ಕಲ್ಬುರ್ಗಿ- ಬೆಂಗಳೂರು ಸಾಪ್ತಾಹಿಕ ರೈಲಿಗೆ ಮಾ. 9 ರಂದು ಹಸಿರು ನಿಶಾನೆ: ಡಾ. ಉಮೇಶ್ ಜಾಧವ್

ಕಲಬುರಗಿ:ಮಾ.8: ಬಹು ದಿನಗಳ ಬೇಡಿಕೆಯಾದ ಕಲ್ಬುರ್ಗಿಯಿಂದ ಬೆಂಗಳೂರು (ಬೈಯ್ಯಪ್ಪನಹಳ್ಳಿ )ಮಧ್ಯೆ ಸಂಚಾರ ಪ್ರಾರಂಭಿಸುವ ಸಾಪ್ತಾಹಿಕ ರೈಲಿಗೆ ಇಂದು (ಮಾರ್ಚ್ 9 ರಂದು) ಸಾಯಂಕಾಲ 5:10 ನಿಮಿಷಕ್ಕೆ ಹಸಿರು ನಿಶಾನೆ ತೋರಿಸಿ ಸಂಚಾರ ಪ್ರಾರಂಭಿಸಲಾಗುವುದು ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ ಹೇಳಿದರು.
ನೂತನ ರೈಲು ಚಾಲನಾ ಸಮಾರಂಭಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶುಭ ಕೋರಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಸಂಸದರು ಹೇಳಿದರು. ಈಗಾಗಲೇ ಈ ಬಗ್ಗೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಶೋಲಾಪುರ ವಿಭಾಗದ ಹಿರಿಯ ವಾಣಿಜ್ಯ ವ್ಯವಸ್ಥಾಪಕರಾದ ಯೋಗೀಶ್ ಪಾಟೀಲ್ ಅವರು ತಿಳಿಸಿರುವುದಾಗಿ ಹೇಳಿದರು.
ಕಲ್ಬುರ್ಗಿಯಿಂದ ಸಾಯಂಕಾಲ ಸರಿಯಾಗಿ 5:10 ಕ್ಕೆ ಹೊರಡುವ ಕಲ್ಬುರ್ಗಿ- ಬೈಯ್ಯಪ್ಪನಹಳ್ಳಿ ರೈಲು ಸಂಖ್ಯೆ 01111 ಮರುದಿನ ಬೆಳಿಗ್ಗೆ 4.15ಕ್ಕೆ ಬೈಯ್ಯಪ್ಪನ ಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ. ಶಹಾಬಾದ್, ವಾಡಿ, ಯಾದಗಿರಿ,ರಾಯಾಚೂರ್ ಮುಂತಾದಡೆ ನಿಲುಗಡೆ ಸೌಲಭ್ಯವಿದೆ.
ಪ್ರಸ್ತುತ ರೈಲು ಏಪ್ರಿಲ್ 5ರಿಂದ ವಾರಕ್ಕೆ ಮೂರು ದಿನ ಸಂಚಾರ ನಡೆಸಲು ರೈಲು ಇಲಾಖೆ ಒಪ್ಪಿಗೆ ನೀಡಿದೆ.ಈ ಭಾಗದ ಭಾಗದ ಜನರಿಗೆ ಬೆಂಗಳೂರಿಗೆ ಪ್ರಯಾಣಿಸಲು ರೈಲು ಅನುಕೂಲಕರ ವಾಗಿದ್ದು ಪ್ರಗತಿಗೆ ದೊಡ್ಡ ಉತ್ತೇಜನ ನೀಡಲಿದೆ. ಈ ರೈಲಿನಲ್ಲಿ ಹೆಚ್ಚಿನ ಪ್ರಯಾಣಿಕರು ಸಂಚಾರ ನಡೆಸಿ ರೈಲು ನಿತ್ಯ ಸಂಚರಿಸುವಂತಾಗಲು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಜಾಧವ್ ಹೇಳಿದರು.
ಕೇಂದ್ರ ಸರಕಾರವು ಕಲಬುರಗಿಯಿಂದ ಬೆಂಗಳೂರಿಗೆ ಸಂಚರಿಸಲು ವಂದೇ ಭಾರತ್ ರೈಲು ಸೌಲಭ್ಯವನ್ನು ಕೂಡ ನೀಡಿದ್ದು ಮಾರ್ಚ್ 12ರಂದು ಇದನ್ನು ಪ್ರಧಾನಿಯವರು ಉದ್ಘಾಟಿಸಲಿದ್ದಾರೆ.
ಕಲ್ಬುರ್ಗಿ ಜನತೆಯ ಬಹು ದಿನಗಳ ಕನಸನ್ನು ನನಸು ಮಾಡಿದ ಪ್ರಧಾನಮಂತ್ರಿಯವರಿಗೆ ಮತ್ತು ರೈಲ್ವೆ ಖಾತೆಯ ಸಚಿವರಾದ ಅಶ್ವಿನಿ ವೈಷ್ಣವ ಅವರಿಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸುದಾಗಿ ಹೇಳಿದರು.
ನೂತನ ರೈಲಿಗೆ ಚಾಲನೆ ನೀಡುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಐತಿಹಾಸಿಕ ನಿರ್ಣಯ ಕೈಗೊಂಡ ಕೇಂದ್ರ ಸರಕಾರಕ್ಕೆ ಶುಭಾಶಯ ಕೋರಲು ಹಾಜರಿರುವಂತೆ ವಿನಂತಿಸಿದ್ದಾರೆ.