ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್‍ಗೆ ದ.ಕ.ಸಂಘ ಹರ್ಷ

ಕಲಬುರಗಿ,ಮೇ 19: ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನ ಇಳಿಯುವಿಕೆ (ನೈಟ್ ಲ್ಯಾಂಡಿಂಗ್) ಗೆ ವಿಮಾನಯಾನ ಮಹಾನಿರ್ದೇಶಕರು ಡಿಜಿಸಿಎ ಹಸಿರು ನಿಶಾನೆ ತೋರಿಸಿದ್ದು ಇದು ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ ಎಂದು ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ತಿಳಿಸಿದ್ದಾರೆ. ಕಲ್ಬುರ್ಗಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ಬಹುದಿನಗಳ ಬೇಡಿಕೆ ಇದ್ದು ಇದೀಗ ನೈಟ್ ಲ್ಯಾಂಡಿಂಗ್ ಸೌಲಭ್ಯ ಸಿಕ್ಕಿರುವುದು ಈ ಭಾಗದಲ್ಲಿ ಆರ್ಥಿಕ ಬೆಳವಣಿಗೆಗೆ ಉತ್ತೇಜನವಾಗಲಿದೆ ಮತ್ತು ದೇಶದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವುದರ ಮೂಲಕ ಪ್ರಯಾಣಿಕರಿಗೆ ವರದಾನವಾಗಲಿದೆ. ದಿನದ 24 ಗಂಟೆಗಳಲ್ಲಿ ಸಂಚಾರ ಸೌಲಭ್ಯಕ್ಕೆ ಈ ವಿಮಾನ ನಿಲ್ದಾಣ ಮುಖ ವಾಗುವುದು ವಾಣಿಜ್ಯ ವ್ಯಾಪಾರ ವೃತ್ತಿಗೆ ಅನುಕೂಲವಾಗಲಿದೆ ಹಾಗೂ ಮಹಾನ್ ನಗರಗಳೊಂದಿಗೆ ನೇರ ಸಂಪರ್ಕಕ್ಕೆ ಅವಕಾಶ ಕಲ್ಪಿಸಿದಂತಾಗಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಔಷಧ ಪಾರ್ಕ್ ಕಾರ್ಯಾರಂಭ ಹೊಂದಿದ್ದು
ಟೆಕ್ಸ್ ಟೈಲ್ ಪಾರ್ಕ ಗೆ ಗ್ರೀನ್ ಸಿಗ್ನಲ್ ದೊರಕಿದೆ. ಇದರಿಂದ ಈ ಭಾಗದ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ಸಿಗಲಿದೆ. ಜೊತೆಗೆ ಮಹಾನಗರಗಳಾದ ಮಂಗಳೂರು ಮುಂಬೈ ,ದೆಹಲಿ, ಹೈದರಾಬಾದ್, ಗೋವಾ,ಪುಣೆ ಮುಂತಾದವುಗಳಿಗೆ ಸುಲಭ ಸಂಪರ್ಕ ಸಾಧ್ಯವಾಗಲಿದೆ.
ಕಲ್ಬುರ್ಗಿಯಿಂದ ಮಂಗಳೂರಿಗೆ ಸುಮಾರು ಐದಾರು ಬಸ್ಸುಗಳು ನಿತ್ಯ ಸಂಚರಿಸುತ್ತಿದ್ದು 14ರಿಂದ 16 ತಾಸು ಪ್ರಯಾಣ ವೇಳೆ ತಗಲುತ್ತಿದೆ . ಇದನ್ನು ಕಡಿಮೆ ಮಾಡಲು ಮತ್ತು ಪ್ರವಾಸೋದ್ಯಮ ಹಾಗೂ ಶಿಕ್ಷಣದ ಹಬ್ ಆಗಿರುವ ಮಂಗಳೂರು ಸೇರಿದಂತೆ ಕರಾವಳಿ ಭಾಗಕ್ಕೆ ನೇರ ಸಂಪರ್ಕ ಒದಗಿಸಲು ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಪೂರಕವಾಗಲಿದೆ. ಭಾಲ್ಕಿ ಬೀದರ್, ಸೋಲಾಪುರ ಬಸವಕಲ್ಯಾಣ, ಕಲಬುರ್ಗಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಂದ ಶಿಕ್ಷಣಕ್ಕಾಗಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಅವರ ಪೆÇೀಷಕರು ನಿತ್ಯ ಮಂಗಳೂರಿಗೆ ಪ್ರಯಾಣಿಸುತ್ತಿದ್ದು ವಿಮಾನ ಸಂಚಾರ ಪ್ರಾರಂಭವಾದಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ಈಗಾಗಲೇ ದಕ್ಷಿಣ ಕನ್ನಡ ಸಂಘವು ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ಸಚಿವರಾದ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಪತ್ರ ಬರೆದಿದ್ದು ಈ ಬಗ್ಗೆ ಕೇಂದ್ರ ಸಚಿವರು ಪ್ರತಿಕ್ರಿಯಿಸಿ ಏರ್ ಲೈನ್ ಸಂಸ್ಥೆ ಗಳೊಂದಿಗೆ ಮಾತುಕತೆ ನಡೆಸಿ ಶೀಘ್ರದಲ್ಲೇ ಮಂಗಳೂರಿಗೂ ವಿಮಾನ ಸಂಚಾರ ಪ್ರಾರಂಭಿಸುವುದಾಗಿ ರಾಜ್ಯಸಭಾ ಸದಸ್ಯರಾದ ಡಾ. ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಪತ್ರ ಬರೆದು ಭರವಸೆ ನೀಡಿದ್ದರು.ರಾಜ್ಯ ಸಭಾ ಸದಸ್ಯರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಈ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆದಿದ್ದು ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ .ಮಂಗಳೂರಿನ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಹಾಗೂ ಕಲಬುರ್ಗಿಯ ಸಂಸದರಾದ ಡಾ. ಉಮೇಶ್ ಜಾಧವ್ ಅವರು ಕೇಂದ್ರ ಸಚಿವರಿಗೆ ಪತ್ರ ಬರೆದು ಮಂಗಳೂರಿಗೆ ಶೀಘ್ರದಲ್ಲೇ ವಿಮಾನಯಾನ ಪ್ರಾರಂಭಿಸುವಂತೆ ಕೋರಿದ್ದರು. ನೈಟ್ ಲ್ಯಾಂಡಿಂಗ್ ಶೀಘ್ರದಲ್ಲೇ ಪ್ರಾರಂಭವಾಗುವುದರಿಂದ ಕಲ್ಬುರ್ಗಿ ವಿಮಾನ ನಿಲ್ದಾಣ ನಿರ್ದೇಶಕರು ಕೂಡ ಈ ಬಗ್ಗೆ ಸಂಬಂಧಪಟ್ಟ ಏರ್ ಲೈನ್ ಸಂಸ್ಥೆಗಳಿಗೆ ಮನವಿ ಮಾಡಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಭರವಸೆ ನೀಡಿದ್ದು ಸದ್ಯದಲ್ಲೇ ಕರಾವಳಿಯ ಜನರ ಬಹುದಿನಗಳ ಬೇಡಿಕೆಯಾದ ವಿಮಾನಯಾನ ಸಂಪರ್ಕ ಕೈಗೂಡುವ ಆಸೆ ಇದೆ ಎಂದು ಡಾ. ಪೆರ್ಲ ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.ರಾತ್ರಿ ವಿಮಾನ ಇಳಿಯುವ ಸೌಲಭ್ಯ ಕಲ್ಪಿಸಿದ ಕೇಂದ್ರ ವಿಮಾನಯಾನ ಸಚಿವರು ಹಾಗೂ ಮಹಾನಿರ್ದೇಶಕರಿಗೆ ದಕ್ಷಿಣ ಕನ್ನಡ ಸಂಘವು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದೆ. ಜೊತೆಗೆ ಈ ಪ್ರಯತ್ನಕ್ಕೆ ಕಾರಣಿಭೂತರಾದ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರಿಗೆ ಅಭಿನಂದನೆ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ. ನೈಟ್ ಲ್ಯಾಂಡಿಗ್ ಪ್ರಾರಂಭವಾಗುವ ಸಂದರ್ಭದಲ್ಲಿಕಲಬುರಗಿ ವಿಮಾನ ನಿಲ್ದಾಣದಲ್ಲಿ ಸೆಟಲೈಟ್ ಬಸ್, ಟ್ಯಾಕ್ಸಿ ಸೇವೆ ಹಾಗೂ ಉಪಹಾರ ಕೇಂದ್ರಗಳನ್ನು ತೆರೆದು ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯವನ್ನು ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.