ್ಲೆಗೆ 2013-14ನೇ ಸಾಲಿನಿಂದ 2019-20 ಸಾಲಿನವರೆಗೆ 862.54 ಕೋಟಿ ರೂಪಾಯಿ ಅನುದಾನ ಹಂಚಿಕೆಯಾಗಿದ್ದು. ಒಟ್ಟು 3341 ಕಾಮಗಾರಿಗಳನ್ನು ಕೈಗೆತ್ತಿಕೊಂಡು 2904 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು. ಇದಕ್ಕೆ 598.60 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆಘಿರುವ ಅರಣ್ಯ ಸಚಿವ ಆಣಂದ್ ಸಿಂಗ್ ಹೇಳಿದ್ದಾರೆ.
ಅವರು ಇಂದು ಬಳ್ಳಾರಿ ನಗರದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕಮ್ರದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ. ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯಿಂದ ಪರೇಡ್ ವಂದನೆ ಸ್ವೀಕರಿಸಿ. ಬಳಿಕ ನಿಜಾಮರ ಆಡಳಿತದಿಂದ ಕಲ್ಯಾಣ ಕರ್ನಾಟಕ ವಿಮೋಚನೆಗೆ ಕಾರಣರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವರು ಕಲ್ಯಾನ ಕರ್ನಾಟಕದ ವಿನೋಚನಾ ಹೋರಾಟದ ಬಗ್ಗೆ ವಿವರಿಸುತ್ತ ರಜಾಕಾರರ ಕಪಿಮುಷ್ಟಿಯಲ್ಲಿ ಸಿಲುಕಿದ್ದ ನಿಜಾಮರ ಆಡಳಿತ ಪ್ರದೇಶವನ್ನು ಉಕ್ಕಿನ ಮನುಷ್ಯ ಸರ್ದಾರ ವಲ್ಲಭಬಾಯಿ ಪಾಟೀಲರ ದಿಟ್ಟತನದಿಂದ ಕೈಗೊಂಡ ಪೊಲೀಸ್ ಕಾರ್ಯಾಚರಣೆಯಲ್ಲಿ ನಿಜಾಮರು ಶರಣಾಗಿ ಭಾರತದ ಒಕ್ಕೂಟಕ್ಕೆ ಸೇರಿದ್ದರಿಂದ, 1948 ಸೆಪ್ಟೆಂಬರ್ 17ರಂದು ಈ ಭಾಗಗಳು ರಾಜ್ಯದ ಇತರ ಭಾಗಗಳಂತೆ ಸ್ವತಂತ್ರವಾಗಿ ಉಸಿರಾಡಲು ಸಾಧ್ಯವಾಯಿತು. ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ, ಕಲೆ, ಧರ್ಮ ಮೊದಲಾದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ ಈ ಪ್ರದೇಶ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥತಿಯನ್ನು ಸಮರ್ಥವಾಗಿ ಎದುರಿಸಿದೆ ಎಂದು ಹೇಳಿದ ಸಚಿವರು. ಜಿಲ್ಲೆಯ ಅಭಿವೃದ್ದಿಗೆ ಕೈ ಗೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಮಾತನಾಡಿ ಶೈಕ್ಷಣಿಕ ಅಸಮಾನತೆ ಹೋಗಲಾಡಿಸಲು ಸಂವಿಧಾನ ತಿದ್ದುಪಡಿಯ 371 ಜೆ ನೆರವಾಗಿಗಿದೆ. ಆದರೆ ಆರ್ಥಿಕ ಅಸಮಾನತೆ ಹೋಗಲಾಡಿಸಲು ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಅಗತ್ಯ ಅನುದಾನ ನಮ್ಮ ಪ್ರದೇಶಕ್ಕೆ ದೊರೆಯುತ್ತಿಲ್ಲ. ಕಲ್ಬುರ್ಗಿ ಪ್ರದೇಶದದಲ್ಲಿ ಹೆಚ್ಚಿನದಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ಕೊಪ್ಪಳ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಿಗಾಗಿಯೇ ಕಲ್ಯಾಣಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಅರ್ಧ ಅನುದಾನ ಮೀಸಲಿಟ್ಟು ಅದರ ನಿರ್ವಹಣೆಗೆ ಪ್ರತ್ಯೇಕ ಕಚೇರಿ ಆರಂಭಿಸಬೇಕು ಎಂದರು.
