ಕಲ್ಮಠ ವಿದ್ಯಾಸಂಸ್ಥೆಯ ವತಿಯಿಂದ ರಾಷ್ಟ್ರೀಯ ರೈತ ದಿನಾಚರಣೆ

ಮಾನ್ವಿ.ಡಿ.೨೪- ಪಟ್ಟಣದ ಕಲ್ಮಠ ವಿದ್ಯಾಸಂಸ್ಥೆಯ ವತಿಯಿಂದ ಶನಿವಾರದಂದು ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು.
ಕಲ್ಮಠ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಉಳುಮೆ ಮಾಡುವ, ಬತ್ತ ನಾಟಿ ಮಾಡುವುದು, ಜೋಪಡಿಯಲ್ಲಿ ರೊಟ್ಟಿ ಮಾಡುವುದು, ಬಾವಿಯಿಂದ ನೀರು ಸೇದುವುದು, ಬತ್ತ ರಾಶಿ ಮಾಡುವುದು, ಕಟ್ಟಿಗೆ ಕಡಿಯುವುದು, ಕಾಳುಗಳನ್ನು ಹಸನು ಮಾಡುವುದು, ಧಾನ್ಯಗಳನ್ನು ಕುಟ್ಟುವುದು, ಬೀಸುವುದು ಸೇರಿದಂತೆ ರೈತಾಪಿ ಜೀವನದ ವೈವಿಧ್ಯಮಯ ಬದುಕಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಸಜ್ಜುಗೊಳಿಸಲಾಗಿತ್ತು ಇಡೀ ಹಳ್ಳಿ ಸೂಗಡು ಕಲ್ಮಠ ಸಂಸ್ಥೆಯ ಆವರಣದಲ್ಲಿ ಅನಾವರಣಗೊಂಡಿತ್ತು.
ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಕಲ್ಮಠ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿ ಹಗಲು, ರಾತ್ರಿ ಬೆವರು ಸುರಿಸಿ ನಮ್ಮೆಲ್ಲರ ಹಸಿವು ನೀಗಿಸುವ ರೈತರ ಬದುಕು ಹಸನಾಗಲು ವಿದ್ಯಾರ್ಥಿಗಳೆಲ್ಲರೂ ಗಿಡ, ಮರಗಳನ್ನು ಬೆಳೆಸಬೇಕು. ಯಾಕೆಂದರೆ ಮರವಿದ್ದರೆ ಮಳೆ, ಮಳೆಯಿದ್ದರೆ ಬೆಳೆ, ಬೆಳೆಯಿದ್ದರೆ ಬದುಕು ಎಂದ ಪರಮ ಪೂಜ್ಯರು ಪ್ರಾಥಮಿಕ ಶಾಲೆಯ ಸಮಸ್ತ ಸಿಬ್ಬಂದಿ ವರ್ಗವು ಈ ಕಾರ್ಯಕ್ರಮ ತುಂಬಾ ಅಚ್ಚು ಕಟ್ಟಾಗಿ ಆಯೋಜಿಸಿರುವುದನ್ನು ಮುಕ್ತ ಕಂಠದಿಂದ ಪ್ರಶಂಸಿದರು.
ಮಾಜಿ ಪ್ರಧಾನ ಮಂತ್ರಿ “ಚೌದರಿ ಚರಣ್ ಸಿಂಗ್ ಅವರ ಜೀವನ ಮತ್ತು ಸಾಧನೆ” ಕುರಿತು ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಅನ್ನಪೂರ್ಣ ಅವರು ವಿಶೇಷ ಉಪನ್ಯಾಸ ನೀಡಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ , ಕಾವೇರಿ, ಭಾಗ್ಯ, ವೀರೇಶ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕ ಎಂ.ಎಂ.ಹಿರೇಮಠ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ನರಸಿಂಹಲು ಸ್ವಾಗತಿಸಿದರು, ಶಿಕ್ಷಕ ರಾಘವೇಂದ್ರ ಕೇಳಗೇರಿ ವಂದಿಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ ಕುರ್ಡಿ ಮಾತನಾಡಿ, ದೇಶದ ಆಹಾರ ಭದ್ರತೆಗೆ ಕಾರಣವಾದ ಅನ್ನದಾತರ ಬದುಕು ಬಂಗಾರವಾಗಲು, ರೈತ ಬೆಳೆದ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆ ಸರಕಾರ ನೀಡಬೇಕು ಎಂದರು.
ಪಶ್ಚಿಮ ವಲಯ ಸಿ.ಆರ್‌ಪಿ ಶ್ರೀಧರ ದೇಸಾಯಿ, ರೈತ ಶಿವಯ್ಯಸ್ವಾಮಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ ಕಮತರ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪ್ರಭಯ್ಯ ಸ್ವಾಮಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್.ಪಾಟೀಲ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಸಿದ್ದನಗೌಡ ಪಾಟೀಲ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.