ಕಲ್ಯಾಣ ಕರ್ನಾಟಕದ ಹೋರಾಟ ಮತ್ತು ಹೈದರಾಬಾದ್ ನಿಜಾಮರಿಂದ ವಿಮೋಚನೆ ಹೊಂದಿ ಭಾರತಕ್ಕೆ ಸೇರಿರುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸದಲ್ಲಿ ಹೈಕಾ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಸಿರಿಗೆರೆ ಪನ್ನರಾಜ್. 1782 ರಿಂದ ಬಳ್ಳಾರಿ ಜಿಲ್ಲೆ ಯಾರ ಯಾರ ಆಳ್ಬಿಕೆಯಲ್ಲಿ ಇತ್ತು ಎಂಬುದನ್ನು ವಿವರಿಸಿ. ಹೈದ್ರಾಬಾದ್ ಕರ್ನಾಟಕದಲ್ಲಿ ಬಳ್ಳಾರಿಯನ್ನು ಸರಕಾರ ಕೈಬಿಟ್ಟಾಗ ನಡೆಸಿದ ಹೋರಾಟವನ್ನು ತಿಳಿಸಿಕೊಟ್ಟರು.
ಸಂವಿಧಾನದ 371 ಜೆ ಕಲಂ ನಿಂದ ಈ ಪ್ರದೇಶದ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಂಜಿನೀಯರಿಂಗ್ ಅಡ್ಮಿಷನ್ ದೊರೆತಿದೆ. ಇದು ಶೈಕ್ಷಣಿಕವಾಗಿ ಸಹಕಾರಿಯಾಗಿದೆ. ಆದರೆ ಉದ್ಯೋಗ ನೀಡಿಕೆಯಲ್ಲಿ ಇನ್ನು ಸಂಪೂರ್ಣ ಸಹಕಾರಿಯಾಗಿಲ್ಲವೆಂದು ಉದಾಹರಣೆ ಸಮೇತ ವಿವರಿಸಿದರು.
ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಗರಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಪದವಿ ಕಾಲೇಜು ಆರಂಭಿಸಲು ನಡೆಸಿದ ಹೋರಾಟಕ್ಕೆ ಸರ್ಕಾರ ಈವರೆಗೆ ಸ್ಪಂದಿಸದೇ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ನೀಡುವ ಅನುದಾನದ ಬಗ್ಗೆ ಯೋಜನೆಗಳನ್ನು ರೂಪಿಸಿಲು ಜಿಲ್ಲೆಯ ಜನಪ್ರತಿನಿಧಿಗಳ ಸಭೆಯನ್ನು ಕನಿಷ್ಟ ಮೂರು ತಿಂಗಳಿಗೆ ಒಮ್ಮೆಯಾದರೂ ಕರೆದು ಚರ್ಚಿಸಬೇಕು ಎಂದರು. ಅಭಿವೃದ್ದಿಗೆ ಎಂದು ಮಂಡಳಿ ಮಾಡಿದೆ. ಅದಕ್ಕೆ ಅಧ್ಯಕ್ಷರಿದ್ದಾರೆ. ಆದರೆ ಕಳೆದ ಆರು ವರ್ಷಗಳಿಂದ ಖಾಯಂ ಕಾರ್ಯದರ್ಶಿ ಇಲ್ಲ. ಸದ್ಸ್ಯರ ನೇಮಕವೇ ಆಗಿಲ್ಲ ಎಂದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ, ಎಸ್ಪಿ ಸೈದುಲ ಅಡಾವತ್ ಮೊದಲಾದವರು ಇದ್ದರು.
ದೊಡ್ಡ ಬಸವಗವಾಯಿ ಮತ್ತು ಸಂಗಡಿಗರಿಂದ ನಾಡಗೀತೆ, ಪ್ರಸ್ತುತ ಪಡಿಸಲಾಯಿತು. ವಿನೋದ್ ಕಾರ್ಯಕ್ರಮ ನಿರೂಪಿಸಿದರೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿದೇಶಕರು ಸ್ವಾಗತಿಸಿದರು.
ಕೋವಿಡ್ ಕಾರಣದಿಂದ ಶಾಲಾ ಮಕ್ಕಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ. ಅಧಿಕಾರಿಗಳು, ವಿವಿಧ ಇಲಾಖೆಯ ಸಿಬ್ಬಂದಿ ಪೊಲೀಸರು ಮತ್ತು ಮಾಧ್ಯಮದವರೇ ಸಮಾರಂಭಕ್ಕೆ ಸಾಕ್ಷಿಯಾಗಿದ್ದರೇ ಹೊರತು ಸಾರ್ವಜನಿಕರು ಇರಲಿಲ್ಲ.